ಸಾರಾಂಶ
ಬಾಗಲಗುಂಟೆ ಮಾರಮ್ಮ ದೇವಿಯ ದರ್ಶನ ಪಡೆದ ಶಾಸಕ ಎಸ್.ಮುನಿರಾಜು ಕುಟುಂಬ.
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿಬೆಂಗಳೂರು ಕರಗದಷ್ಟೆ ಪ್ರಖ್ಯಾತಿ ಹೊಂದಿರುವ ಬಾಗಲಗುಂಟೆ ಮಾರಮ್ಮ ದೇವಿಯ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ಶಾಸಕ ಎಸ್.ಮುನಿರಾಜು ಅವರು ಕುಟುಂಬ ಸಮೇತರಾಗಿ ಭಾಗವಹಿಸಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು.
ಸೋಮವಾರ ಬೆಳಗ್ಗೆ ಪಳೇಕಮ್ಮ, ಮುತ್ತುರಾಯಸ್ವಾಮಿ, ವಿನಾಯಕ, ನವಗ್ರಹ, ವೇಣುಗೋಪಾಲಸ್ವಾಮಿ, ಆಂಜನೇಯಸ್ವಾಮಿ ಹಾಗೂ ಜುಂಜಪ್ಪ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಅಲಂಕಾರ ಮಾಡಿ ಬೆಲ್ಲದಾರತಿ ನೆರವೇರಿಸಲಾಯಿತು. ಹರಕೆ ಹೊತ್ತವರು ಬಾಯಿಗೆ ಬೀಗ ಸೇವೆ, ಅಲಗು ಸೇವೆ, ಅಗ್ನಿಕುಂಡ ಹಾಯುವ ಮೂಲಕ ಹರಕೆ ಪೂರ್ಣಗೊಳಿಸಿದರು. ತಮಟೆ ವಾದ್ಯಗಳೊಂದಿಗೆ ಮಲ್ಲಸಂದ್ರ, ಶೆಟ್ಟಿಹಳ್ಳಿ, ಚಿಕ್ಕಸಂದ್ರ, ಬಾಗಲಗುಂಟೆ, ಮಂಜುನಾಥ ನಗರ, ಸಿಡೇದ ಹಳ್ಳಿ, ತೋಟದ ಗುಡ್ಡದಹಳ್ಳಿ ಗ್ರಾಮಸ್ಥರು ದೊಡ್ಡದಾರತಿ ಸಲ್ಲಿಸಿದರು.ಮಾಜಿ ಶಾಸಕ ಆರ್.ಮಂಜುನಾಥ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ, ಗಣ್ಯರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸುತ್ತಮುತ್ತ ಪ್ರಮುಖ ರಸ್ತೆಗಳೆಲ್ಲ ವಿದ್ಯುತ್ ದೀಪ ಅಲಂಕಾರ ಮಾಡಲಾಗಿದ್ದು, ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರು ಜಾತ್ರೆಯಲ್ಲಿ ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು.