ದಾವಣಗೆರೆ/ಹೊನ್ನಾಳಿ: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಪೂರ್ವನಿಯೋಜಿಕ ಕೃತ್ಯವಾಗಿದೆ. ಕಾಂಗ್ರೆಸ್ ಸರ್ಕಾರವು ಓಲೈಕೆ ರಾಜಕಾರಣ ಮಾಡಿ, ರಾಜ್ಯವನ್ನು ಇಂತಹ ದುಸ್ಥಿತಿಗೆ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಹೊನ್ನಾಳಿ ತಾಲೂಕಿನ ಘಂಟಾಪುರ ಗ್ರಾಮಕ್ಕೆ ಶನಿವಾರ ಬಿಜೆಪಿ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ ಜಿ ಯೋಜನೆ ಕುರಿತ ಜನಜಾಗೃತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದ್ವೇಷ ಭಾಷಣದ ಹೆಸರಿನಲ್ಲಿ ಕಾಯ್ದೆ ತಂದು, ವಿಪಕ್ಷಗಳ ಧ್ವನಿ ಅಡಗಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.

ನ್ಯಾಮತಿ ತಾಲೂಕಿನ ಸೂರಕೊಂಡನಕೊಪ್ಪ ಕ್ಷೇತ್ರದಲ್ಲಿ ಶ್ರೀ ಸಂತ ಸೇವಾಲಾಲ್‌ ಜಯಂತಿ ವೇಳೆ ಕಪ್ಪುಬಟ್ಟೆ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದ ಲಂಬಾಣಿ ಸಮುದಾಯದ ಮಾಲಾಧಾರಿ ಯುವಕರ ಮೇಲೆ ಎಫ್ಐಆರ್‌ ಮಾಡಿ, ಬಂಧಿಸಲಾಗುತ್ತಿದೆ. ಎಫ್ಐಆರ್‌ ದಾಖಲಿಸುವಂತಹ ಘೋರ ಅಪರಾಧವನ್ನು ಮಾಲಾಧಾರಿಗಳು ಮಾಡಿದ್ದಾದರೂ ಏನು? ಸರ್ಕಾರದ ವಿರುದ್ಧ ಪ್ರತಿಭಟಿಸುವುದೇ ಘೋರ ಅಪರಾಧವೇ ಎಂದು ವಿಜಯೇಂದ್ರ ಕಿಡಿಕಾರಿದರು.

ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಇಬ್ಬರು ಆಪ್ತ ಸಹಾಯಕರು ₹5 ಲಕ್ಷ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆಂಬ ಪ್ರಕರಣ ಬಗ್ಗೆ ಈಗಷ್ಚೇ ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಪಡೆದು, ಮಾತನಾಡುವೆ ಎಂದಷ್ಟೇ ಹೇಳಿದರು.

ಮುಂದಿನ ಸಿಎಂ ವಿಜಯೇಂದ್ರ ಅಂತ ಘೋಷಣೆ:


ಹೊನ್ನಾಳಿ ತಾ. ಘಂಟಾಪುರ ಗ್ರಾಮದ ನಂತರ ತರಗನಹಳ್ಳಿ ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಪುಷ್ಪವೃಷ್ಟಿ ಮೂಲಕ ಮುಂದಿನ ಸಿಎಂ ಬಿ.ವೈ.ವಿಜಯೇಂದ್ರ ಎಂಬ ಘೋಷಣೆ ಮೊಳಗಿಸಿದರು. ಇದಕ್ಕೂ ಮುನ್ನ ಶ್ರೀ ಸಂತ ಸೇವಾಲಾಲ್‌ ದೇವಸ್ಥಾನಕ್ಕೆ ವಿಜಯೇಂದ್ರ ಭೇಟಿ ನೀಡಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಅನೇಕ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು. ಮಾರ್ಗದುದ್ದಕ್ಕೂ ಮುಂದಿನ ಮುಖ್ಯಮಂತ್ರಿ ಬಿ.ವೈ.ವಿಜಯೇಂದ್ರಗೆ ಜಯವಾಗಿ ಎಂಬ ಘೋಷಣೆಗಳು ಮೊಳಗುತ್ತಿದ್ದವು.

- - -

-(ಫೋಟೋ ಬರಲಿದೆ.)