ಸಾಂಸ್ಕೃತಿಕ ನೆಲೆಯೊಂದಿಗೆ ರೂಪಿಸಿಕೊಂಡ ಬಾಗಲಕೋಟೆ ಕನ್ನಡ ಸಾಹಿತ್ಯ ಲೋಕದ ಗಟ್ಟಿಕೋಟೆಯಾಗಿದೆ ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆನಂದ ಎಸ್. ದೇಶಪಾಂಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಾಂಸ್ಕೃತಿಕ ನೆಲೆಯೊಂದಿಗೆ ರೂಪಿಸಿಕೊಂಡ ಬಾಗಲಕೋಟೆ ಕನ್ನಡ ಸಾಹಿತ್ಯ ಲೋಕದ ಗಟ್ಟಿಕೋಟೆಯಾಗಿದೆ ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆನಂದ ಎಸ್. ದೇಶಪಾಂಡೆ ಹೇಳಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ ಹಾಗೂ ಬಾಗಲಕೋಟೆಯ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ವಿಶ್ವಮಾನವ ಸಭಾಭವನದಲ್ಲಿ ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಹಸ್ತಪ್ರತಿಗಳು ನಮ್ಮ ನಾಡಿನ ಆಸ್ತಿಯಾಗಿದ್ದು, ನಮ್ಮ ಪೂರ್ವಜರು ನಮಗೆ ಕೊಟ್ಟ ಜ್ಞಾನ ಸಂಪತ್ತು. ನಮ್ಮ ಪೂರ್ವಜರ ಸಂಪ್ರದಾಯ, ಇತಿಹಾಸ, ಆಚರಣೆಗಳ ಬಗ್ಗೆ ತಿಳಿಯಲು ಹಸ್ತಪ್ರತಿಗಳ ಜ್ಞಾನ ಅಗತ್ಯವಾಗಿದೆ. ಹೀಗಾಗಿ ಬಾಗಲಕೋಟೆಯಲ್ಲಿ ಆಯೋಸಿರುವ ಈ ಹಸ್ತಪ್ರತಿ ಸಮ್ಮೇಳನ ನಿಜಕ್ಕೂ ಹೃದಯಮುಟ್ಟುವ ಸಮ್ಮೇಳನವಾಗಿದೆ. ಇಂತಹ ಸಮ್ಮೇಳನದಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ಸಂಪತ್ತು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಬಿವಿವಿ ಸಂಘದ ಆಡಳಿತಾಧಿಕಾರಿ, ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅವರು ಡಾ.ವೀರೇಶ ಬಡಿಗೇರ ಅವರ ಸಂಪದಾನೆಯ ಹಸ್ತಪ್ರತಿ ವ್ಯಾಸಂಗ-25 ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.ಸಮ್ಮೇಳನಾಧ್ಯಕ್ಷ ಪ್ರೊ.ಮಲ್ಲೇಪುರ ಜಿ. ವೆಂಕಟೇಶ ಮಾತನಾಡಿ, ಕರ್ನಾಟಕ ಹಸ್ತಪ್ರತಿ ಸಂಗ್ರಾಲಯ ಸ್ಥಾಪನೆಗೊಂಡರೆ ನಾಡಿನ ಕವಿಗಳ, ಶಾಸ್ತ್ರಕಾರರ ಮತ್ತು ವಿವಿಧ ಕುಶಲಕರ್ಮಿಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕವೇ ಅನಾವರಣಗೊಳ್ಳಲು ಅನುಕೂಲವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ ದೇಶದ ಏಕೈಕ ಅಧ್ಯಯನ ವಿಭಾಗವಾಗಿದೆ. ಅದು ಕನ್ನಡ ವಿಶ್ವವಿದ್ಯಾಲಯದಲ್ಲಿರುವುದು ಹೆಮ್ಮೆಯ ಸಂಗತಿ. ಕವಿವಿ ಸಂಸ್ಥಾಪಕ ಕುಲಪತಿ ಡಾ. ಚಂದ್ರಶೇಕರ ಕಂಬಾರ ಅವರು ದೂರದೃಷ್ಟಿಯಿಂದ ಊರಿದ ಬೀಜ, ಇಂದು ಹೆಮ್ಮರವಾಗಿ ಬೆಳೆದಿದೆ, ಕನ್ನಡ ಎಲ್ಲ ಮಗ್ಗಲುಗಳಿಂದ ಬೆಳಗಬೇಕು, ಕರ್ನಾಟಕ ಪ್ರಾಚೀನತೆಯ ಮರುಶೋಧ ಮತ್ತು ಹೊಸ ಅನುಸಂಧಾನ ನಡೆಯಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಇದರ ಅಧ್ಯಕ್ಷ ಪ್ರೊ.ಪಿ.ಬಿ. ಬಡಿಗೇರ, ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸೋಮಲಿಂಗ ಗೆಣ್ಣೂರ, ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ನಂದಿನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಸ್ವಾಗತಿಸಿದರು. ಪ್ರೊ. ಸಂಪತ್ತ ಲಮಾಣಿ ವಂದಿಸಿದರು. ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು.ಸಮ್ಮೇಳನಾಧ್ಯಕ್ಷರ ಮೇರವಣಿಗೆ:
ಎತ್ತಿನ ಬಂಡಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ರೇಷ್ಮೆ ಪೇಟ ಧರಿಸಿದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ತೆಗ್ಗಿ ಗ್ರಾಮದ ಡೊಳ್ಳು ಹಾಗೂ ವಿವಿಧ ವಾದ್ಯದೊಂದಿಗೆ ನವನಗರದ ರಾಜೀವ ಗಾಂಧಿ ಕಾಲೋನಿ ವೃತ್ತದಿಂದ ಪ್ರಾರಂಭವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಮುಖ ರಸ್ತೆಯ ಮೂಲಕ ಕಾಲೇಜಿಗೆ ಆಗಮಿಸಿತು. ಕುಲಪತಿಗಳು, ಗಣ್ಯರು, ಪ್ರಾಚಾರ್ಯರು, ಅತಿಥಿಗಳು, ಸಾಹಿತಿಗಳು, ಸಂಶೋಧನಾರ್ಥಿಗಳು, ದೇಸಿ ಉಡುಗೆಯಲ್ಲಿದ್ದ ಬೋಧಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.