ಸಾರಾಂಶ
ಸಿಎಂ ಸಿದ್ದರಾಮಯ್ಯ ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆವ ಸರ್ಕಾರ ಎಂದು ಸಾಬೀತುಪಡಿಸಿದ್ದಾರೆ ಎಂದು ಶಾಸಕ ಎಚ್.ವೈ.ಮೇಟಿ ಬಣ್ಣಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಒಂದು ದಶಕದಿಂದ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಬೇಕೆನ್ನುವ ಈ ಭಾಗದ ಜನರ ಆಶಯಕ್ಕೆ ಪೂರಕವಾಗಿ 2025-26ರ ಬಜೆಟ್‌ನಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆವ ಸರ್ಕಾರ ಎಂದು ಸಾಬೀತುಪಡಿಸಿದ್ದಾರೆ ಎಂದು ಶಾಸಕ ಎಚ್.ವೈ.ಮೇಟಿ ಬಣ್ಣಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಶಾಕರು, ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಅಡಿಯಲ್ಲಿ ಅಥವಾ ಘಟಕ ಎಂದರೆ ವಿಶ್ವವಿದ್ಯಾಲಯದಲ್ಲಿ ಅಂದಾಜು ₹2 ಸಾವಿರ ಕೋಟಿ ಠೇವಣಿ ನಿಧಿಯಲ್ಲಿ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಪ್ರತಿವರ್ಷ ತಲಾ ₹200 ಕೋಟಿಯಂತೆ ಮೂರು ವರ್ಷದಲ್ಲಿ ಕಾಲೇಜು ಸ್ಥಾಪನೆ ಸಂಪೂರ್ಣಗೊಳ್ಳಲಿದೆ.
ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವಂತೆ ಸಾಕಷ್ಟು ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತಲೇ ಇದ್ದೆ. ಬಾಗಲಕೋಟೆಯಿಂದ ಅನೇಕ ಶಿಕ್ಷಣ ಆಸಕ್ತರನ್ನು ಕರೆದುಕೊಂಡು ಹೋಗಿ ಒತ್ತಾಯ ಮಾಡಿಸಿದ್ದೆ. ಕಳೆದ ತಿಂಗಳು ಸಿಎಂ ಸಿದ್ದರಾಮಯ್ಯರನ್ನು ಖುದ್ದಾಗಿ ಭೇಟಿ ಮಾಡಿ ಈ ಬಜೆಟ್ ನಲ್ಲಿ ಘೋಷಣೆ ಮಾಡಿ ಎಂದು ಕೋರಿದ್ದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಜನಪರ ಹಾಗೂ ಎಲ್ಲ ವರ್ಗದವರಿಗೂ ಅನುಕೂಲವಾಗುವ ಬಜೆಟ್ ನೀಡಿದ್ದಲ್ಲದೆ ಬಾಗಲಕೋಟೆ ಮೆಡಿಕಲ್ ಕಾಲೇಜಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬಾಗಲಕೋಟೆ ಕ್ಷೇತ್ರದ ಅಭಿವೃದ್ಧಿ, ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಮುಳುಗಡೆ ಆಗುವ ಜಮೀನುಗಳಿಗೆ ಏಕಕಾಲಕ್ಕೆ ಭೂಸ್ವಾಧೀನ, ಕಾಮಗಾರಿಗಳು, ಏತ ನೀರಾವರಿ ಯೋಜನೆಗಳ ಕಾಮಗಾರಿಗೂ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಮಹತ್ವಾಕಾಂಕ್ಷಿ ಭಗವತಿ ಏತ ನೀರಾವರಿ ಉಪಕಾಲುವೆ ಜಾಲ ನಿರ್ಮಾಣಕ್ಕೆ ₹235 ಕೋಟಿ ಕೊಡಲಿದ್ದಾರೆ. ಪಿಎಂಕೆಎಸ್ ವೈ -ಎಐಬಿಪಿ ಯೋಜನೆಯಡಿ ಸಲ್ಲಿಸಲಿರುವ ಪ್ರಸ್ತಾವನೆಯಲ್ಲೂ ಕ್ಷೇತ್ರದ ಏತ ನೀರಾವರಿ ಇದೆ. ನಾನು ಪ್ರತಿನಿಧಿಸುವ ಬಾಗಲಕೋಟೆಗೆ ವೈದ್ಯಕೀಯ ಶಿಕ್ಷಣ ಹಾಗೂ ನೀರಾವರಿ ಕ್ಷೇತ್ರಕ್ಕೆ ನಮ್ಮ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ಒದಗಿಸಿದ್ದು, ವೈಯಕ್ತಿಕವಾಗಿ ಹಾಗೂ ಕ್ಷೇತ್ರದ ಜನತೆಯ ಪರವಾಗಿ ಸಿಎಂಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.2024-25ನೇ ಸಾಲಿನ ಬಜೆಟ್ ಅತ್ಯುತ್ತಮ ಬಜೆಟ್. ದಾಖಲೆಯ 16ನೇ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಆರ್ಥಿಕ ಶಿಸ್ತು ಕಾಯ್ದುಕೊಂಡು ಪಂಚ ಗ್ಯಾರಂಟಿಗಳ ಜೊತೆಗೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಿದ್ದಾರೆ. ರೈತರು, ಕಾರ್ಮಿಕರು, ಪ.ಜಾತಿ, ಪ. ಪಂಗಡ, ಮಹಿಳೆಯರು, ಆರ್ಥಿಕವಾಗಿ ಹಿಂದುಳಿದವರು, ಅಲ್ಪಸಂಖ್ಯಾತರ ಕಲ್ಯಾಣ ಆಯವ್ಯಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಬಾಗಲಕೋಟೆ ಕ್ಷೇತ್ರಕ್ಕೆ ವಿಶೇಷ ಆದ್ಯತೆ ಸಿಕ್ಕಿದೆ.
ಎಚ್.ವೈ. ಮೇಟಿ ಶಾಸಕರು, ಬಾಗಲಕೋಟೆ.