23ರಂದು ಕದ್ರಿ ಗೋಪಾಲನಾಥ್‌ ಸ್ಮರಣಾರ್ಥ ‘ಕದ್ರಿ ಸಂಗೀತ ಸೌರಭ’

| Published : Dec 20 2023, 01:15 AM IST

23ರಂದು ಕದ್ರಿ ಗೋಪಾಲನಾಥ್‌ ಸ್ಮರಣಾರ್ಥ ‘ಕದ್ರಿ ಸಂಗೀತ ಸೌರಭ’
Share this Article
  • FB
  • TW
  • Linkdin
  • Email

ಸಾರಾಂಶ

ಪದ್ಮಶ್ರೀ ಪುರಸ್ಕೃತ ದಿ.ಡಾ. ಕದ್ರಿ ಗೋಪಾಲನಾಥ್ ಅವರ 74ನೇ ಹುಟ್ಟುಹಬ್ಬದ ಅಂಗವಾಗಿ ಡಾ.ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ವತಿಯಿಂದ ‘ಕದ್ರಿ ಸಂಗೀತ ಸೌರಭ 2023’ ಕಾರ್ಯಕ್ರಮ ಡಿ.23ರಂದು ನಗರದ ಉರ್ವಸ್ಟೋರ್‌ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ‘ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಚಕ್ರವರ್ತಿ, ಕಲೈಮಾಮಣಿ, ಪದ್ಮಶ್ರೀ ಪುರಸ್ಕೃತ ದಿ.ಡಾ. ಕದ್ರಿ ಗೋಪಾಲನಾಥ್ ಅವರ 74ನೇ ಹುಟ್ಟುಹಬ್ಬದ ಅಂಗವಾಗಿ ಡಾ.ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ವತಿಯಿಂದ ‘ಕದ್ರಿ ಸಂಗೀತ ಸೌರಭ 2023’ ಕಾರ್ಯಕ್ರಮ ಡಿ.23ರಂದು ನಗರದ ಉರ್ವಸ್ಟೋರ್‌ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಕದ್ರಿ ಗೋಪಾಲನಾಥ್‌ ಅವರ ಪುತ್ರ, ಸಂಸ್ಥೆಯ ಕಾರ್ಯದರ್ಶಿ ಕದ್ರಿ ಮಣಿಕಾಂತ್‌, ಮಂಗಳೂರನ್ನು ಕಲ್ಚರಲ್‌ ಹಬ್‌ ಮಾಡಬೇಕು ಎಂಬ ಉದ್ದೇಶದಿಂದ ಕದ್ರಿ ಗೋಪಾಲನಾಥ್‌ ಸ್ಮರಣಾರ್ಥ ಯುವ ಕಲಾವಿದರಿಗೆ ವೇದಿಕೆ ಒದಗಿಸಲಾಗುತ್ತಿದೆ. 23ರಂದು ಬೆಳಗ್ಗಿನಿಂದ ಉದಯೋನ್ಮುಖ ಕಲಾವಿದರಿಗೆ ಅವಕಾಶ ಒದಗಿಸಲಿದ್ದು, ದಿನವಿಡಿ ಭವ್ಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಪಂಡಿತ್‌ ವೆಂಕಟೇಶ್‌ ಕುಮಾರ್‌ಗೆ ಪ್ರಶಸ್ತಿ:

ಅಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕ, ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ‘ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 50 ಸಾವಿರ ರು. ನಗದು ಹಾಗೂ ಬೆಳ್ಳಿಯ ಫಲಕ ಹೊಂದಿರುತ್ತದೆ. ನಂತರ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಕದ್ರಿ ಮಣಿಕಾಂತ್‌ ತಿಳಿಸಿದರು.

ಬೆಳಗ್ಗೆ 9.30ಕ್ಕೆ ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 5.30ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಳ್ವಾಸ್‌ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ಸಂಸದ ನಳಿನ್‌ ಕುಮಾರ್ ಕಟೀಲು, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶಾಸಕರುಗಳು, ವಿವಿಧ ಕ್ಷೇತ್ರದ ಗಣ್ಯರು, ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕದ್ರಿ ಮಣಿಕಾಂತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕದ್ರಿ ಗೋಪಾಲನಾಥ್‌ ಅವರ ಪುತ್ರಿ ಅಂಬಿಕಾ ಮೋಹನ್‌, ರಮೇಶ್‌ನಾಥ್‌ ಕದ್ರಿ, ಜಗದೀಶ್‌ ಇದ್ದರು.

ಸಂಗೀತ ಕಲಾವಿದರಿಗೆ ವಿಮೆ, ಪಿಂಚಣಿ

ಇದೇ ಮೊದಲ ಬಾರಿಗೆ ಟ್ರಸ್ಟ್ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಅರ್ಹ ಸಂಗೀತ ಕಲಾವಿದರಿಗೆ ಜೀವ ಹಾಗೂ ಆರೋಗ್ಯ ವಿಮೆ ಮಾಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲದೆ, 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಹಾಗೂ ನಿವೃತ್ತ ಕಲಾವಿದರಿಗೆ ಮಾಸಿಕ ಪಿಂಚಣಿ ನೀಡುವುದು, ಉತ್ತಮವಾಗಿ ಓದುತ್ತಿರುವ ಐವರು ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ಶಿಕ್ಷಣ ವೆಚ್ಚ ಭರಿಸುವ ಯೋಜನೆ ಸಿದ್ಧಗೊಳಿಸಲಾಗಿದೆ ಎಂದ ಕದ್ರಿ ಮಣಿಕಾಂತ್‌, ಮುಂದಿನ ವರ್ಷ ಕದ್ರಿ ಗೋಪಾಲನಾಥ್‌ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಒಂದೆರಡು ವಾರಗಳ ಸಂಗೀತ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.