ಬಕ್ರೀದ್: ನಗರದ ಎಲ್ಲಾ ಮಸೀದಿಗಳಿಗೆ ಭದ್ರತೆ

| Published : Jun 14 2024, 01:14 AM IST / Updated: Jun 14 2024, 08:30 AM IST

ಸಾರಾಂಶ

ಬಕ್ರೀದ್‌ ಆಚರಣೆ ವೇಳೆ ಕಾನೂನು ಬಾಹಿರ ಕೃತ್ಯಗಳಿಗೆ ಅವಕಾಶ ನೀಡದಂತೆ ಕಾನೂನು ಸುವ್ಯವಸ್ಥೆ ಗೌರವಿಸಬೇಕು, ಸರ್ಕಾರದ ನಿಯಮ, ಪೊಲೀಸ್ ಇಲಾಖೆಯ ಆದೇಶ ಪ್ರತಿಯೊಬ್ಬರು ಪಾಲಿಸುವುದು ಕಡ್ಡಾಯ

 ಕೋಲಾರ : ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಸಂಕೇತವಾಗಿದೆ, ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಲು ಕಾನೂನು ಸುವ್ಯವಸ್ಥೆ ಕಾಪಾಡುವಂತಾಗಬೇಕು, ಸಮಾಜದಲ್ಲಿ ಯಾರಿಗೂ ತೊಂದರೆಯಾಗದಂತೆ ಶಾಂತಿಗೆ ಭಂಗ ಉಂಟಾಗದಂತೆ ಕಾಪಾಡ ಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.ನಗರದಲ್ಲಿ ಶತಶೃಂಗ ಪೊಲೀಸ್ ಭವನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಜಿಲ್ಲಾ ಶಾಂತಿ ಸೌಹಾರ್ದತೆ ಸಭೆಯಲ್ಲಿ ಮಾತನಾಡಿ, ಕಾನೂನು ಬಾಹಿರ ಕೃತ್ಯಗಳಿಗೆ ಅವಕಾಶ ನೀಡದಂತೆ ಕಾನೂನು ಸುವ್ಯವಸ್ಥೆ ಗೌರವಿಸಬೇಕು, ಸರ್ಕಾರದ ನಿಯಮ, ಪೊಲೀಸ್ ಇಲಾಖೆಯ ಆದೇಶ ಪ್ರತಿಯೊಬ್ಬರು ಪಾಲಿಸುವುದು ಆದ್ಯ ಕರ್ತವ್ಯವಾಗಿದ್ದು, ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ನಿಬಂಧನೆ ಪಾಲಿಸಬೇಕು

ನಗರಸಭೆಯ ಕೆಲವೊಂದು ನಿಬಂಧನೆಗಳು ಪಾಲಿಸಬೇಕು, ಶಾಂತಿ ವ್ಯವಸ್ಥೆ ನಿರ್ವಹಣೆಗೆ ಎಲ್ಲರೂ ಸಹಕರಿಸಬೇಕು, ಮಸೀದಿಗಳಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ನೀಡಬೇಕು, ಬಕ್ರೀದ್ ಹಬ್ಬ ಆಚರಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಲ್ಲ ರೀತಿಯ ಅನುವು ಮಾಡಕೊಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.

ಎಸ್‌ಪಿ ಎಂ.ನಾರಾಯಣ ಮಾತನಾಡಿ, ಪ್ರತಿಯೊಬ್ಬರಿಗೂ ಆಯಾಯಾ ಧರ್ಮಗಳನ್ನು ಕಾನೂನಿನ್ವಯ ಪಾಲನೆ ಮಾಡಲು ಪ್ರಾರ್ಥಿಸಲು ಸರ್ವ ಸ್ವಾತಂತ್ರ್ಯವಿದೆ. ಪ್ರಾಣಿಗಳನ್ನು ವಧೆ ಮಾಡಲು ಸಹ ಕೆಲವೊಂದು ಕಾಯ್ದೆ ಪಾಲಿಸಬೇಕು, ಇತರರ ಭಾವನೆಗಳಿಗೆ ಧಕ್ಕೆಯಾಗದಂತೆ ಕಾಯ್ದೆಗಳನ್ನು ಅನುಸರಿಸುವಂತಾಗ ಬೇಕು, ಗೋವು ವಧೆ ಮಾಡುವುದು ನಿಗದಿತ ಸ್ಥಳದಲ್ಲಿ ಮಾತ್ರ ಪರವನಾಗಿ ಪಡೆದವರು ಮಾತ್ರ ಮಾಡಬೇಕು ಎಂದು ಮನವಿ ಮಾಡಿದರು.

ಎಲ್ಲ ಮಸೀದಿಗಳಿಗೆ ರಕ್ಷಣೆ

ಕಾನೂನು ವ್ಯಾಪ್ತಿಯಲ್ಲಿ ಹಬ್ಬ ಮಾಡಬೇಕು, ಯಾವುದೇ ಸರ್ಕಾರ ಇದ್ದರೂ ಸಹ ಎಲ್ಲರಿಗೂ ಒಂದೇ ಕಾನೂನು ಎಂಬುವುದನ್ನು ಅರಿಯಬೇಕು. ಬಕೀದ್ ಹಿನ್ನಲೆಯಲ್ಲಿ ೯೦೦ ಪೋಲಿಸರು, ೪ ಪೊಲೀಸ್ ತುಕಡಿಗಳು (೨೦೦ ಮಂದಿ) ಹಾಗೂ ೧೫೦ ಮಂದಿ ಗೃಹರಕ್ಷಕದಳ ಸೇರಿದಂತೆ ೧೩೦೦ ಮಂದಿ ಮುಂಜಾಗೃತ ವ್ಯವಸ್ಥೆಗೆ ನಿಯೋಜಿಸಲಾಗುವುದು. ನಗರದಲ್ಲಿ ೨೮೯ ಮಸೀದಿಗಳಲ್ಲೂ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು.

ಕೋಲಾರದಲ್ಲಿ ಸುಗಮ ಸಂಚಾರ ಸುವ್ಯವಸ್ಥೆಗೆ ಹಲವಾರು ಅಭಿವೃದ್ದಿ ಯೋಜನೆಗಳನ್ನು ರೂಪಿಸಿದ್ದು ಜಿಲ್ಲಾಧಿಕಾರಿಗಳು ಸರ್ಕಾರದಿಂದ ೧ ಕೋಟಿ ರೂ ಮಂಜೂರು ಮಾಡಿಸಿದ್ದಾರೆ. ನಗರದಲ್ಲಿನ ಪಾದಚಾರಿ ರಸ್ತೆಗಳನ್ನು ಅತಿಕ್ರಮಿಸಿರುವವರಿಗೆ ನಿಗದಿತ ಸ್ಥಳವನ್ನು ಗುರುತಿಸಲಾಗಿದೆ. ಗಾಂಧಿವನದ ಹಿಂಭಾಗದಿಂದ ಪ್ರವಾಸಿ ಮಂದಿರದವರೆಗೆ ಹಾಗೂ ಪ್ರಥಮ ದರ್ಜೆ ಕಾಲೇಜು ರಸ್ತೆ ಬದಿ ಮಾರ್ಗಗಳು ವಿಶಾಲವಾಗಿರುವುದರಿಂದ ಪಾದಚಾರಿ ವ್ಯಾಪಾರಕ್ಕೆ ಅನುವು ಮಾಡಿ ಕೊಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಎ.ಎಸ್.ಪಿ. ಜಗದೀಶ್, ನಗರಸಭೆ ಪೌರಾಯುಕ್ತ ಶಿವಾನಂದ, ಅಂಜುಮಾನ್ ಇಸ್ಲಾಮಿಯ ಸಂಸ್ಥೆಯ ಅಧ್ಯಕ್ಷ ಜಮೀರ್ ಪಾಷ, ನಗರಸಭೆ ಮಾಜಿ ಅಧ್ಯಕ್ಷ ಅಪ್ರೋಜ್‌ಪಾಷ, ಸದಸ್ಯ ಸಾಧೀಕ್ ಪಾಷ, ಕ್ಯಾಲನೂರು ಶೇಕ್ ಮಹ್ಮದ್, ಗೌನಪಲ್ಲಿ ಅಕ್ರಂ, ಮುಳಬಾಗಿಲು ವಾಜೀದ್, ಶ್ರೀನಿವಾಸಪುರ ಜಗದೀಶ್ ಇದ್ದರು. ಡಿವೈಎಸ್ಪಿ ನಾಗ್ತೆ ವಂದಿಸಿದರು.