ಸಾರಾಂಶ
ನಟಿ, ಮಾಜಿ ಸಂಸದೆ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಹಾಗೂ ಅಶ್ಲೀಲ ಸಂದೇಶದ ಪೋಸ್ಟ್ ಮಾಡಿದ ಪ್ರಕರಣ ಸಂಬಂಧ ಬಂಧಿಸಲಾಗಿರುವ 12 ಮಂದಿ ಆರೋಪಿಗಳ ಮೊಬೈಲ್‌ಗಳನ್ನು ರಿಟ್ರೀವ್ ಮಾಡಲು ಸಿಸಿಬಿ ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಟಿ, ಮಾಜಿ ಸಂಸದೆ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಹಾಗೂ ಅಶ್ಲೀಲ ಸಂದೇಶದ ಪೋಸ್ಟ್ ಮಾಡಿದ ಪ್ರಕರಣ ಸಂಬಂಧ ಬಂಧಿಸಲಾಗಿರುವ 12 ಮಂದಿ ಆರೋಪಿಗಳ ಮೊಬೈಲ್‌ಗಳನ್ನು ರಿಟ್ರೀವ್ ಮಾಡಲು ಸಿಸಿಬಿ ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನಿಸಿದ್ದಾರೆ.ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಇದೀಗ ಆರೋಪಿಗಳ ಸಾಮಾಜಿಕ ಜಾಲತಾಣ ಖಾತೆಗಳು, ಕಾಮೆಂಟ್‌ಗಳು, ಪೋಸ್ಟ್‌ಗಳನ್ನು ರಿಟ್ರೀವ್ ಮಾಡಲು ಮೊಬೈಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ವಾರದೊಳಗೆ ಎಫ್‌ಎಸ್‌ಎಲ್ ವರದಿ ಸಿಸಿಬಿ ಪೊಲೀಸರ ಕೈ ಸೇರುವ ಸಾಧ್ಯತೆಯಿದ್ದು, ಬಳಿಕ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಎರಡು ತಿಂಗಳಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ 12 ಆರೋಪಿಗಳು, ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಪೈಕಿ ಒಬ್ಬರಿಗೂ ಜಾಮೀನು ಸಿಕ್ಕಿಲ್ಲ. ಜೈಲುಪಾಲಾಗಿರುವ ತಮ್ಮ ಮಕ್ಕಳನ್ನು ಹೊರ ತರಲು ಪೋಷಕರು ಕಾನೂನು ಹೋರಾಟ ಮುಂದುವರೆಸಿದ್ದಾರೆ.ಪ್ರಕರಣದ ಹಿನ್ನೆಲೆ:
ಕಳೆದ ಜುಲೈನಲ್ಲಿ ನಟಿ ರಮ್ಯಾ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಟ ದರ್ಶನ್ ಅಭಿಮಾನಿಗಳು ಎನ್ನಲಾದ ಕೆಲವರು ನಟಿ ರಮ್ಯಾ ವಿರುದ್ಧ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶ ಕಳುಹಿಸಿದ್ದರು. ಈ ಸಂಬಂಧ ರಮ್ಯಾ ಅವರು 43 ಅಕೌಂಟ್‌ಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ದಾಖಲಾದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ರಾಜ್ಯದ ವಿವಿಧೆಡೆ 12 ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.