ಸುರಪುರದಲ್ಲಿ ಸಂಭ್ರಮದಿಂದ ಬಕ್ರೀದ್ ಆಚರಣೆ

| Published : Jun 18 2024, 12:48 AM IST

ಸಾರಾಂಶ

ಅತ್ಯಂತ ಪ್ರಿಯವಾದ ವಸ್ತುವನ್ನು ಅಲ್ಲಾಹುನಿಗೆ ಸಮರ್ಪಿಸುವುದು, ಹಬ್ಬದ ಆಚರಣೆ ವೇಳೆ ಬಲಿದಾನ ನೀಡುವುದು, ಬಡವರಿಗೆ ಹಬ್ಬದೂಟ ಹಾಕುವುದು ಈ ಹಬ್ಬದ ವಿಶೇಷತೆಯಾಗಿದೆ ಎಂದು ಮುಸ್ಲಿಂ ಬಾಂಧವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸೋಮವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿ, ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಅತ್ಯಂತ ಪ್ರಿಯವಾದ ವಸ್ತುವನ್ನು ಅಲ್ಲಾಹುನಿಗೆ ಸಮರ್ಪಿಸುವುದು, ಹಬ್ಬದ ಆಚರಣೆ ವೇಳೆ ಬಲಿದಾನ ನೀಡುವುದು, ಬಡವರಿಗೆ ಹಬ್ಬದೂಟ ಹಾಕುವುದು ಈ ಹಬ್ಬದ ವಿಶೇಷತೆಯಾಗಿದೆ ಎಂದು ಮುಸ್ಲಿಂ ಬಾಂಧವರು ತಿಳಿಸಿದರು.

ರಾಜವಂಶಸ್ಥರು ನೀಡಿದ್ದ ಬಿಚ್ಚುಗತ್ತಿಯನ್ನು ಸೈಯದ್ ಅಹ್ಮದ್ ಭಾಷಾ ಖಾದ್ರಿ ಅವರು ಈದ್ಗಾ ಮೈದಾನಕ್ಕೆ ತಂದರು. ಮೌಲಾನಾ ಆಫೀಸ್ ಸೈಯದ್ ಖಲಿಲುಲ್ಲಾ ರೆಹಮಾನ್ ಪ್ರಾರ್ಥನೆ ಬೋಧಿಸಿದರು. ಸಹಾಯಕರಾಗಿ ಅಬ್ದುಲ್ ಮುಲ್ಲಾ ಸಾಥ್ ನೀಡಿದರು.

ಮುಸ್ಲಿಮರೊಂದಿಗೆ ಸುರಪುರ ಸಂಸ್ಥಾನ ಅವಿನಾಭಾವ ಸಂಬಂಧ ಹೊಂದಿದೆ. ಸಂಸ್ಥಾನದಿಂದ ರಾಜರು ತಮ್ಮ ಬಿಚ್ಚುಗತ್ತಿಯನ್ನು ಮುಸ್ಲಿಂ ಗುರುಗಳ ಕೈಗೆ ನೀಡುತ್ತಾರೆ. ಮುಸ್ಲಿಂರಿಗೆ ಯಾವುದೇ ತೊಂದರೆ ಬಾರದ ಹಾಗೆ ಸಂದೇಶವನ್ನು ಕಳುಹಿಸುತ್ತಾರೆ. ಇದು ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ಮುಸ್ಲಿಮರಿಗೆ ಹಬ್ಬದಲ್ಲಿ ಯಾವುದೇ ಅಡೆತಡೆಗಳು ಬಾರದಿರಲಿ ಎಂಬುದಾಗಿ ರಾಜರು ತಮ್ಮ ಕತ್ತಿಯನ್ನು ರಾಜಪಲ್ಲಕ್ಕಿಯಲ್ಲಿ ನಮಾಜ್ ಮಾಡುವ ಸಂತ್ರಸವಾಡಿಯಲ್ಲಿರುವ ಈದ್ಗಾ ಮೈದಾನಕ್ಕೆ ಕಳುಹಿಸಿಕೊಡುತ್ತಾರೆ. ಇದರ ಮೂಲ ಅರ್ಥ ಅರಸರೇ ಬಂದ ಹಾಗೆ ಎನ್ನುವಂತಹ ಪ್ರತೀತಿ ಇದೆ.

ನಗರದ ಮುಸ್ಲಿಮರು ಇಲ್ಲಿಗೆ ಆಗಮಿಸಿ ಪ್ರಾರ್ಥಿಸುತ್ತಾರೆ. ಅಲ್ಲಾ ಈ ವರ್ಗದ ಎಲ್ಲ ಮುಸ್ಲಿಂ ಬಾಂಧವರಿಗೆ ಹಾಗೂ ಊರಿನ ಸಮಸ್ತ ಎಲ್ಲ ಜನಾಂಗದವರಿಗೂ ಸುಖ-ಶಾಂತಿ, ನೆಮ್ಮದಿ ನೀಡಲಿ ಎಂಬುದಾಗಿ ಪ್ರಾರ್ಥನೆಯಲ್ಲಿ ಮುಸ್ಲಿಂ ಮೌಲ್ವಿಗಳು ಬೋಧಿಸಿದರು.

ಪ್ರಾರ್ಥನೆ ಮುಗಿದ ಬಳಿಕ ಪಲ್ಲಕ್ಕಿಯಲ್ಲಿಟ್ಟು ಕತ್ತಿಯನ್ನು ಖಾದ್ರಿ ಪುನಃ ಅರಸರಿಗೆ ಹಿಂದಿರುಗಿಸಿದರು. ಯುದ್ಧ ಕಮಿಟಿ ಅಧ್ಯಕ್ಷ ಎಂ. ಆರ್. ಪಾಷಾ, ಕಾರ್ಯದರ್ಶಿ ರಾಜಗುರು ವಜಾದ್ ಹುಸೇನ್ ಉಸ್ತಾದ್, ನಿಜ್ಜು ಉಸ್ತಾದ್, ರಾಜ್ ಮಹಮ್ಮದ್ ಬಾಬಾ, ನಾಸಿರುಸ್ತಾದ್, ಅಬ್ದುಲ್ ಖಾದರ್ ಸೌದಾಗರ್, ಇಮ್ತಿಯಾಜ್ ಗುತ್ತೇದಾರ್, ಜಾಫರ್ ಸಾಬ್ ಸೌದಾಗರ್, ಮಸೂದ್ ಸಾಬ್ ಸೌದಾಗರ್, ತೌಫಿಕ್ ಅರಕೇರಾ, ದಾವೂದ್ ಪಠಾಣ, ಅಲ್ಲಾವುದ್ದೀನ್ ತೀರಂದಾಝ್, ರಿಯಾಜ್ ಖಾನ್, ಇಮ್ರಾನ್ ಬೇಗ್. ಕಾಸಿಂಸಾಬ್ ಕಾಂಡೇವಾಲೆ, ಸಿಕಂದರ್ ಪಠಾಣ್, ಸೈಯ್ಯದ್ ಅರಕೇರಾ ಸೇರಿದಂತೆ ಅಪಾರ ಮುಸ್ಲಿಮರು ಪ್ರಾರ್ಥನೆಯಲ್ಲಿ ಇದ್ದರು.