ಸರ್ಕಾರ ದರ ಅತೃಪ್ತಿ, ಬೈಲಹೊಂಗಲ ಬಂದ್‌

| Published : Nov 09 2025, 03:30 AM IST

ಸಾರಾಂಶ

ಪ್ರತಿ ಟನ್ ಕಬ್ಬಿಗೆ ₹3300 ನೀಡಲು ಸರ್ಕಾರ ಘೋಷಣೆ ಮಾಡಿರುವ ನಡುವೆಯೂ, ಜಿಲ್ಲಾ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಆಶ್ರಯದಲ್ಲಿ ಶನಿವಾರ ಬೈಲಹೊಂಗಲ ತಾಲೂಕು ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಬಂದ್ ಯಶಸ್ವಿಯಾಯಿತು. ಈ ವೇಳೆ ಅಂಗಡಿ ಮುಂಗಟ್ಟುಗಳಿಗೆ ಕಲ್ಲು ತೂರಿದ ಘಟನೆ ಜರುಗಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪ್ರತಿ ಟನ್ ಕಬ್ಬಿಗೆ ₹3300 ನೀಡಲು ಸರ್ಕಾರ ಘೋಷಣೆ ಮಾಡಿರುವ ನಡುವೆಯೂ, ಜಿಲ್ಲಾ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಆಶ್ರಯದಲ್ಲಿ ಶನಿವಾರ ಬೈಲಹೊಂಗಲ ತಾಲೂಕು ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಬಂದ್ ಯಶಸ್ವಿಯಾಯಿತು. ಈ ವೇಳೆ ಅಂಗಡಿ ಮುಂಗಟ್ಟುಗಳಿಗೆ ಕಲ್ಲು ತೂರಿದ ಘಟನೆ ಜರುಗಿದೆ.

ಬಂದ್ ಕಾಲಕ್ಕೆ ಬೆಳಗ್ಗೆ ಎಂದಿನಂತೆ ಬಸ್ ಸಂಚಾರ, ವ್ಯಾಪಾರ ವಹಿವಾಟುಗಳು ಪ್ರಾರಂಭಗೊಂಡು ನಂತರ ಪ್ರತಿಭಟನಾಕಾರರು ಚನ್ನಮ್ಮವೃತ್ತದಲ್ಲಿ ಜಮಾವಣೆಗೊಂಡು ಪ್ರತಿಭಟನೆ ಮಾರ್ಗದಲ್ಲಿ ಬರುವ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಿ ಅಕ್ರೋಶ ಹೊರಹಾಕಿ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್ ಸಂಚಾರ ಬಂದ್ ಮಾಡುವಂತೆ ಘಟಕ ವ್ಯವಸ್ಥಾಪಕರಿಗೆ ತಾಕೀತು ಮಾಡಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದಾಗ ತೆರೆದ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಗಾಬರಿಗೊಂಡ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟು ಬಂದ್ ಮಾಡಿದರು. ಪ್ರತಿಭಟನಾಕಾರರು ಕಾರ್ಖಾನೆ ಮಾಲೀಕರ ಮತ್ತು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು.ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ನ್ಯಾಯವಾದಿ ಶ್ರೀಶೈಲ ಬೋಳನ್ನವರ, ಶಂಕರ ಮಾಡಲಗಿ, ಎಫ್.ಎಸ್. ಸಿದ್ದನಗೌಡರ ಮಾತನಾಡಿ, ರಾಜ್ಯ ಸರ್ಕಾರ, ಸಕ್ಕರೆ ಕಾರ್ಖಾನೆ ಇಳುವರಿ ರಿಕವರಿ ಆಧಾರದ ಮೇಲೆ ಪ್ರತಿ ಟನ್‌ಗೆ ₹3300 ಘೋಷಣೆ ಮಾಡಿದೆ. ಇದು ಸರಿಯಾದ ಕ್ರಮವಲ್ಲ. ರೈತರ ಕಣ್ಣಿಗೆ ಮಣ್ಣೆರೆಚುವ ಕಾರ್ಯವಾಗಿದ್ದು ಇದರಿಂದ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕಾರ್ಖಾನೆಗಳು ತಮ್ಮ ಇಳುವರಿ ಕಡಿಮೆ ತೋರಿಸಲು ಪರೋಕ್ಷವಾಗಿ ಸಹಕಾರ ನೀಡಿದಂತಾಗುತ್ತದೆ. ಈ ನಿರ್ಧಾರವು ಯಾವುದೇ ರೈತರಿಗೆ ಪ್ರಯೋಜನವಿಲ್ಲ. ಒಂದು ವೇಳೆ ಕಾರ್ಖಾನೆಗೆ ಪೂರೈಸಿದ ಪ್ರತಿಯೊಬ್ಬ ಕಬ್ಬು ಬೆಳೆಗಾರನಿಗೆ ₹3300 ನೀಡವುದಾದರೆ ಸರ್ಕಾರ ಅಧಿಕೃತವಾಗಿ ಗೆಜೆಟ್ ಪ್ರತಿ ನೀಡಬೇಕು ಎಂದರು. ಮುಖ್ಯಮಂತ್ರಿಗಳು ರೈತರಲ್ಲಿಯೇ ಒಡೆದು ಆಳುವ ನೀತಿಯನ್ನು ಅನುಸರಿಸಿ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿದರು. ಸಿಎಂ ಸಿದ್ದರಾಮಯ್ಯ ಅವರು ಬೆಳಗ್ಗೆಯಿಂದ ಸಂಜೆವರೆಗೂ ಕಾರ್ಖಾನೆ ಮಾಲೀಕರು, ಜಿಲ್ಲಾಧಿಕಾರಿಗಳಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ಮಾಡಿ ಕೇವಲ ₹50 ಏರಿಕೆ ಮಾಡಿದ್ದು ಒಂದು ಕೆಜಿಗೆ 5 ಪೈಸೆಯಂತೆ ಏರಿಕೆ ಮಾಡಿದಂತಾಗಿದೆ. ರೈತರು ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆಯಿಲ್ಲದಂತಾಗಿದೆ. ರಸ್ತೆ ಮೇಲೆ ಕಬ್ಬಿನ ಹಾಲು ಮಾರುವ ಒಂದು ಗ್ಲಾಸಿಗೆ ₹20 ಪಡೆಯುತ್ತಾನೆ. ವರ್ಷಾನುಗಟ್ಟಲೇ ನೀರು ಹಾಯಿಸಿ ಬೆಳೆದ ರೈತನಿಗೆ ಕೇಳಿದ ಬೆಂಬಲ ಬೆಲೆ ಘೋಷಿಸಲು ಹಿಂದೇಟು ಹಾಕುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದರು.ಸರ್ಕಾರ ಎಲ್ಲಿಯವರೆಗೆ ಘೋಷಿಸಿದ ₹3300 ಅಧಿಕೃತ ಘೋಷಣೆ ಪತ್ರ ನೀಡುವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು. ಸಿಂದಗಿಯ ಪ್ರಭುಲಿಂಗ ಶರಣರು, ಶಂಕರ ಬೊಳನ್ನವರ, ಬೀರಪ್ಪ ದೇಶನೂರ, ರವಿ ಪಾಟೀಲ, ಹೇಮಾ ಕಾಜಗಾರ, ಮಹಾದೇವಿ ಹುಯಿಲಗೋಳ, ವಿಶಾಲಾಕ್ಷ್ಮಿ ಮೊಖಾಶಿ, ಭಾಗ್ಯಶ್ರೀ ಹಣಬರ, ಬಸನಗೌಡ ಪಾಟೀಲ, ಬಸವರಾಜ ಮೊಖಾಶಿ, ಸುರೇಶ ವಾಲಿ, ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಗೌರಿ, ಶಂಕರ ಬೋಳನ್ನವರ, ರಾಮು ರಜಪೂತ, ಶ್ರೀಕಾಂತ ಶಿರಹಟ್ಟಿ, ಸಂತೋಷ ಹಡಪದ, ಸಮಿ ಮಕಾನದಾರ, ಆನಂದಗೌಡ ಪಾಟೀಲ, ಮಹಾಂತೇಶ ಕಮತ, ವಿಠ್ಠಲ ಕಡಕೋಳ, ಬಸವರಾಜ ಹಣ್ಣಿಕೇರಿ, ಬಸವರಾಜ ಯಾಸನ್ನವರ, ಆನಂದ ಯರಗಟ್ಟಿ, ರಿತೇಶ ಪಾಟೀಲ, ಸುರೇಶ ಹೊಳಿ ಹಾಗೂ ನೂರಾರು ರೈತರು ಇದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಡಾ.ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಸಿಪಿಐ ಪ್ರಮೋದ ಯಲಿಗಾರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು.