ಸಾರಾಂಶ
ಎಸ್‌ಸಿಎಸ್‌ಪಿ, ಟಿಎಸ್‌ಪಿ ಮೀಸಲು ಅನುದಾನದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ಚಂದಕವಾಡಿ ಹೋಬಳಿ ಘಟಕದ ವತಿಯಿಂದ ಚಾಮರಾನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಎಸ್‌ಸಿಎಸ್‌ಪಿ, ಟಿಎಸ್‌ಪಿ ಮೀಸಲು ಅನುದಾನದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ಚಂದಕವಾಡಿ ಹೋಬಳಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ತಾಲೂಕಿನ ಚಂದಕವಾಡಿ ಹೋಬಳಿ ಕೇಂದ್ರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಗ್ರಾಮದ ಬಿ.ಆರ್. ಹಿಲ್ಸ್ ರಸ್ತೆಯ ಮೂಲಕ ನಾಡಕಚೇರಿಗೆ ತೆರಳಿ ಉಪ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆ ಜಿಲ್ಲಾಧ್ಯಕ್ಷ ಎನ್. ನಾಗಯ್ಯ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್ಸಿ/ಎಸ್ಟಿಗಳ ಅಭಿವೃದ್ಧಿಗೆಂದು ಜಾರಿಗೆ ತಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ಹಣವನ್ನು ೨೦೨೩-೨೪ ಮತ್ತು ೨೦೨೪-೨೫ನೇ ಸಾಲಿನ ೨ ವರ್ಷಗಳಲ್ಲಿ ೨೫ ಸಾವಿರದ ೩೯೮ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಎಸ್‌ಸಿ/ಎಸ್‌ಟಿಗಳ ಕುತ್ತಿಗೆ ಕುಯ್ಯುವ ಕೆಲಸ ಮಾಡಿದೆ ಎಂದು ಆರೋಪಿಸಿದರು.ಇದುವರೆಗೆ ಈ ರೀತಿಯಾಗಿ ೭೦ ಸಾವಿರ ಕೋಟಿ ರು. ದುರ್ಬಳಕೆಯಾಗಿದೆ ಎನ್ನಲಾಗಿದೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಜಾರಿಯಾದಾಗಿನಿಂದ ಇದೂವರೆಗೆ ೨ ಲಕ್ಷದ ೫೬ ಸಾವಿರ ಕೋಟಿಗಳನ್ನು ಈ ಯೋಜನೆಗೆ ಒದಗಿಸಲಾಗಿದೆ. ಇಷ್ಟು ಹಣದಿಂದ ಕರ್ನಾಟಕದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಬಿಇ, ಎಂ.ಬಿ.ಬಿ.ಎಸ್,ಪಿಹೆಚ್‌ಡಿ ವರೆಗೆ ಉಚಿತ ಶಿಕ್ಷಣ ನೀಡಬಹುದಿತ್ತು. ಲಕ್ಷಾಂತರ ಎಸ್‌ಸಿ/ಎಸ್ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಒದಗಿಸಬಹುದಿತ್ತು ಎಂದರು.ಮನೆ ಇಲ್ಲದ ಪ್ರತಿಯೊಂದು ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಡಬಹುದಿತ್ತು. ಭೂರಹಿತ ಎಸ್‌ಸಿ/ಎಸ್‌ಟಿ ಕೃಷಿಕಾರ್ಮಿಕರಿಗೆ ತಲಾ ೫ ಎಕರೆ ಜಮೀನು ಖರೀದಿಸಿ ಕೊಡಬಹುದಿತ್ತು. ಪ್ರತಿಯೊಬ್ಬ ಎಸ್‌ಸಿ/ಎಸ್‌ಟಿ ರೋಗಿಗಳಿಗೂ ಉಚಿತ ಚಿಕಿತ್ಸೆ ಕೊಡಿಸಬಹುದಿತ್ತು. ಆದರೆ ಈ ಯೋಜನೆಯ ಶೇ. ೧೦ ರಷ್ಟೂ ಕೂಡ ಎಸ್‌ಸಿ/ಎಸ್‌ಟಿಗಳಿಗೆ ನೇರವಾಗಿ ತಲುಪುತ್ತಿಲ್ಲ. ಬದಲಾಗಿ ಅಧಿಕಾರಿಗಳು ಮತ್ತು ಮಂತ್ರಿ, ಶಾಸಕರು ನುಂಗಿ ನೀರು ಕುಡಿಯುತ್ತಿದ್ದಾರೆ. ಇದಕ್ಕೆ ಎಸ್‌ಟಿಗಳ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ೧೮೭ ಕೋಟಿ ರು. ಹಗರಣವೇ ಸಾಕ್ಷಿ ಎಂದರು.೨೦೨೩ರ ವಿಧಾನಸಭೆ ಮತ್ತು ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ ಮತ್ತು ಮೀಸಲಾತಿಯನ್ನು ರದ್ದು ಮಾಡುತ್ತದೆ ಎಂದು ಭಾವನಾತ್ಮಕವಾಗಿ ಎಸ್‌ಸಿ/ಎಸ್‌ಟಿ/ಓಬಿಸಿ/ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೆರಳಿಸಿ, ಈ ವರ್ಗದ ಶೇ.೯೦ರಷ್ಟು ಮತಗಳನ್ನು ಪಡೆದುಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಎಸ್ಸಿ, ಎಸ್ಟಿಗಳನ್ನು ಮುಖ್ಯಮಂತ್ರಿ ಮಾಡುವುದಿರಲಿ, ಉಪಮುಖ್ಯಮಂತ್ರಿಯನ್ನು ಮಾಡಲಿಲ್ಲ. ಸಂವಿಧಾನ ಉಳಿಸುತ್ತೇವೆಂದು ಕಾಂಗ್ರೆಸ್ ನಮಗೆ ಸಂವಿಧಾನಾತ್ಮಕವಾಗಿ ನೀಡಿರುವ ಎಲ್ಲಾ ಹಕ್ಕುಗಳನ್ನು ಮತ್ತು ಯೋಜನೆಗಳನ್ನು ಪ್ರತ್ಯಕ್ಷ, ಪರೋಕ್ಷವಾಗಿ ರದ್ದುಮಾಡುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಚಂದ್ರಕಾಂತ, ಹೋಬಳಿ ಘಟಕದ ಅಧ್ಯಕ್ಷ ಸಂತೋಷ, ಜಿಲ್ಲಾ ಸಂಯೋಜಕ ಅಮಚವಾಡಿ ಪ್ರಕಾಶ್, ರಾಜಶೇಖರ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ರಾಜೇಂದ್ರ, ಕಾರ್ಯದರ್ಶಿ ಎಸ್.ಪಿ.ಮಹೇಶ್, ತಾಲೂಕು ಅಧ್ಯಕ್ಷ ಚಂದ್ರಕಾಂತ್, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾರ್ಯದರ್ಶಿ ಶಂಕರ್, ಖಜಾಂಚಿ ಕೃಷ್ಣಮೂರ್ತಿ, ಹೋಬಳಿ ಘಟಕದ ಅಧ್ಯಕ್ಷ ಸಂತೋಷ, ಬಿವಿಎಫ್ ರವಿಮೌರ್ಯ, ಗ್ರಾಪಂ ಸದಸ್ಯ ಬಾಲರಾಜು, ಟೌನ್ ಅಧ್ಯಕ್ಷ ಗಾಳೀಪುರ ರಂಗಸ್ವಾಮಿ ಇತರರು ಭಾಗವಹಿಸಿದ್ದರು.