ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಕಂದವಾರ ಕೆರೆಯ ಏರಿಯ ಪಕ್ಕದಲ್ಲಿನ ಕಂದವಾರ ಬಾಗಿಲಿನಿಂದ ಕಂದವಾರ ವಾರ್ಡ್, ಮುದ್ದೇನಹಳ್ಳಿ ಮತ್ತು ದೊಡ್ಡಬಳ್ಳಾಪುರಕ್ಕೆ ಸಂಪರ್ಕ ಬೆಸೆಯುವ ರಸ್ತೆ ಸದಾ ಜಲಾವೃತವಾಗಿ ಹಳ್ಳಕೊಳ್ಳಗಳಿಂದ ಕೂಡಿದ್ದು, ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದಾಗಿ ವಾಹನ ಸವಾರರು ನಿತ್ಯ ನರಕ ಅನುಭವಿಸುವಂತಾಗಿದೆ.ರಸ್ತೆಯುದ್ದಕ್ಕೂ ಗುಂಡಿಗಳು, ಅವುಗಳಲ್ಲಿ ಸಂಗ್ರಹವಾಗಿರುವ ಕೆಮ್ಮಣ್ಣಿನ ನೀರು. ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿರುವ ಜಲ್ಲಿಕಲ್ಲು, ರಸ್ತೆ ಮಧ್ಯೆಯೇ ಕೆಸರಿನ ರಾಡಿ ಹರಡಿಕೊಂಡಿದೆ.
ಎಚ್‌ಎನ್ ವ್ಯಾಲಿ ನೀರುಕಳೆದ ಐದು ವರ್ಷಗಳಿಂದ ಎಚ್ ಎನ್ ವ್ಯಾಲಿ ನೀರು ಕಂದವಾರ ಕೆರೆಗೆ ಹರಿದಿದ್ದು ಕೆರೆ ಕೋಡಿ ಹೋಗಿ, ಕೋಡಿಯ ನೀರು ರಾಜ ಕಾಲವೆ ಮೂಲಕ ಅಮಾನಿ ಗೋಪಾಲಕೃಷ್ಣ ಕೆರೆಗೆ ಹರಿದು ಹೋಗುತ್ತದೆ. ಆದರೆ ಕೆರೆ ತುಂಬಾ ನೀರು ಸದಾ ಇರುವುದರಿಂದ ಕೆರೆಯ ಕಟ್ಟೆಯಿಂದ ಜಿನುಗುವ ನೀರು ರಸ್ತೆಯ ಮೇಲೆ ಹರಿದು ರಸ್ತೆ ಸಂಪೂರ್ಣ ಹಾಳಾಗಿ ಹಳ್ಳಕೊಳ್ಳಗಳಾಗಿವೆ.
ಕಂದವಾರ ಬಾಗಿಲಿನಿಂದ ಕಂದವಾರದ ಕಡೆಗೆ ಸಾಗುವ ಮಾರ್ಗದಲ್ಲಿ ಕೋಡಿಯ ಬಳಿಯೇ ಎಥೇಚ್ಚವಾಗಿ ನೀರು ನಿಂತು ರಸ್ತೆ ಕುಂಟೆಯಂತಾಗಿದೆ. ಇಲ್ಲಿ ಪ್ರತಿ ನಿತ್ಯ ಕನಿಷ್ಠ ಇಬ್ಬರು ಮೂವರು ವಾಹನ ಸವಾರರು ಬಿದ್ದು ಗಾಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ, ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ತಿರ್‍ನಹಳ್ಳಿ ಗ್ರಾಮಸ್ಥರು.ನೂರಾರು ವಾಹನ ಸಂಚಾರ
ಚಿಕ್ಕಬಳ್ಳಾಪುರದಿಂದ ಕಂದವಾರ, ಸರ್ ಎಂ ವಿಶ್ವೇಶ್ವರಯ್ಯ ಜನ್ಮಸ್ಥಳ ಮುದ್ದೇನಹಳ್ಳಿ, ಸುಲ್ತಾನ ಪೇಟೆ, ನಂದಿ ಬೆಟ್ಟದ ಕ್ರಾಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರಹಳ್ಳಿ ದೊಡ್ಡಬಳ್ಳಾಪುರ ಸೇರಿದಂತೆ ಇತರೆಡೆ ಹೋಗುವವರು ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಬಿಡುವಿಲ್ಲದೆ ಓಡಾಡುತ್ತವೆ. ಶಾಲೆ, ಕಾಲೇಜುಗಳಿಗೆ ಹೋಗುವವರೂ ಇದೇ ಹಾದಿಯಲ್ಲಿ ಸಾಗಿಹೋಗಬೇಕಿದೆ.ಇನ್ನು ವಾರದ ಹಿಂದೆ ಸುರಿದ ಮಳೆ ಕಾರಣ ಗುಂಡಿಗಳಿಗೆ ತುಂಬಿದ್ದ ಮಣ್ಣೆಲ್ಲಾ ಕೊಚ್ಚಿಕೊಂಡು ಬಂದು ರಸ್ತೆಯ ಮಧ್ಯದಲ್ಲೇ ಹರಡಿಕೊಂಡಿವೆ. ಗುಂಡಿಗಳು ಈಗ ಹೊಂಡದಂತಾಗಿವೆ. ಇದರಿಂದ ವಾಹನ ಸವಾರರು ಸಂಕಟ ಅನುಭವಿಸುವಂತಾಗಿದೆ. ಇಲ್ಲಿನ ಅವ್ಯವಸ್ಥೆಯನ್ನು ಯಾರು ಕೇಳದ ಪರಿಸ್ಥಿತಿ ಉಂಟಾಗಿದೆ. ನಗರದಿಂದ ತಾಲೂಕಿನ ನಂದಿ ಹೋಬಳಿ ಸುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಮುಂಗಾರು ಹಂಗಾಮಿನ ಕೃಷಿ ಚುಟುವಟಿಕೆಗಳು ಭರದಿಂದ ಸಾಗಿದ್ದು, ರಸ್ತೆಯಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗಲಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ.