ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿಯಾಗಿವೆ

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ತಾಲೂಕು ಇಲವಾಲದ ಸಂತೆ ಮೈದಾನದಲ್ಲಿ ಮಂಗಳವಾರ ನಡೆದ ವಿಶ್ವ ರೈತ ದಿನಾಚರಣೆ ಮತ್ತು ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ 76ನೇ ಜನ್ಮದಿನಾಚರಣೆ ಹಾಗೂ ಜಿಲ್ಲಾ ರೈತ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳನ್ನು ಸುಟ್ಟು ರೈತರು ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕವು ಆಯೋಜಿಸಿದ್ದ ಸಮಾವೇಶದಲ್ಲಿ ಮಹಿಳಾ ರೈತರು, ಕೃಷಿ ಕಾಯಿದೆಗಳ ಪ್ರತಿಯನ್ನು ಸುಟ್ಟರು. ಇದಕ್ಕೆ ನೆರೆದಿದ್ದ ಸಾವಿರಾರು ರೈತರು ಟವಲ್ ಬೀಸುತ್ತ ಬೆಂಬಲ ವ್ಯಕ್ತಪಡಿಸಿದರು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿಯಾಗಿವೆ. ಕರ್ನಾಟಕದಲ್ಲಿ ಆಡಳಿತ ಪಕ್ಷ ರೈತರ ಪರವಾಗಿಲ್ಲ. ವಿರೋಧ ಪಕ್ಷ ಸತ್ತಿದೆ. ಹೀಗಾಗಿ, ರೈತ, ದಲಿತ, ಕಾರ್ಮಿಕ ಸಂಘಟನೆಗಳು ಒಟ್ಟಾಗಬೇಕು. ಹಸಿರು, ನೀಲಿ, ಕೆಂಪು ಬಾವುಟಗಳು ವಿಧಾನಸೌಧಕ್ಕೆ ಹೋಗಬೇಕು ಎಂದು ಕರೆ ನೀಡಿದರು.ಮೂರು ಕೃಷಿ ಕಾಯಿದೆಗಳು ರೈತರನ್ನು ಗುಲಾಮಗಿರಿಗೆ ತಳ್ಳುತ್ತವೆ. ಅಂಬಾನಿ, ಅದಾನಿಗೆ ಅನುಕೂಲ ಮಾಡುತ್ತವೆ. 11 ವರ್ಷಗಳಲ್ಲಿ ಪ್ರಧಾನಿ ಮೋದಿ ಕೊಟ್ಟ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಸುಳ್ಳು ಹೇಳುತ್ತ ಕಾಲಾಹರಣ ಮಾಡುತ್ತಿದ್ದಾರೆ. ಆಮದು ನೀತಿಗಳು ಕರ್ನಾಟಕದ ಹತ್ತಿ, ಮೀನು ಬೆಳಗಾರರು, ಹೈನೋದ್ಯಮಕ್ಕೆ ಪೆಟ್ಟು ನೀಡಲಿದೆ ಎಂದು ಅವರು ಎಚ್ಚರಿಸಿದರು.ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಭೂ ಕಳ್ಳರಿದ್ದಾರೆ. ಹೀಗಾಗಿಯ ಭೂ ಮಸೂದೆ ಹಿಂಪಡೆಯಲು ಮೀನಾಮೇಷ ಎಣಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ರೈತರಿಗೆ ಮಾಕರವಾದ ಭೂ ಸುಧಾರಣೆ, ಜಾನುವಾರ ಹತ್ಯೆ ಕಾಯಿದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು. ರಾಜಕೀಯ ಪರಿಸ್ಥಿತಿ ಬದಲಾಗಬೇಕುಸಮಾವೇಶ ಉದ್ಘಾಟಿಸಿದ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೆಟ್ಟ ನೀತಿಗಳಿಂದ ರೈತರು ಸ್ವಾಭಿಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯ ಪರಿಸ್ಥಿತಿ ಬದಲಾಗದೇ ರೈತರು ಬಾಳಿನಲ್ಲಿ ಬದಲಾವಣೆಯಾಗುವುದಿಲ್ಲ ಎಂದರು.ಸಂವಿಧಾನ ತಿರುಚುವ ಅಥವಾ ಬದಲಿಸುವ ದೊಡ್ಡ ಹುನ್ನಾರ ಕೇಂದ್ರದಿಂದ ನಡೆಯುತ್ತಿದೆ. ಮತದಾರರ ಪರಿಷ್ಕರಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸುವವರನ್ನು ಪಟ್ಟಿಯಿಂದ ಕೈ ಬಿಡಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೋ ಇಲ್ಲವೋ ಖಚಿತಪಡಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದರು.ರೈತ ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ, ಕೆಂಪೂಗೌಡ, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ದಸಂಸ ಮುಖಂಡರಾದ ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಒಡನಾಡಿ ಸ್ಟ್ಯಾನ್ಲಿ, ರೈತ ಮುಖಂಡರಾದ ವೀರಸಂಗಯ್ಯ, ಮೈದನಹಳ್ಳಿ ಮಹೇಶ್, ವಸಂತಕುಮಾರ್, ಮಹೇಶ್ ಪ್ರಭು, ದಾವಣಗೆರೆ ಹನುಮಂತಪ್ಪ, ಮಂಜುಳಾ ಅಕ್ಕಿ, ರವಿಶಂಕರ್ ಪೂಣಚ್ಚ, ನೇತ್ರಾವತಿ, ಗೋವಿಂದರಾಜು, ಕರಿಬಸಪ್ಪ, ಲಕ್ಷ್ಮೀನಾರಾಯಣರೆಡ್ಡಿ, ವೆಂಕಪ್ಪರಾಯರೆಡ್ಡಿ, ವೆಂಕಪ್ಪ ಕಾರುಭಾರಿ, ಪಿ. ಮರಂಕಯ್ಯ, ಮಂಡಕಳ್ಳಿ ಮಹೇಶ್, ಕಲ್ಲಹಳ್ಳಿ ಕುಮಾರ್ ಮೊದಲಾದವರು ಇದ್ದರು.----ಬಾಕ್ಸ್... ಪುಟ್ಟಣ್ಣಯ್ಯ ಪ್ರತಿಮೆ ಅನಾವರಣ ಮುಂದೂಡಿಕೆಇಲವಾಲದಲ್ಲಿ ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಪ್ರತಿಮೆ ಸ್ಥಾಪನೆಗೆ ಸ್ಥಾಪಿತ ಹಿತಾಸಕ್ತಿಗಳು ವಿರೋಧ ವ್ಯಕ್ತಪಡಿಸಿವೆ. ಇಲವಾಲದ ಸ್ಥಳೀಯರು ವಿರೋಧ ಮಾಡಿಲ್ಲ. ಹೊರಗಿನಿಂದ ಬಂದವರು ವಿರೋಧಿಸಿದ್ದಾರೆ. ಮುಂಡರಗಿ, ತುಮಕೂರು, ಚಿತ್ರದುರ್ಗಗಳಲ್ಲಿ ಪ್ರತಿಮೆ ಸ್ಥಾಪನೆಯಾದಾಗ ಇಲ್ಲದ ವಿರೋಧ ಇಲವಾಲದಲ್ಲಿ ಯಾಕೇ ಬಂದಿತು? ಮುಂಬರುವ ದಿನಗಳಲ್ಲಿ ಸ್ಥಳೀಯರ ಸಹಕಾರ ಪಡೆದು ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.ಪ್ರತಿಮೆ ಸ್ಥಾಪನೆಗಾಗಿ ಹೋರಾಟ ಮಾಡಿದ್ದು, ರೈತರ ಹೃದಯದಲ್ಲಿ ಕೆ.ಎಸ್. ಪುಟ್ಟಣ್ಣಯ್ಯ ಜೀವಂತವಾಗಿದ್ದಾರೆ ಅನಿಸಿತು. ಶಾಸಕರಾಗಿ ಸಂಪಾದನೆ ಮಾಡಲಿಲ್ಲ. ಮನೆಯಲ್ಲೂ ಇರುತ್ತಿರಲಿಲ್ಲ. ಆದರೆ, ಇಷ್ಟೊಂದು ಜನರ ಪ್ರೀತಿ ಸಂಪಾದಿಸಿರುವುದೇ ನಮ್ಮ ಭಾಗ್ಯವಾಗಿದೆ ಎಂದು ಸುನೀತಾ ಪುಟ್ಟಣ್ಣಯ್ಯ ಹೇಳಿದರು.