ಬೇಳೂರಿನಲ್ಲಿ ವನವಾಸಿ ಕಲ್ಯಾಣದಿಂದ ಬಾಲಸಂಗಮ ಕಾರ್ಯಕ್ರಮ

| Published : Dec 01 2024, 01:31 AM IST

ಸಾರಾಂಶ

ನಗೆ, ನಿವಳಿ, ಹರೂರು, ಮನೆಪಾಠ ಸಂಸ್ಕಾರ ಕೇಂದ್ರ ಮತ್ತು ಶಿರ್ವೆ ಬಾಲಸಂಸ್ಕಾರ ಹಾಗೂ ಮನೆಪಾಠ ಕೇಂದ್ರದ 85 ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಕಾರವಾರ: ತಾಲೂಕಿನ ಬೇಳೂರು ಶ್ರೀ ಸಾಯಿ ಸತ್ವ ನಿಕೇತನದಲ್ಲಿ ವನವಾಸಿ ಕಲ್ಯಾಣ ಬಾಲಸಂಗಮ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿತು.ಬೇಳೂರಿನ ಶ್ರೀ ಸಾಯಿ ಸತ್ವ ನಿಕೇತನದಲ್ಲಿ ಮನೆಪಾಠ ಹಾಗೂ ಬಾಲಸಂಸ್ಕಾರ ಕೇಂದ್ರದ ಮಕ್ಕಳಿಗಾಗಿ ಧ್ಯಾನ ಶ್ಲೋಕ, ಸರಸ್ವತಿ ವಂದನೆ, ಕಬೀರ ದೋಹಾ, ದೇಶಭಕ್ತಿ ಗೀತೆ, ರಸಪ್ರಶ್ನೆ, ಕೋಲಾಟ ಸ್ಪರ್ಧೆಗಳನ್ನು ನಡೆಸಲಾಯಿತು. ನಗೆ, ನಿವಳಿ, ಹರೂರು, ಮನೆಪಾಠ ಸಂಸ್ಕಾರ ಕೇಂದ್ರ ಮತ್ತು ಶಿರ್ವೆ ಬಾಲಸಂಸ್ಕಾರ ಹಾಗೂ ಮನೆ ಪಾಠ ಕೇಂದ್ರದ 85 ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಉದ್ಘಾಟನೆಯನ್ನು ಗುರುಕುಲದ ಮುಖ್ಯಶಿಕ್ಷಕ ಅಶೋಕ ಗಾಂವಕರ ಹಾಗೂ ವನವಾಸಿ ಕಲ್ಯಾಣದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಧರ ಸಾಲೇಹಕ್ಕಲು ನೆರವೇರಿಸಿ, ವನವಾಸಿ ಕಲ್ಯಾಣದ ಧ್ಯೇಯೋದ್ಧೇಶಗಳನ್ನು ವಿವರಿಸಿದರು.

ಯುವ ಆಯಾಮ ಪ್ರಮುಖ ಕೇಶವ ಮರಾಠಿ, ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ಲೋಹಿತ್, ವನವಾಸಿ ಕಲ್ಯಾಣ ಕೈಗಾ ಸಮಿತಿ ಅಧ್ಯಕ್ಷ ಜಿತೇಂದ್ರಕುಮಾರ್, ಗೌರಿ ಭಟ್, ಮಹೇಶ ಗೌಡ ಸಹ್ಯಾದ್ರಿ ಗೌಡ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಶಾಂತ ಪಿ. ಹೆಗಡೆ ನಿರೂಪಿಸಿದರು. ಸ್ನೇಹ ವಿಜಯ್ ಭಟ್ ಸ್ವಾಗತಿಸಿದರು. ತಾರ ಗೌಡ ಪ್ರಾರ್ಥಿಸಿದರು. ಸರಸ್ವತಿ ಗೌಡ ವಂದಿಸಿದರು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗುರುಕುಲದ ಪ್ರಧಾನ ಪಾಲಕರಾದ ಗಿರೀಶ್ ವಹಿಸಿದ್ದರು. ಶಿಕ್ಷಣ ಪ್ರಮುಖ ರಾಮಚಂದ್ರ, ದೇವಳಮಕ್ಕಿ ಗ್ರಾಪಂ ಅಧ್ಯಕ್ಷ ಸಂತೋಷ ಗೌಡ, ಸದಸ್ಯೆ ಸುರೇಖಾ ಕಾಮತ, ಸ್ನೇಹ ವಿಜಯ ಭಟ್ ಮರಾಠೆ, ಶಿವಪ್ರಸಾದ, ಶಿವಾನಂದ ಕುಣಬಿ, ಗೋಪಾಲ ಗೌಡ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅಧ್ಯಾಪಕ ಗಣಪತಿ ಸ್ವಾಗತಿಸಿದರು. ವನವಾಸಿ ಕಲ್ಯಾಣದ ಪ್ರವಾಸಿ ಕಾರ್ಯಕರ್ತೆ ದೀಪಾ ಪಿ. ಹೆಗಡೆ ವಂದಿಸಿದರು.

ನಾಳೆ ಗ್ರಾಪಂ ಸದಸ್ಯರ ಒಕ್ಕೂಟ ರಚನೆಗೆ ಸಭೆ

ಕುಮಟಾ: ಗ್ರಾಮ ಪಂಚಾಯಿತಿಗಳನ್ನು ಬಲಪಡಿಸಲು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಸದಸ್ಯರ ಒಕ್ಕೂಟ ರಚಿಸುವ ಉದ್ದೇಶದಿಂದ ತಾಪಂ ಸಭಾಭವನದಲ್ಲಿ ಡಿ. ೨ರಂದು ಬೆಳಗ್ಗೆ ೧೦ ಗಂಟೆಗೆ ಸಭೆ ಕರೆಯಲಾಗಿದೆ.

ಊರಿನ ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾಗಬೇಕೆಂಬ ಧ್ಯೇಯದಿಂದ ಪಂಚಾಯಿತಿ ಪ್ರತಿನಿಧಿಗಳಾಗಿ ಆಯ್ಕೆಯಾದವರಿಗೆ ಹಲವು ಬಗೆಯ ಸಮಸ್ಯೆಗಳು ಕಾಡುತ್ತಿದ್ದು, ಗ್ರಾಮದ ಯಾವ ಸಮಸ್ಯೆಗಳಿಗೂ ಸ್ಪಂದಿಸಲಾಗದ ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪರಿಸ್ಥಿತಿ ಒದಗಿದೆ. ಇ- ಸ್ವತ್ತು ಸಮಸ್ಯೆ ಬಗೆಹರಿಯದಿದ್ದು, ಇದಕ್ಕೆ ಸೂಕ್ತ ತರಬೇತಿ ಹೊಂದಿದ ಸಿಬ್ಬಂದಿ ಲಭ್ಯವಿಲ್ಲದಂತಾಗಿದೆ. ಒಂದೊಂದು ಪಂಚಾಯಿತಿಯಲ್ಲಿ ಒಂದೊಂದು ಬಗೆಯ ಮಾಹಿತಿ ಎಂಬಂತಾಗಿದೆ. ಪಂಚಾಯಿತಿ ಕಾರ್ಯಗಳು ವಿಳಂಬವಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಕ್ಕೂ ಕತ್ತರಿ ಹಾಕುವಂತೆ ಸರ್ಕಾರ ಅನೇಕ ಅಡೆತಡೆಗಳನ್ನು ಒಡ್ಡುತ್ತಿದೆ. ಗ್ರಾಪಂ, ತಾಪಂ, ಜಿಪಂ ಕ್ರಿಯಾಯೋಜನೆಗಳಲ್ಲಿ ತಾರತಮ್ಯ ನಡೆದಿದೆ. ₹೧ ಲಕ್ಷ ಮೇಲ್ಪಟ್ಟು ಕಾಮಗಾರಿಗೆ ಅಗ್ರಿಮೆಂಟ್ ಅಧಿಕಾರವೂ ಇಲ್ಲ. ಇಂಥ ಅನೇಕ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ರಚನೆ ಮಾಡಬೇಕಿದೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಂಯೋಜಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.