ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿದ್ದ ಎಚ್.ವೈ. ಮೇಟಿಯವರ ಅಕಾಲಿಕ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆದು ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ಮಧ್ಯೆ ತೀವ್ರ ತುರುಸಿನ ಪೈಪೋಟಿಗೆ ಸಾಕ್ಷಿಯಾದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಲಿದ್ದು, ಎರಡೂ ಪಕ್ಷಗಳ ಅಭ್ಯರ್ಥಿಗಳ ಎದೆಬಡಿತ ಹೆಚ್ಚಿಸಿದೆ.ಆಡಳಿತಾರೂಢ ಕಾಂಗ್ರೆಸ್ ಗೆ ಉಪಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದರೆ, ಕಳೆದ ಬಾರಿ ತೀವ್ರ ಪೈಪೋಟಿ ನೀಡಿ ಸೋಲು ಅನುಭವಿಸಿದ ಬಿಜೆಪಿಗೆ ಸರ್ಕಾರದ ಆಡಳಿತ ವಿರೋಧಿ ಅಲೆ ಬಳೆಸಿಕೊಂಡು ಮತ್ತೊಮ್ಮೆ ಮತಕ್ಷೇತ್ರ ಪಡೆದು ಮುಂಬರುವ ಚುನಾವಣೆಗೆ ಸಿದ್ಧಗೊಳ್ಳಲು ಸಜ್ಜಾಗಿದೆ.

ತೀವ್ರ ಹಣಾಹಣಿ:

ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿ ಗೆಲುವಿಗೆ ಅನುಕಂಪ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನೆಚ್ಚಿಕೊಂಡಿದ್ದರೆ ಬಿಜೆಪಿ ತನ್ನ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯ ಹಾಗೂ ಆಡಳಿತ ವಿರೋಧಿ ಅಲೆ ಅವಲಂಬಿಸಿದೆ.


ಕ್ಷೇತ್ರದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಉಭಯ ಪಕ್ಷಗಳು ಆಯಾ ಜಾತಿ, ಜನಾಂಗದ ನಾಯಕರು, ಸಚಿವರನ್ನು ಬಳಸಿಕೊಂಡು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇನ್ನಿಲ್ಲದ ಕಸರತ್ತನ್ನು ನಡೆಸಿವೆ.

ಫಲಿತಾಂಶ ಏನಾಗಬಹುದು ? :ಚುನಾವಣೆಯ ನಂತರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಗೆಲವಿನ ಲೆಕ್ಕಾಚಾರಗಳು ನಡೆದಿವೆಯಾದರೂ ಸಹ ಕೆಲವು ಸಮೀಕ್ಷೆಗಳ ವರದಿಗಳು ಸಹ ಉಭಯ ಅಭ್ಯರ್ಥಿಗಳ ನಿದ್ದೆ ಕೆಡಿಸಿವೆ ಅಂದರೆ ತಪ್ಪಾಗಲಾರದು.

ಮತಕ್ಷೇತ್ರದಲ್ಲಿನ ಮತದಾರರ ನಾಡಿಮಿಡಿತ ಅರ್ಥವಾಗದಿದ್ದರೂ ಸಹ ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಸಮ ಬಲದ ಹೋರಾಟ ಕಾಣುತ್ತಿದೆ. ನಗರ ಪ್ರದೇಶದಲ್ಲಿ ಬಿಜೆಪಿ ಮುಂದಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಕಂಡುಬರುತ್ತಿದೆ.

ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಕಾರಣಕ್ಕೆ ಮತದಾರರು ಅದರಲ್ಲೂ ಜಾತಿಗಳ ಒಗ್ಗಟ್ಟು ಸಹ ಕಾಣತೊಡಗಿದೆ. ಲಿಂಗಾಯತ ಸಮುದಾಯದ ಮತಗಳ ವಿಭಜನೆಯಾಗದೆ ಬಿಜೆಪಿಯ ಪಾರಂಪರಿಕ ಮತಗಳ ಕ್ರೋಡೀಕರಣ ಮತ್ತು ಕಳೆದ ಬಾರಿ ಕಳೆದುಕೊಂಡ ಮತಗಳನ್ನು ಮರಳಿ ಪಡೆದು ಇತರ ಜಾತಿಗಳ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ ಬಿಜೆಪಿ ಮತ್ತೆ ಕ್ಷೇತ್ರದಲ್ಲಿ ಕಮಲ ತೆಕ್ಕೆಗೆ ಪಡೆದುಕೊಳ್ಳಬಹುದು.

ಕಾಂಗ್ರಸ್ ಪಕ್ಷ ಅನುಕಂಪದ ಮತಗಳು, ಕ್ಷೇತ್ರದಲ್ಲಿ ಹೆಚ್ಚಾಗಿರುವ ಹಾಲುಮತ, ಅಲ್ಪಸಂಖ್ಯಾತ ಮತಗಳ ಜೊತೆಗೆ ದಲಿತ ಸಮುದಾಯದ ಮತಗಳು ಬಂದರೆ, ಸರ್ಕಾರದ ಗ್ಯಾರಂಟಿ ಯೋಜನೆಗಳು ಕೈಹಿಡಿದರೆ ಗೆಲುವು ಕಷ್ಟವಾಗಲಾರದು ಎಂಬ ವಿಶ್ಲೇಷಣೆಗಳು ನಡೆದಿವೆ.

ಉಭಯ ಪಕ್ಷಗಳಿಗೂ ಪ್ರತಿಷ್ಠೆಯ ಕಣ:ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ದಿನಗಳ ಪ್ರವಾಸ ಕೈಗೊಂಡು ಸರ್ಕಾರದ ಸಾಧನೆ ಹಾಗೂ ಅನುಕಂಪದ ಅಲೆಗೆ ಜೋತು ಬಿದ್ದು, ಕಾಂಗ್ರೆಸ್ ಗೆಲುವಿಗೆ ಇನ್ನಿಲ್ಲದ ಕಸರತ್ತು ಮಾಡಿದ್ದಾರೆ. ಅವರಿಗೆ ಜೊತೆಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪೂರ ಹಾಗೂ ಸಚಿವ ಸತೀಶ ಜಾರಕಿಹೋಳಿ ಅವರು ಕ್ಷೇತ್ರದಲ್ಲಿ ಬೀಡು ಬಿಟ್ಟು ಚುನಾವಣೆ ತಂತ್ರ ರೂಪಿಸಿದ್ದರು.

ಬಿಜೆಪಿಯೂ ಸಹ ಗೆಲುವಿಗೆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಬೀಡು ಬಿಟ್ಟು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರದ ಜೊತೆಗೆ ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿ ಚುನಾವಣೆ ಮಾಡಿದರು. ಜೊತೆಗೆ ಬಿಜೆಪಿಯ ಉಚ್ಚಾಟಿತ ಶಾಸಕ ಯತ್ನಾಳ ಅವರನ್ನು ಕರೆತಂದು ಪ್ರಚಾರ ಮಾಡಿಸಿ ಹಿಂದೂ ಮತಗಳ ಕ್ರೋಡೀಕರಣಕ್ಕೆ ಮುಂದಾಗಿದ್ದರು. ಸೋಮವಾರ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ.