ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾರ್ವಜನಿಕರು ಹೋಟೆಲ್‌ಗಳು ಹಾಗೂ ಮೆಡಿಕಲ್‌ ಶಾಪ್‌ಗಳಲ್ಲಿ ಎದುರಾಗುವ ಸಮಸ್ಯೆ ಮತ್ತು ದೂರುಗಳನ್ನು ಸುಲಭವಾಗಿ ದಾಖಲಿಸಲು ಪ್ರತಿ ಹೋಟೆಲ್‌ ಹಾಗೂ ಮೆಡಿಕಲ್‌ ಶಾಪ್‌ ಮುಂದೆ ಕ್ಯೂಆರ್‌ ಕೋಡ್‌ ಅಳವಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕ್ಯೂಆರ್‌ ಕೋಡ್‌ ಬಿಡುಗಡೆ ಮಾಡಿದೆ.

ಕೋಡ್ ಅನ್ನು ಸೋಮವಾರ ಬಿಡುಗಡೆ ಮಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್. ಮುಂದಿನ ದಿನಗಳಲ್ಲಿ ಹೋಟೆಲ್‌ಗಳಿಗೆ ಸಂಬಂಧಿಸಿದ ದೂರುಗಳಿಗಾಗಿ ಟೋಲ್‌ಫ್ರೀ ಸಂಖ್ಯೆಯನ್ನೂ ನೀಡುತ್ತೇವೆ ಎಂದರು.

ಆರೋಗ್ಯಸೌಧದಲ್ಲಿ ವಿವಿಧೆಡೆ ದಾಳಿಯಲ್ಲಿ ಭಾಗವಹಿಸಿದ್ದ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸನ್ಮಾನ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಸ್ಟಾರ್‌ ಹೋಟೆಲ್‌, ಆಹಾರ ಪದಾರ್ಥಗಳ ಮಳಿಗೆಗಳ ಜತೆಗೆ ಪಿಜಿ, ವಿದ್ಯಾರ್ಥಿನಿಲಯ, ಕಲ್ಯಾಣ ಮಂಟಪ, ರೈಲು ಹಾಗೂ ವಿಮಾನಗಳಲ್ಲಿನ ಆಹಾರ ಸುರಕ್ಷತೆಯನ್ನೂ ಪರಿಶೀಲನೆ ನಡೆಸಲಾಗುವುದು ಎಂದರು.

ಆಹಾರ ಸುರಕ್ಷತೆ ಅಧಿಕಾರಿಗಳ ದಾಳಿ ಹಾಗೂ ಪರಿಶೀಲನೆ ನಿರಂತರವಾಗಿ ನಡೆಯಲಿದೆ. ಆಹಾರ ಗುಣಮಟ್ಟ ಹಾಗೂ ನಕಲಿ ಡ್ರಗ್ಸ್‌ಗಳ ಬಗ್ಗೆ ದೂರು ನೀಡಲು ಅನುವಾಗುವಂತೆ ಹೋಟೆಲ್‌ ಹಾಗೂ ಮೆಡಿಕಲ್‌ ಸ್ಟೋರ್‌ಗಳ ಮುಂದೆ ಕ್ಯೂಆರ್‌ ಕೋಡ್‌ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.


ಅಖಿಲ ಭಾರತ ಆಹಾರ ಸುರಕ್ಷತಾ ಸಮಾವೇಶ:ವಿದೇಶಿ ಕಂಪನಿಗಳ ಚಾಕೊಲೇಟ್‌ಗಳಲ್ಲಿ ಸಕ್ಕರೆ ಪ್ರಮಾಣ ಸೇರಿ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಹೀಗಾಗಿ ಕೇಂದ್ರ ಆಹಾರ ಸುರಕ್ಷತಾ ಕಾಯ್ದೆಯಲ್ಲಿ ಅಗತ್ಯ ಬದಲಾವಣೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಇತರ ದೇಶಗಳಲ್ಲಿ ಲಭ್ಯವಿರುವ ಗುಣಮಟ್ಟದ ಉತ್ಪನ್ನಗಳೇ ಭಾರತದಲ್ಲೂ ಲಭ್ಯವಾಗಬೇಕು. ಈ ಕುರಿತು ಅಂತರಾಷ್ಟ್ರೀಯ ಮಟ್ಟದ ಕಂಪೆನಿಗಳು ಭಾಗವಹಿಸುವಂತೆ ಅಖಿಲ ಭಾರತೀಯ ಆಹಾರ ಸುರಕ್ಷತಾ ಸಮಾವೇಶ ಆಯೋಜಿಸುತ್ತೇವೆ ಎಂದು ಆರೋಗ್ಯ ಸಚಿವರು ತಿಳಿಸಿದರು.

30 ಉದ್ದಿಮೆಗಳಿಗೆ ನೋಟಿಸ್:

ರಾಜ್ಯದಲ್ಲಿ 30 ತಂಡ ರಚಿಸಿ 60ಕ್ಕೂ ಹೆಚ್ಚು ತ್ರೀ-ಸ್ಟಾರ್‌, ಫೈವ್‌-ಸ್ಟಾರ್‌ ಹೋಟೆಲ್‌ಗಳು, ಎಂಟು ವೇರ್‌ಹೌಸ್‌ಗಳು ಹಾಗೂ ನಾಲ್ಕು ಅಂತಾರಾಷ್ಟ್ರೀಯ ರೆಸ್ಟೋರೆಂಟ್‌ಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಹೋಟೆಲ್‌ಗಳಲ್ಲಿ ಆಹಾರ ತಯಾರಿಸುವ ಸ್ಥಳ ಹಾಗೂ ಕಚ್ಚಾ ವಸ್ತುಗಳು ಎಲ್ಲಿಂದ ಪೂರೈಕೆಯಾಗುತ್ತವೆ ಎಂಬುದರ ಕುರಿತು ತಪಾಸಣೆ ನಡೆಸಿದ್ದು, ನಿಯಮ ಉಲ್ಲಂಘನೆ ಮಾಡಿರುವ 30 ಉದ್ದಿಮೆಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

ಕಳಪೆ ಆಹಾರ ಪೂರೈಸುತ್ತಿರುವುದು ಪತ್ತೆಯಾದ ಹೋಟೆಲ್‌ಗಳ ವಿರುದ್ಧ ನೋಟಿಸ್‌ ನೀಡುವ ಜತೆಗೆ 5 ಲಕ್ಷ ರು.ವರೆಗೆ ದಂಡ ವಿಧಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.