ಸಾರಾಂಶ
ಯಾದಗಿರಿ ಸಮೀಪದ ಬದ್ದೇಪಲ್ಲಿ ಗ್ರಾಮದಲ್ಲಿ ಮೊಹರಂ ಹಬ್ಬದ ಕೊನೆಯ ದಿನ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸಮೀಪದ ಬದ್ದೇಪಲ್ಲಿ ಗ್ರಾಮದಲ್ಲಿ ಹಿಂದೂ-ಮುಸ್ಲಿಂರ ಮಧ್ಯೆ ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಉಭಯ ಧರ್ಮಗಳ ಜನರು ಸಂಭ್ರಮದಿಂದ ಆಚರಣೆ ಮಾಡಿದರು.ಪೀರಲ ದೇವರ ಮೂರ್ತಿ ಮುಸ್ಲಿಂ ಶೈಲಿಯಾಗಿದೆ. ಭಕ್ತರು ವಿಶೇಷ ದಿನಗಳಂದು ನೈವೆದ್ಯೆ(ಮಾಲ್ದಿ) ಸಮರ್ಪಿಸಿದರು. ಪೀರಲ ದೇವರುಗಳಿಗೆ ವಿಶೇಷ ಅಲಂಕಾರ ನಡೆಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮತ್ತೆ ಮೂಲ ಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಿ ಪೂಜಿಸಿದರು. ಕತ್ತಲ ರಾತ್ರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವರ ಹರಿಕೆ ತೀರಿಸಿಕೊಳ್ಳುವುದು. ಬೆಳಗಿನ ಜಾವದ ಹೊತ್ತಿಗೆ ದೇವರಿಗೆ ಬಲಿ ಸಮರ್ಪಣೆ ಮತ್ತು ಹರಕೆ ಹೊತ್ತವರಿಂದ ದೇವರ ಎದುರು ಕೆಂಡ ತುಳಿಯುವ ಸೇವೆ ನಡೆಯಿತು.
ಮಸೀದಿಯಿಂದ ಆರಂಭವಾದ ಮರೆವಣಿಗೆಯಲ್ಲಿ ಹಲಗೆ ನಾದಕ್ಕೆ ಹೆಜ್ಜೆ ಹಾಕುತ್ತ ಯುವ ಸಮೂಹ ಸೇರಿಕೊಂಡು ಪೀರ ದೇವರ ಹಿಂದಿನ ಇತಿಹಾಸ ಸಾರುವ ಕಹಿ ಘಟನೆಗಳು ಮತ್ತು ನೈತಿಕ ಮೌಲ್ಯಗಳನ್ನು ಹೊಳಗೊಂಡ ಮೊಹರಂ ಗೀತೆಗಳನ್ನು ಹಾಡುತ್ತಾ, ದೇವರುಗಳ ಮೆರವಣಿಗೆ ಜರಗಿತು.ಇಲ್ಲಿ ಮುಸ್ಲಿಂ ಬಾಂಧವರು ನೆರೆದಿದ್ದ ಭಕ್ತರಿಗೆಲ್ಲಾ ಹಾಲು ಹಂಚುವುದರ ಮೂಲಕ ಹಿಂದೂ ಮತ್ತು ಮುಸ್ಲಿಂರ ಭಾವೈಕ್ಯತೆಯನ್ನು ಪ್ರತಿಬಿಂಬಿಸಿತು. ದೇವರುಗಳು ಬರುವ ಮಾರ್ಗದುದ್ದಕ್ಕೂ ನೀರು ಹಾಕಿ ಮಹಿಳೆಯರು ಮಕ್ಕಳು ಸ್ವಾಗತಿಸಿ ಆರ್ಶಿವಾದ ಪಡೆದರು. ರಸ್ತೆ ಪಕ್ಕದಲ್ಲಿ ನೂರಾರು ಜನರು ಇಲ್ಲಿ ನಡೆದ ಭಾವೈಕ್ಯತೆಯ ಹಬ್ಬಕ್ಕೆ ಸಾಕ್ಷಿಯಾದರು. ನಂತರ ಕೊನೆಯಲ್ಲಿ ಪಿರ ದೇವರ ಧಪನ್ ನಡೆಯಿತು.