ಶ್ರೀತೊಳಪ್ಪರ್‌ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಬಾಯಿಬೀಗ..!

| Published : Sep 17 2025, 01:05 AM IST

ಸಾರಾಂಶ

ಮಕ್ಕಳಾದವರು ಮಕ್ಕಳನ್ನು ತೊಟ್ಟಿಲಿನಲ್ಲಿಟ್ಟಿಕೊಂಡು ತಲೆಯ ಮೇಲೆ ಹೊತ್ತು ಬಾಯಿಬೀಗ ಧರಿಸಿಕೊಂಡು ಹರಕೆ ತೀರಿಸಿದರು. ಅದರಂತೆ ಇಂದು ಏಳೂರು ಗ್ರಾಮಸ್ಥರು, ಬೇರೆ ಬೇರೆ ಜಿಲ್ಲೆಯಲ್ಲಿ ವಾಸವಾಗಿರುವ ಶ್ರೀಕಂಬದ ನರಸಿಂಹಸ್ವಾಮಿ ಒಕ್ಕಲಿನವರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ತಾಲೂಕು ಸಾತನೂರು ಬೆಟ್ಟದ ಶ್ರೀಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀತೊಳಪ್ಪರ್ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಾಯಿಬೀಗ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಶ್ರೀಕೃಷ್ಣಜನ್ಮಾಷ್ಟಮಿ ಅಂಗವಾಗಿ ಶ್ರೀಕಂಬದ ನರಸಿಂಹಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇದಕ್ಕೂ ಮುನ್ನ ಸ್ವಾಮಿಗೆ ಅಭಿಷೇಕ, ಹೂವಿನ ಅಲಂಕಾರ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಬಳಿಕ ಮಧ್ಯಾಹ್ನ 2 ಗಂಟೆ ಸಮಯಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಶ್ರೀಕಂಬದನರಸಿಂಹಸ್ವಾಮಿ ಒಕ್ಕಲಿನವರು ಸಾತನೂರು ಗ್ರಾಮದಲ್ಲಿರುವ ಶ್ರೀನರಸಿಂಹಸ್ವಾಮಿ ದೇವಾಲಯದ ಬಳಿ ಸೇರಿದ್ದರು. ಹರಕೆ ಹೊತ್ತವರು ಬಾಯಿಬೀಗ ಧರಿಸಿಕೊಂಡು ಶ್ರೀನರಸಿಂಹಸ್ವಾಮಿ ಹಾಗೂ ಶ್ರೀಬೀರೇಶ್ವರ ಸ್ವಾಮಿ ಉತ್ಸವಮೂರ್ತಿ ಜೊತೆಯಲ್ಲಿ ಸಾತನೂರು ಬೆಟ್ಟದಲ್ಲಿರುವ ಶ್ರೀಕಂಬದ ನರಸಿಂಹಸ್ವಾಮಿ ದೇಗುಲಕ್ಕೆ ಮೆರವಣಿಗೆಯಲ್ಲಿ ಆಗಮಿಸಿದರು.

ದೇವರ ಬಳಿ ಬಾಯಿಬೀಗವನ್ನು ತೆಗೆದು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುತ್ತಮುತ್ತಲ ಏಳೂರು ಗ್ರಾಮಸ್ಥರು ಬಾಯಿಬೀಗ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಮದುವೆ ಆಗದವರು, ಮಕ್ಕಳಾಗದವರು ಇಲ್ಲಿ ಸ್ವಾಮಿಗೆ ಹರಕೆ ಹೊತ್ತುಕೊಂಡರೆ ಫಲ ನೀಡುವುದೆಂಬ ನಂಬಿಕೆ ಇದೆ.

ಮಕ್ಕಳಾದವರು ಮಕ್ಕಳನ್ನು ತೊಟ್ಟಿಲಿನಲ್ಲಿಟ್ಟಿಕೊಂಡು ತಲೆಯ ಮೇಲೆ ಹೊತ್ತು ಬಾಯಿಬೀಗ ಧರಿಸಿಕೊಂಡು ಹರಕೆ ತೀರಿಸಿದರು. ಅದರಂತೆ ಇಂದು ಏಳೂರು ಗ್ರಾಮಸ್ಥರು, ಬೇರೆ ಬೇರೆ ಜಿಲ್ಲೆಯಲ್ಲಿ ವಾಸವಾಗಿರುವ ಶ್ರೀಕಂಬದ ನರಸಿಂಹಸ್ವಾಮಿ ಒಕ್ಕಲಿನವರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಹರಕೆ ಹೊತ್ತವರು ಭಕ್ತರಿಗೆ ಪಾನಕ-ಮಜ್ಜಿಗೆ, ಬಾದಾಮಿ ಹಾಲು ವಿತರಣೆ ಮಾಡಿದರು. ಶ್ರೀನರಸಿಂಹಸ್ವಾಮಿ ದೇವಾಲಯ ಟ್ರಸ್ಟ್‌ನಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಪಿ.ಮಹೇಶ್, ಎಸ್.ಪಿ. ಸತೀಶ್, ಶ್ರೀಕಾಂತ್, ಶಂಕರ್, ಬೋರೇಗೌಡ, ಬಾಲರಾಜು, ಸುರೇಶ, ಧರ್ಮ, ನರಸಿಂಹರಾಜು ಸೇರಿದಂತೆ ಉತ್ಸವ, ಮೆರವಣಿಗೆ, ಅನ್ನಸಂತರ್ಪಣೆಯ ಜವಾಬ್ದಾರಿ ಹೊತ್ತಿದ್ದರು. ಭಕ್ತರಿಗೆ ಅನಾನುಕೂಲವಾಗದಂತೆ ವ್ಯವಸ್ಥೆ ಮಾಡಿದ್ದರು.