ಸಾರಾಂಶ
ಬೆಂಗಳೂರು : ಬಿಎಂಟಿಸಿ ಬಸ್‌ಗಳಲ್ಲಿ ಆನ್‌ಲೈನ್ ಪೇಮೆಂಟ್ ಆ್ಯಪ್‌ಗಳ ಕ್ಯೂಆರ್ ಕೋಡ್ ಮೂಲಕ ಪ್ರಯಾಣಿಕರು ಟಿಕೆಟ್ ಮೊತ್ತ ಪಾವತಿಸುವ ಸಮರ್ಪಕವಾಗಿ ಜಾರಿಗೆ ಮುಂದಾಗಿರುವ ಅಧಿಕಾರಿಗಳು, ಅದಕ್ಕಾಗಿ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಮೊತ್ತ ಸ್ವೀಕಾರ ಕುರಿತು ನಿರ್ವಾಹಕರಿಗೆ ತರಬೇತಿ ನೀಡಲು ಚಿಂತನೆ ನಡೆಸಿದ್ದಾರೆ.
ಬಿಎಂಟಿಸಿಯಲ್ಲಿ ಹಲವು ತಿಂಗಳ ಹಿಂದಿನಿಂದಲೇ ಕ್ಯೂಆರ್ ಕೋಡ್ ಮೂಲಕವೇ ಪ್ರಯಾಣಿಕರಿಗೆ ಪ್ರಯಾಣ ದರ ಪಾವತಿಗೆ ಅವಕಾಶ ನೀಡಲಾಗಿದೆ ಯಾದರೂ, ಅದರ ಸಮರ್ಪಕ ಬಳಕೆಯಾಗುತ್ತಿಲ್ಲ. ಅಲ್ಲದೆ, ನಿರ್ವಾಹಕರು ಕೂಡ ಆ ಬಗ್ಗೆ ಸಂಪೂರ್ಣವಾಗಿ ಅದರ ಬಗ್ಗೆ ಅರಿವು ಹೊಂದಿಲ್ಲ. ಹೀಗಾಗಿ ಆನ್‌ಲೈನ್ ಪೇಮೆಂಟ್ ಆ್ಯಪ್‌ಗಳ ಮೂಲಕ ಟಿಕೆಟ್ ಮೊತ್ತ ಪಡೆಯುವ ವ್ಯವಸ್ಥೆ ಅನುಷ್ಠಾನಗೊಂಡಿಲ್ಲ.
ಜತೆಗೆ ಪೇಮೆಂಟ್ ಆ್ಯಪ್‌ಗಳ ಮೂಲಕ ಹಣ ಪಡೆದು ಟಿಕೆಟ್ ನೀಡಲು ನಿರ್ವಾಹಕರು ನಿರಾಕರಿಸುತ್ತಿರುವ ಕುರಿತು ಪ್ರಯಾಣಿಕರಿಂದ ದೂರುಗಳು ಬರುತ್ತಿವೆ. ಹೀಗಾಗಿ ನಿರ್ವಾಹಕರಿಗೆ ಪೇಮೆಂಟ್ ಆ್ಯಪ್‌ಗಳ ಮೂಲಕ ಪ್ರಯಾಣಿಕರಿಂದ ಟಿಕೆಟ್ ಮೊತ್ತ ಪಡೆಯುವ ಕುರಿತಂತೆ ತರಬೇತಿ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಆ ಕುರಿತು ಬಿಎಂಟಿಸಿಯ ಎಲ್ಲ ವಿಭಾಗದ ನಿಯಂತ್ರಣಾಧಿಕಾರಿಗಳಿಗೆ ಪತ್ರದ ಮೂಲಕ ಸೂಚನೆ ನೀಡಿರುವ ಮುಖ್ಯ ಸಂಚಾರ ವ್ಯವಸ್ಥಾಪಕರು, ಪೇಮೆಂಟ್ ಆ್ಯಪ್‌ಗಳ ಮೂಲಕ ಟಿಕೆಟ್ ಮೊತ್ತ ಪಡೆಯುವ ಕುರಿತು ನಿರ್ವಾಹಕರಿಗೆ ಸೂಕ್ತ ತರಬೇತಿ ನೀಡುವಂತೆ ತಿಳಿಸಿದ್ದಾರೆ.