ಸಾರಾಂಶ
ನಮ್ಮ ದೇಶದ ತ್ರಿವರ್ಣ ಧ್ವಜದ ಬದಲು ಅನ್ಯ ದೇಶದ ಬಾವುಟ ಪ್ರದರ್ಶನ ಮಾಡಿರುವುದು ಎರಡೂ ಸಮುದಾಯದ ನಡುವೆ ವೈಮನಸ್ಯ ಉಂಟಾಗುವ ಸಾಧ್ಯತೆ ಇದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಬಾವುಟ ಪ್ರದರ್ಶಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ, ಬಜರಂಗದಳ ಕಾರ್ಯಕರ್ತರು ಇನ್ಸ್‌ಪೆಕ್ಟರ್ ದಯಾನಂದ್ ಗೆ ಮನವಿ ಪತ್ರ ನೀಡಿದರು.ಬಿಜೆಪಿ ಎಸ್‌ಸಿ ಮೋರ್ಚಾ ಘಟಕದ ಜಿಲ್ಲಾಧ್ಯಕ್ಷ ಹಾಗೂ ಪುರಸಭೆ ಸದಸ್ಯ ಕಪಾಲಿ ಶಂಕರ್ ಮಾತನಾಡಿ, ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಹಿಂದೂ, ಮುಸ್ಲಿಮರು ತಮ್ಮ ಹಬ್ಬಗಳನ್ನು ಕೋಮು ಸೌಹಾರ್ದತೆಗೆ ಧಕ್ಕೆ ಬರದಂತೆ ಶಾಂತಿಯುತವಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದರು. ಆದರೆ ಈ ಬಾರಿಯ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಕೆಲವು ಕಿಡಿಗೇಡಿಗಳು ಪ್ಯಾಲೆಸ್ತೀನ್ ಬಾವುಟ ಪ್ರದರ್ಶಿಸುವ ಮೂಲಕ ಭಾರತೀಯರಾದ ನಮಗೆ ಮುಜುಗರ ತರುವ ಜೊತೆಗೆ ಶಾಂತಿ- ಸುವ್ಯವಸ್ಥೆ ಕದಡಿ ಪಟ್ಟಣದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಇದು ದೇಶದ್ರೋಹದ ಕೆಲಸವಾಗಿದ್ದು ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವ ಮೂಲಕ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಆಗ್ರಹಿಸಿದರು.
ಬಜರಂಗದಳ ಮುಖಂಡ ಬಿ.ಪಿ.ಮಹೇಶ್ ಮಾತನಾಡಿ, ಪಟ್ಟಣದಲ್ಲಿ ಹಿಂದೂ- ಮುಸ್ಲಿಮರು ಅಣ್ಣ- ತಮ್ಮಂದಿರಂತೆ ಬಾಳ್ವೆ ನಡೆಸುತ್ತಾ ಎರಡೂ ಸಮುದಾಯದ ಆಚಾರ- ವಿಚಾರಗಳಿಗೆ ಭಂಗವಾಗದಂತೆ ನಡೆದುಕೊಳ್ಳುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜದ ಬದಲು ಅನ್ಯ ದೇಶದ ಬಾವುಟ ಪ್ರದರ್ಶನ ಮಾಡಿರುವುದು ಎರಡೂ ಸಮುದಾಯದ ನಡುವೆ ವೈಮನಸ್ಯ ಉಂಟಾಗುವ ಸಾಧ್ಯತೆ ಇದೆ, ಆದ್ದರಿಂದ ಆರಂಭದಲ್ಲೇ ಇಂತಹ ಕೃತ್ಯದಲ್ಲಿ ಭಾಗವಹಿಸಿದ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅಗತ್ಯವಾಗಿದೆ ಆಗ್ರಹಿಸಿದರು.ಯುವ ಮೋರ್ಚಾದ ಬಿಂದು ಮಾಧವ, ವಿಶ್ವನಾಥ್, ಹೊನ್ನೇಶ್, ಮಿಥುನ್, ನೂತನ್, ಹಿಂದೂ ಜಾಗರಣೆ ವೇದಿಕೆಯ ಚಂದ್ರುಕುಮಾರ್, ಕಿಶೋರ್ ರಾಮಮೂರ್ತಿ, ಗೌತಮ್ ಇತರರು ಇದ್ದರು.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ಯಾಲೆಸ್ತೀನ್ ಬಾವುಟ ಪ್ರದರ್ಶಿಸಿದ ಕಿಡಿಕೇಡಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಪತ್ರ ಸಲ್ಲಿಸಿ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಈ ಸಂಬಂಧ ಇಬ್ಬರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.