ಜಿಲ್ಲಾದ್ಯಂತ ಸಂಭ್ರಮದಿಂದ ಬಕ್ರೀದ್ ಆಚರಣೆ

| Published : Jun 18 2024, 12:52 AM IST

ಸಾರಾಂಶ

ತ್ಯಾಗ, ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ತ್ಯಾಗ, ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಕೊಪ್ಪಳ ನಗರದ ಈದ್ಗಾ ಮೈದಾನ ಸೇರಿದಂತೆ ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು, ಕನಕಗಿರಿ, ಕಾರಟಗಿಯ ಹಲವಾರು ಈದ್ಗಾ ಮೈದಾನಗಳಲ್ಲಿ ಬಕ್ರೀದ್ ನಿಮಿತ್ತ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದರು.

ನಗರದ ನಗರಸಭೆ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಹಾಗೂ ಹುಲಿಕೆರೆ ಪಕ್ಕದಲ್ಲಿ ಇರುವ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸೇರಿದ್ದರು.

ಹೊಸಬಟ್ಟೆಗಳನ್ನು ಧರಿಸಿಕೊಂಡು, ಪ್ರಾರ್ಥನೆಗೆ ಆಗಮಿಸಿದ್ದ ಮುಸ್ಲಿಂ ಬಾಂಧವರು ಈದ್ಗಾ ಮೈದಾನ ಭರ್ತಿಯಾಗಿದ್ದರಿಂದ ಅಕ್ಕಪಕ್ಕದ ರಸ್ತೆಯಲ್ಲಿಯೂ ತಾವೇ ತಂದಿದ್ದ ಹಾಸಿಗೆಯನ್ನು ಹಾಸಿಕೊಂಡು ಪ್ರಾರ್ಥನೆ ಮಾಡಿದ್ದು ಕಂಡು ಬಂದಿತು.

ಮಕ್ಕಳು ಸಹ ಪ್ರಾರ್ಥನೆಯಲ್ಲಿ ಉತ್ಸಾಹದಿಂದಲೇ ಭಾಗವಹಿಸಿದ್ದರಲ್ಲದೆ ನಂತರವೂ ಪರಸ್ಪರ ಶುಭಕೋರಿದರು.

ಬಿಗಿಬಂದೋಬಸ್ತ್:ಬಕ್ರೀದ್ ಹಿನ್ನೆಲೆ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಬಾಂಧವರು ಏಕಕಾಲಕ್ಕೆ ಆಗಮಿಸಿದ್ದರಿಂದ ಆಗುವ ಟ್ರಾಫಿಕ್ ಸಮಸ್ಯೆಯನ್ನು ನೀಗಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕೆಲವೊಂದು ಮಾರ್ಗಗಳನ್ನು ಬದಲಾಯಿಸಿದ್ದರು. ಹೀಗಾಗಿ, ಮುಸ್ಲಿಂ ಬಾಂಧವರು ಯಾವುದೇ ಅಡೆತಡೆ ಇಲ್ಲದೆ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಿದರು.

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡರಾದ ಅಮರೇಶ ಕರಡಿ, ಕೆ.ಎಂ. ಸಯ್ಯದ, ಅಮ್ಜಾದ್ ಪಟೇಲ್, ಕಾಟನ್ ಪಾಶಾ, ಪ್ರಸನ್ನ ಗಡಾದ, ಮಾನ್ವಿ ಪಾಶಾ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಸಡಗರದಿಂದ ನಡೆದ ಬಕ್ರೀದ್ ಹಬ್ಬ:

ಕುಷ್ಟಗಿ ಪಟ್ಟಣದ ಸಂದೀಪ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಎಲ್ಲರೂ ಒಗ್ಗಟ್ಟಾಗಿ ಇದ್ದು, ಸಹಕಾರ, ಸಹಬಾಳ್ವೆಯಿಂದ ಜೀವನವನ್ನು ನಡೆಸಬೇಕು. ಮಹಮ್ಮದ್ ಪೈಗಂಬರ್‌ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದು ಧರ್ಮ ಗುರುಗಳು ಸಲಹೆ ನೀಡಿದರು.ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಬೆಳಗಿನ ಜಾವ ಹೊಸ ಬಟ್ಟೆ ತೊಟ್ಟು ಗಜೇಂದ್ರಗಡ ರಸ್ತೆಯ ಸಂದೀಪ ನಗರದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಒಬ್ಬರಿಗೊಬ್ಬರು ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯ ವಿನಯ ಮಾಡಿಕೊಂಡರು.ವಿವಿಧೆಡೆ ಆಚರಣೆ:

ದಾನ, ಧರ್ಮದ ಮಹತ್ವ ಸಾರುವ ಬಕ್ರೀದ್ ಹಬ್ಬವನ್ನು ಪಟ್ಟಣ ಸೇರಿದಂತೆ ತಾವರಗೇರಾ, ಶಿರಗುಂಪಿ, ಬಳೂಟಗಿ ಹಾಗೂ ಮುದೇನೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಹಬ್ಬದ ನಿಮಿತ್ತ ಮುಸ್ಲಿಂ ಸಮುದಾಯದ ಎಲ್ಲರೂ ಮುಂಜಾನೆಯೇ ಹೊಸಬಟ್ಟೆ ತೊಟ್ಟು ಮಸೀದಿಗಳಲ್ಲಿ ಹಾಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಸಮುದಾಯದ ಪ್ರಮುಖರು ಹಾಗೂ ಬಂಧುಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.