ನೂತನ ಹತ್ತು ಲೇಔಟ್ ಗಳಲ್ಲಿ ಕಳಪೆ ಕಾಮಗಾರಿ: ನಗರಸಭೆ ಸದಸ್ಯ ಗಿರೀಶ್ ಆರೋಪ

| Published : Oct 14 2024, 01:21 AM IST

ನೂತನ ಹತ್ತು ಲೇಔಟ್ ಗಳಲ್ಲಿ ಕಳಪೆ ಕಾಮಗಾರಿ: ನಗರಸಭೆ ಸದಸ್ಯ ಗಿರೀಶ್ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶೀಲನೆ ನಡೆಸದೇ ಇಂಜಿನಿಯರ್‌ಗಳು ಅಧಿಕಾರದ ದುರುಪಯೋಗಪಡಿಸಿಕೊಂಡರೆ ನಾವು ಲೋಕಾಯುಕ್ತರಿಗೆ ದೂರು ನೀಡುವ ಮೂಲಕ ತನಿಖೆಗೆ ಒತ್ತಾಯಿಸಲಾಗುವುದು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಲೇಔಟ್‌ಗಳಲ್ಲಿ ಕಳಪೆ ಕಾಮಗಾರಿ ನಡೆದಿದ್ದು ಇವುಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಖಾತೆಗಳನ್ನು ನೀಡುವಂತೆ ನಗರಸಭೆ ಅಧ್ಯಕ್ಷರಿಗೆ ಹಾಗೂ ಪೌರಾಯುಕ್ತರಿಗೆ ಮನವಿ ಮಾಡಲಾಗುವುದು ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಿ. ಗಿರೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಾದ್ಯಂತ ಹೊಸ ೧೦ ಲೇಔಟ್‌ಗಳು ಹೆಂಜಗೊಂಡನಹಳ್ಳಿ, ಮಾರುತಿನಗರ, ಗರುಡನಗಿರಿ ರಸ್ತೆ, ಕಾಟೀಕೆರೆ ರಸ್ತೆ, ಶಿವಾಲಯದಲ್ಲಿ ನಿರ್ಮಾಣಗೊಂಡಿವೆ. ಅದರಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರಿನ ಪೈಪ್ ಲೈನ್, ಕಳಪೆ ಗುಣಮಟ್ಟದ ರಸ್ತೆ, ಸಿಟ್ಟಿಂಗ್ ಬೇಂಚ್ ಅಳವಡಿಸಿಲ್ಲ, ಯುಜಿಡಿ ಕಳಪೆ ಕಾಮಗಾರಿ, ಪಾರ್ಕ್ ಸುತ್ತ ಪೆನ್ಸಿಂಗ್ ಅಳವಡಿಕೆ ಇಲ್ಲ, ಬೀದಿ ದೀಪಗಳಿಲ್ಲದಿರುವುದು ಸ್ಪಷ್ಟವಾಗಿದೆ. ಅಲ್ಲಿಯ ಲೇಔಟ್‌ಗಳಿಗೆ ಖಾತೆ ನೀಡಲು ಯೋಗ್ಯವಾಗಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಖಾತೆಗಳನ್ನು ನೀಡದಂತೆ ತಿಳಿಸುತ್ತೇವೆ ಎಂದರು.

ಲೋಕಯುಕ್ತರಿಗೆ ದೂರು:

ಪರಿಶೀಲನೆ ನಡೆಸದೇ ಇಂಜಿನಿಯರ್‌ಗಳು ಅಧಿಕಾರದ ದುರುಪಯೋಗಪಡಿಸಿಕೊಂಡರೆ ನಾವು ಲೋಕಾಯುಕ್ತರಿಗೆ ದೂರು ನೀಡುವ ಮೂಲಕ ತನಿಖೆಗೆ ಒತ್ತಾಯಿಸಲಾಗುವುದು ಎಂದರು.

ಅಕ್ರಮದ ಬಗ್ಗೆ ದೂರು:

ಲೇಔಟ್‌ಗಳಲ್ಲಿ ಅಕ್ರಮ ನಡೆದಿದ್ದು ಗುಣಮಟ್ಟದ ಕಾಮಗಾರಿ ಇಲ್ಲದೇ ಇರುವುದರ ಬಗ್ಗೆ ಮಾಹಿತಿ ಪಡೆದು ಪೌರಾಯುಕ್ತರಿಗೆ ಈಗಾಗಲೇ ದೂರು ನೀಡಿದ್ದೇವೆ. ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.

ಜೆಡಿಎಸ್ ಮುಖಂಡ ರಮೇಶ್ ಮಾತನಾಡಿ, ಲೇಔಟ್ ಮಾಡುವುದರಲ್ಲಿ ನಮ್ಮ ವಿರೋಧವಿಲ್ಲ, ಆದರೆ ಸಮಸ್ಯೆಗಳ ಗೂಡಾಗುವುದು ಬೇಡ. ಇದರಿಂದ ಸಾರ್ವಜನಿಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ. ಅಲ್ಲದೇ ಶಾಂತಪ್ಪ ಲೇಔಟ್ ನಿರ್ಮಾಣಕ್ಕೆ ೨೦೧೪ ರಲ್ಲಿ ಅನುಮತಿ ನೀಡಲಾಗಿದೆ. ಆದರೆ ಅಲ್ಲಿ ಯಾವುದೇ ರಸ್ತೆಗಳನ್ನು ಮಾಡಿರಲಿಲ್ಲ. ಈಗ ಸರಕಾರದ ಹಣದಲ್ಲಿ ಕಳಪೆ ರಸ್ತೆ ಮಾಡಲಾಗಿದೆ. ಇದರಿಂದ ಕೇಳೋರು ಇಲ್ಲ, ಹೇಳೋರು ಇಲ್ಲದಂತಾಗಿದೆ ಎಂದರು.

ನಗರಸಭೆ ಸದಸ್ಯ ಮೇಲಗಿರಿಗೌಡ, ಭಾಸ್ಕರ್, ಮುಖಂಡರಾದ ರಮೇಶ್‌ ನಾಯ್ಡು, ಮುಖಂಡರಾದ ಹರ್ಷವರ್ಧನ್, ಶಿವನ್‌ ರಾಜ್ ಉಪಸ್ಥಿತರಿದ್ದರು.