ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಆಗ್ರಹ

| Published : Dec 20 2023, 01:15 AM IST

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಯಿತು.

- ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಧಾರವಾಡ

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಯಿತು.

ಕಲಘಟಗಿ ತಾಲೂಕಿನಲ್ಲಿ ಸುಮಾರು ಏಳು ದಶಕಗಳಿಂದ ಭೂಹೀನ ಮತ್ತು ಬಡ ರೈತ ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯದ ಕುರುಚಲುಗಿಡ, ಕಲ್ಲು ಭೂಮಿ ಇರುವ ಪ್ರದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದಾರೆ. ಕಲಘಟಗಿ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸುಮಾರು ವರ್ಷಗಳಿಂದ ಕಂದಾಯ ಹಾಗೂ ಅರಣ್ಯ ಭೂಮಿಯಲ್ಲಿ ಜೀವನೋಪಾಯಕ್ಕಾಗಿ ಬಡರೈತರು ಕೃಷಿ ಮಾಡುತ್ತಾ ಬಂದಿರುತ್ತಾರೆ. ಈಗಾಗಲೇ ಸರ್ಕಾರ ಬದಲಾವಣೆಯಾಗಿ 6 ತಿಂಗಳು ಕಳೆದರೂ ಇಲ್ಲಿ ವರೆಗೂ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಿರುವುದಿಲ್ಲ. ಕೂಡಲೇ ಸರ್ಕಾರ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಿ ಫಾರಂ ನಂ.57 ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಸಮಿತಿಯಲ್ಲಿ ಪರಿಶೀಲಿಸಿ ಕೂಡಲೇ ತಾಲೂಕಿನ ಎಲ್ಲಾ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಇಲ್ಲಿಯವರೆಗೆ ಬಗರ್ ಹುಕುಂ ಸಾಗುವಳಿದಾರರ 12 ಲಕ್ಷಕ್ಕಿಂತಲೂ ಹೆಚ್ಚು ಅರ್ಜಿಗಳು ಸರ್ಕಾರದ ಮುಂದೆ ಇದ್ದರು ಅವರುಗಳಿಗೆ ಹಕ್ಕುಪತ್ರ ಕೊಟ್ಟಿಲ್ಲ. ಇನ್ನೂ ಲಕ್ಷಾಂತರ ಭೂಹೀನ ಹಾಗೂ ಬಡ ರೈತ ಕೃಷಿ ಕಾರ್ಮಿಕರು ಹಕ್ಕುಪತ್ರ ಪಡೆಯಲು ಅರ್ಜಿ ಹಾಕಬೇಕೆಂದು ಕಾಯುತ್ತಿದ್ದರೂ ಸರ್ಕಾರ ಸೂಕ್ತ ತೀರ್ಮಾನ ತೆಗೆದು ಕೊಳ್ಳದ ಪರಿಣಾಮವಾಗಿ ಬಗರ್ ಹುಕುಂ ಸಾಗುವಳಿದಾರರು ಮತ್ತಷ್ಟು ಆತಂಕದಿಂದ ಜೀವನ ಸಾಗಿಸುವಂತಾಗಿದೆ. ಅಲ್ಲದೇ, ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ರೈತರಿಗೆ ಸೂಕ್ತ ರಕ್ಷಣೆಯೂ ಸಿಗುತ್ತಿಲ್ಲ. ಅವರು ಸಾಕಷ್ಟು ರೀತಿಯಲ್ಲಿ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಹಕ್ಕುಪತ್ರ ನೀಡುವವರೆಗೆ ಅಂತಹ ರೈತರ ಜಮೀನುಗಳಿಗೆ ಸರ್ಕಾರ ಸೂಕ್ತ ರಕ್ಷಣೆ ಕೊಡಬೇಕು. ಬಗರ್ ಹುಕುಂ ಸಾಗುವಳಿದಾರರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ಕಿರುಕುಳ ನಿಲ್ಲಿಸಬೇಕು ಮತ್ತು ಸಾಗುವಳಿದಾರರ ಮೇಲಿನ ಕೇಸ್ ಗಳನ್ನ ವಾಪಸ್ ಪಡೆಯಬೇಕು. ಬಗರ್ ಹುಕುಂ ಸಾಗುವಳಿ ಮಾಡುತ್ತಿರುವವರನ್ನು ಮಾನವೀಯತೆಯ ದೃಷ್ಟಿಯಿಂದ ನೋಡಬೇಕಾಗಿದೆ ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರೇಡ್ 2 ತಹಸೀಲ್ದಾರ್‌ ಬಸವರಾಜ ಹೊಕ್ಕಣ್ಣವರ ಒಂದು ವಾರದ ಒಳಗೆ ತಹಸೀಲ್ದಾರ್‌ರ ಜೊತೆಗೆ ಸಭೆ ಕರೆಯುವುದಾಗಿ ಮತ್ತು ಭೂ ಮಂಜೂರಾತಿ ಸಮಿತಿ ರಚಿಸುವ ಭರವಸೆ ನೀಡಿದರು.ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಜಡಗಣ್ಣವರ್, ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಉಪಾಧ್ಯಕ್ಷರಾದ ಹನುಮೇಶ ಹುಡೇದ, ಸಂತೋಷ್ ಗೋರ್ಪಡೆ, ಶಿವಲಿಂಗಪ್ಪ ಉಣಕಲ್, ಈರಪ್ಪ ಅಂಗಡಿ, ಗಣೇಶ ಲಮಾಣಿ ಮತ್ತಿತರರು ಇದ್ದರು.