ಸ್ಥಳೀಯರು ಸೇರಿದಂತೆ ನೆರೆ ಜಿಲ್ಲೆಗಳ ಗಡಿಭಾಗದ ವಲಸಿಗರಿಗೆ ಗುಣಮಟ್ಟದಲ್ಲಿ ಪ್ರಾಥಮಿಕ ಶಿಕ್ಷಣ ಕಲ್ಪಿಸುವಲ್ಲಿ ಕುಶಾಲನಗರ ಬೈಚನಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಶಸ್ಸು ಕಂಡಿದೆ.

ಕನ್ನಡಪ್ರಭವಾರ್ತೆ ಕುಶಾಲನಗರ

ಸ್ಥಳೀಯರು ಸೇರಿದಂತೆ ನೆರೆ ಜಿಲ್ಲೆಗಳ ಗಡಿಭಾಗದ ವಲಸಿಗರಿಗೆ ಗುಣಮಟ್ಟದಲ್ಲಿ ಪ್ರಾಥಮಿಕ ಶಿಕ್ಷಣ ಕಲ್ಪಿಸುವಲ್ಲಿ ಕುಶಾಲನಗರ ಬೈಚನಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಶಸ್ಸು ಕಂಡಿದೆ. 2007 -08 ರಲ್ಲಿ ಆರಂಭವಾದ ಒಂದರಿಂದ ಏಳನೇ ತರಗತಿಯ ತನಕದ ಈ ಸರ್ಕಾರಿ ಶಾಲೆಯಲ್ಲಿ 85ಕ್ಕೂ ಅಧಿಕ ಬಡ ಮಧ್ಯಮ ವರ್ಗದ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮುಖ್ಯೋಪಾಧ್ಯಾಯರು, ಶಿಕ್ಷಕ ಶಿಕ್ಷಕಿಯರು ಉತ್ತಮ ವಿದ್ಯಾಭ್ಯಾಸ ನೀಡುವುದರೊಂದಿಗೆ ಮಕ್ಕಳನ್ನು ಕ್ರೀಡೆ ಮತ್ತಿತರ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.ಕ್ರೀಡಾ ಕ್ಷೇತ್ರದಲ್ಲಿ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಈ ಶಾಲೆಯದ್ದಾಗಿದೆ. ಹಾಸನ ಮತ್ತು ಮೈಸೂರು ಗಡಿಭಾಗದ ವಲಸೆ ಕುಟುಂಬದ ಹಲವು ಗುಡಿಸಲು ನಿವಾಸಿಗಳ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುವ ಅವಕಾಶ ಪಡೆದು ಇದೀಗ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ದೊರೆತಿದೆ ಎನ್ನುತ್ತಾರೆ ಇಲ್ಲಿನ ಮುಖ್ಯ ಶಿಕ್ಷಕಿ ಹೆಚ್ ಕೆ ಲಕ್ಷ್ಮಿ ಅವರು.

ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಪೋಷಕರು ಮತ್ತು ಮಕ್ಕಳು ಶಾಲೆಯಲ್ಲಿ ಅಕ್ಷರ ದಾಸೋಹದೊಂದಿಗೆ ಅನ್ನದಾಸೋಹ ಕೂಡ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಅರ್ಧ ಎಕರೆ ವಿಸ್ತೀರ್ಣದ ವ್ಯಾಪ್ತಿಯ ಈ ಶಾಲಾ ಆವರಣದಲ್ಲಿ ಉತ್ತಮ ಉದ್ಯಾನವನ ನಿರ್ಮಿಸಲಾಗಿದ್ದು ಹಲವು ರೀತಿಯ ಹೂ ಗಿಡಗಳು ಗಿಡಮರಗಳನ್ನು ಬೆಳೆಸಿದ್ದು ಈ ಶಾಲೆಯ ಅಂದ ಹೆಚ್ಚಿಸಿದೆ. ಆಂಗ್ಲ ಮಾಧ್ಯಮದ ಭರಾಟೆಯ ನಡುವೆ ಈ ಸರ್ಕಾರಿ ಕನ್ನಡ ಶಾಲೆ ಗುಣಮಟ್ಟ ಕಾಯ್ದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಥಳೀಯ ನಿವಾಸಿ ಹಾಗೂ ಕುಶಾಲನಗರ ಪುರಸಭೆಯ ಮಾಜಿ ಸದಸ್ಯರಾದ ಜಗದೀಶ್ ತಿಳಿಸಿದ್ದಾರೆ.

ಖಾಸಗಿ ವ್ಯಾಮೋಹದಿಂದ ವಿದ್ಯಾರ್ಥಿಗಳ ಕೊರತೆ: ಖಾಸಗಿ ಶಾಲೆಗಳ ಮೇಲಿನ ಮಕ್ಕಳ ಪೋಷಕರ ವ್ಯಾಮೋಹದ ಕಾರಣ ಶಾಲೆಯಲ್ಲಿ ಒಂದನೇ ತರಗತಿಗೆ ಮಕ್ಕಳ ಕೊರತೆ ಉಂಟಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು.

ಮುಖ್ಯ ಶಿಕ್ಷಕಿ ಸೇರಿದಂತೆ ಐದು ಮಂದಿ ಶಿಕ್ಷಕಿಯರು ಮತ್ತು ಓರ್ವ ಅತಿಥಿ ಶಿಕ್ಷಕರು ಇಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ ಎಂದು ಸ್ಥಳೀಯರು ಕನ್ನಡ ಪ್ರಭ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸ್ಥಳೀಯ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪೋಷಕರು ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಸೇರ್ಪಡೆಗೊಳಿಸಿ ಕನ್ನಡ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಬೆಂಬಲ ನೀಡಬೇಕಾಗಿದೆ ಎನ್ನುತ್ತಾರೆ ಶಿಕ್ಷಕರು. 85 ಮಕ್ಕಳು: ಪ್ರಾರಂಭದಲ್ಲಿ 120ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಪ್ರಸಕ್ತ 85 ವಿದ್ಯಾರ್ಥಿಗಳನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸ್ಥಳೀಯ ಸರ್ಕಾರಿ ವಸತಿ ನಿಲಯಗಳಲ್ಲಿ ಉಳಿದು ತಮ್ಮ ಶಿಕ್ಷಣಕ್ಕೆ ಈ ಶಾಲೆಯನ್ನು ಅವಲಂಬಿಸಿದ್ದಾರೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ನಿಯಮಾನುಸಾರ ಇಲ್ಲಿನ ತರಗತಿಗಳು ಸದ್ಯದಲ್ಲಿಯೇ ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸ್ಥಳಾಂತರ ವಾಗುವ ಸಾಧ್ಯತೆ ಇರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.