ಹಿಂದೂ ಸಂಘಟನೆಗಳ ತೀವ್ರ ಆಕ್ರೋಶ: ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಆಗ್ರಹ
ಕನ್ನಡಪ್ರಭ ವಾರ್ತೆ ಭಟ್ಕಳತಾಲೂಕಿನ ಮುರುಡೇಶ್ವರ–ಬೈಲೂರು ಮಾರ್ಗದ ತೆಂಗಾರ್ ರಸ್ತೆಯ ಅಕ್ಕಪಕ್ಕದ ಕೆಲವು ಹಿಂದೂ ಮನೆಗಳ ಮೇಲೆ ಬೈಕ್‌ನಲ್ಲಿ ಬಂದ ಅನ್ಯಕೋಮಿನ ಅಪ್ರಾಪ್ತರು ಕಲ್ಲುತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾತ್ರಿ ಬೈಲೂರಿನ ತೆಂಗಾರಕ್ಕೆ ಬೈಕ್‌ನಲ್ಲಿ ಹೋಗಿದ್ದ ಸುಮಾರು ೭ ಅಪ್ರಾಪ್ತರು ಏಕಾಏಕಿ ಮನೆಗಳತ್ತ ಕಲ್ಲು ತೂರಿ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಸಿದ್ದರು.ಕಲ್ಲು ತೂರಾಟದಿಂದ ಕೆಲ ಮನೆಗಳ ಕಿಟಕಿ ಗಾಜುಗಳು ಹಾನಿಗೊಂಡಿತ್ತು. ಘಟನೆಯ ವೇಳೆ ಸ್ಥಳೀಯರು ಸಮಯಪ್ರಜ್ಞೆಯಿಂದ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ ಒಟ್ಟೂ ೭ ಅಪ್ರಾಪ್ತರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳವಾರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ‘ಪಾಸಿಟಿವ್’ ಎಂದು ವರದಿ ಬಂದಿದೆ.
ಸೋಮವಾರ ರಾತ್ರಿ ವಿಷಯ ತಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಜಾಗರಣಾ ವೇದಿಕೆಯ ಮುಖಂಡರು ಮತ್ತು ಕಾರ್ಯಕರ್ತರು ಮುರುಡೇಶ್ವರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಶಾಂತಿಯುತವಾಗಿರುವ ಪ್ರದೇಶದಲ್ಲಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಇಂತಹ ಕೃತ್ಯವೆಸಗಿ ಕೋಮು ಸೌಹಾರ್ದತೆ ಕೆಡಿಸಲು ಯತ್ನಿಸುತ್ತಿದ್ದಾರೆ. ಕೇವಲ ಬಾಲಕರು ಎಂದು ಇವರನ್ನು ಬಿಡಬಾರದು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.
ಶಿರಸಿಯಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ರಾತ್ರೋರಾತ್ರಿ ಮುರುಡೇಶ್ವರಕ್ಕೆ ಆಗಮಿಸಿ ಪ್ರತಿಭಟನಾಕಾರರ ಬಳಿ ಮಾತನಾಡಿದರು. ಕಲ್ಲು ಎಸೆತ ಪ್ರಕರಣದಿಂದ ಮುರುಡೇಶ್ವರ ಬೈಲೂರು ಭಾಗದಲ್ಲಿ ಸ್ವಲ್ಪ ಉದ್ವಿಗ್ನತೆ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬೈಲೂರು ಮತ್ತು ಮುರುಡೇಶ್ವರ ಭಾಗದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬಂಧಿತರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಸೂಕ್ತ ತನಿಖೆ ನಡೆಸಲು ಆಗ್ರಹ:ಬಿಜೆಪಿ ಮುಖಂಡ ಗೋವಿಂದ ನಾಯ್ಕ ಘಟನೆಯನ್ನು ಖಂಡಿಸಿದ್ದು, ಇದರ ಹಿಂದೆ ಯಾರು ಇದ್ದಾರೆ ಎನ್ನುವುದು ಪತ್ತೆ ಹಚ್ಚಬೇಕು. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅಪ್ರಾಪ್ತರಿಗೆ ಬೈಕ್ ಕೊಟ್ಟ ಪಾಲಕರ ಮೇಲೂ ಕ್ರಮ ಕೈಗೊಳ್ಳಬೇಕು. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ಗಮನ ಹರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಒತ್ತಾಯಿಸಿದರು.