ಸಾರಾಂಶ
ಬ್ಯಾಡಗಿ: ಮಹಿಳೆಯರ ವಿಭಾಗದಲ್ಲಿ ಅತಿಥೇಯ ಬ್ಯಾಡಗಿ ಬಿಇಎಸ್ ಕಾಲೇಜು ಹಾಗೂ ಪುರುಷರ ವಿಭಾಗದಲ್ಲಿ ಹಾವೇರಿ ಜಿ.ಎಚ್. ಕಾಲೇಜು ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಂಡವು.
ಪಟ್ಟಣದ ಬಿಇಎಸ್ ಕಾಲೇಜು ಆವರಣದಲ್ಲಿ ಇಂದು ಮುಕ್ತಾಯಗೊಂಡ ಹಾವೇರಿ ವಿಶ್ವ ವಿದ್ಯಾಲಯದ ಅಂತರ ಕಾಲೇಜುಗಳ ಕಬಡ್ಡಿ ಕ್ರೀಡಾಕೂಟದ ಕೊನೆಯ ದಿನವಾದ ಶುಕ್ರವಾರ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ನಡುವೆ ಮುಕ್ತಾಯಗೊಂಡ ಮಹಿಳೆಯರ ವಿಭಾಗದ ಅಂತಿಮ ಪಂದ್ಯದಲ್ಲಿ 19 (45-26) ಅಂಕಗಳಿಂದ ಬಿಇಎಸ್ ಜಯಗಳಿಸಿತು.ಅಂತಿಮ ಪಂದ್ಯದ ಮೊದಲಾರ್ಧದಲ್ಲಿ ಅತಿಥೇಯ ಬಿಇಎಸ್ ಕಾಲೇಜು 14 (19-05) ಅಂಕಗಳ ಮುನ್ನಡೆ ಸಾಧಿಸಿತ್ತು. ಅನುಭವಿ ಆಟಗಾರ್ತಿಯರನ್ನು ಹೊಂದಿದ್ದ ಬಿಇಎಸ್, ಹಾನಗಲ್ಲನ ಕುಮಾರೇಶ್ವರ ಕಾಲೇಜು ತಂಡವನ್ನು ಸುಲಭವಾಗಿ ಮಣಿಸಿತು. ಎದುರಾಳಿ ತಂಡದ ವಿರುದ್ಧ ಬಿರುಗಾಳಿಯಂತೆ ನುಗ್ಗಿದ ಬಿಇಎಸ್ ಅರ್ಪಿತಾ ಮಡಿವಾಳರ ಸತತವಾಗಿ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಇನ್ನೂ ಡಿಫೆಂಡರ್ ಅನಿತಾ ಹಾಗೂ ರಕ್ಷಿತಾ ಸಮಯೋಚಿತ ಆಟವಾಡುವ ಮೂಲಕ ತಂಡದ ಗೆಲುವಿಗೆ ಸಹಕರಿಸಿದರು. ಶಿಗ್ಗಾಂವಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಾವಿತ್ರಿ ಅತ್ಯುತ್ತಮ ರೈಡರ್, ಕುಮಾರೇಶ್ವರ ಕಾಲೇಜು ತಂಡದ ರೇಣುಕಾ ಅತ್ಯುತ್ತಮ ಡಿಫೆಂಡರ್ ಹಾಗೂ ಬಿಇಎಸ್ ಕಾಲೇಜಿನ ಆಟಗಾರ್ತಿ ಅರ್ಪಿತ ಆಲ್ ರೌಂಡರ್ ಪ್ರಶಸ್ತಿಗೆ ಭಾಜನರಾದರು.
ರೋಚಕ ಗೆಲುವು ಸಾಧಿಸಿದ ಜಿ.ಎಚ್. ಕಾಲೇಜು: ರೋಚಕ ಅಂತಿಮ ಪಂದ್ಯದಲ್ಲಿ ಹಾವೇರಿ ಜಿ.ಎಚ್. ಕಾಲೇಜು ಸರ್ಕಾರಿ ಪದವಿ ಕಾಲೇಜು ಗಾಂಧಿಪುರ ತಂಡವನ್ನು 07 (21-14) ಅಂಕಗಳ ಅಂತರದಿಂದ ಪುರುಷರ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಪಂದ್ಯದ ಮೊದಲಾರ್ಧದಲ್ಲಿ 02 ಅಂಕಗಳ ಹಿನ್ನಡೆ ಪಡೆದಿದ್ದ (06-08) ಜಿಎಚ್ ಕಾಲೇಜು, ದ್ವಿತೀಯಾರ್ಧದಲ್ಲಿ ವಿರೋಚಿತ ಹೋರಾಟ ನಡೆಸಿತು. ತಂಡದ ಕುಮಾರ ಒಂದೇ ರೈಡ್‌ನಲ್ಲಿ ಪಡೆದ 4 ಅಂಕಗಳು ಜಿಎಚ್ ಕಾಲೇಜನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿತು. ಕೋಚ್ ಪೂಜಾ ಅವರ ಸಮಯೋಚಿತ ಸಲಹೆಗಳು ಗೆಲುವಿಗೆ ಸಹಕಾರಿಯಾಯಿತು.ಬಿಇಎಸ್ ಕಾಲೇಜಿನ ದೊಡ್ಡಬಸವರಾಜ ಅತ್ಯುತ್ತಮ ರೈಡರ್, ಗಾಂಧಿಪುರದ ಸರ್ಕಾರಿ ಪದವಿ ಕಾಲೇಜಿನ ನದಾಫ್ ಡಿಫೆಂಡರ್ ಹಾಗೂ ಜಿಎಚ್ ಕಾಲೇಜಿನ ಕುಮಾರೇಶ ಸರ್ವೋತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ ಸೇರಿದಂತೆ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ ಹಾಗೂ ನಿವೃತ್ತ ಪ್ರಾಚಾರ್ಯ ಕೆ.ಜಿ. ಖಂಡೇಬಾಗೂರ, ಉಪನ್ಯಾಸಕರಾದ ಡಾ. ಪ್ರೇಮಾನಂದ ಲಕ್ಕಣ್ಣನವರ ಸೇರಿದಂತೆ ಇನ್ನಿತರರು ವಿಜೇತ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಿದರು.