ಕೇವಲ ಒಂದು ಸಣ್ಣ ಪ್ರಮಾಣದ ಆಧ್ಯಾತ್ಮಿಕ ವಲಯಕ್ಕೆ ಸೀಮಿತವಾಗಿದ್ದ ಆದಿಚುಂಚನಗಿರಿ ಮಠವನ್ನು ಕಾಲದ ಅಗತ್ಯತೆಗೆ ಅರಿತು ವಿವಿಧ ಕೈಂಕರ್ಯಗಳ ಮೂಲಕ ವಿಶ್ವದೆತ್ತರಕ್ಕೆ ಬೆಳೆಸಿದ ಕೀರ್ತಿ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳಿಗೆ ಸಲ್ಲುತ್ತದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಅನ್ನ, ಅಕ್ಷರ, ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಗ್ರಾಮೀಣ ಭಾಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಜೊತೆಗೆ ಆದಿಚುಂಚನಗಿರಿ ಮಠವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಸಂತ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಹೆಸರು ಸೂರ್ಯ ಚಂದ್ರರಿರುವವರೆಗೆ ಶಾಶ್ವತವಾಗಿರುತ್ತದೆ ಎಂದು ಹೇಮಗಿರಿ ಮತ್ತು ಧಾರವಾಡ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು.ತಾಲೂಕಿನ ಜಿ.ಬೊಮ್ಮನಹಳ್ಳಿಯ ವಿಶ್ವೇಶ್ವರಯ್ಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಜಯಂತ್ಯುತ್ಸವ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕೇವಲ ಒಂದು ಸಣ್ಣ ಪ್ರಮಾಣದ ಆಧ್ಯಾತ್ಮಿಕ ವಲಯಕ್ಕೆ ಸೀಮಿತವಾಗಿದ್ದ ಆದಿಚುಂಚನಗಿರಿ ಮಠವನ್ನು ಕಾಲದ ಅಗತ್ಯತೆಗೆ ಅರಿತು ವಿವಿಧ ಕೈಂಕರ್ಯಗಳ ಮೂಲಕ ವಿಶ್ವದೆತ್ತರಕ್ಕೆ ಬೆಳೆಸಿದ ಕೀರ್ತಿ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳಿಗೆ ಸಲ್ಲುತ್ತದೆ ಎಂದರು.ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಾವಿರಾರು ಕುಟುಂಬಗಳಿಗೆ ಶಿಕ್ಷಣ, ಆರೋಗ್ಯ, ಅನ್ನದಾಸೋಹ ನೀಡುತ್ತಿರುವ ಶ್ರೀಮಠದಲ್ಲಿ ಭೈರವೈಕ್ಯ ಶ್ರೀಗಳು ಭೌತಿಕವಾಗಿ ಇಲ್ಲದಿದ್ದರೂ ಸಹ ಅವರ ದಿವ್ಯ ಚೇತನ ನಮ್ಮ ಸುತ್ತಮುತ್ತಲಿನಲ್ಲಿಯೇ ಇದೆ. ನಾವು ಶ್ರೀಗಳ ಬೆಳಕಿನ ಕಿಡಿಗಳಾಗಿ ನಾಡಿನ ನಾನಾ ಆಯಾಮಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಗುರುಗಳು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ಶ್ರೀವಿನಾಯಕ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಡಿ.ಕೆ.ಕೋದಂಡರಾಮು, ಗ್ರಾಪಂ ಉಪಾಧ್ಯಕ್ಷ ಬಿ.ಸಿ.ಗಿರೀಶ್, ಸದಸ್ಯ ಬಿ.ಸಿ. ಚೆಲುವೇಶ್, ಬಗರ್‌ಹುಕುಂ ಸಾಗುವಳಿ ಸಮಿತಿ ಸದಸ್ಯೆ ಮಧುಶ್ರೀ ಜೆ.ನಾಗರಾಜು, ಮುಖ್ಯಶಿಕ್ಷಕ ಎಂ.ಸಿ.ಮಂಜುನಾಥ್, ಶಾಲೆ ಆಡಳಿತ ಮಂಡಳಿ ಸದಸ್ಯರು, ದಾನಿಗಳು, ಗ್ರಾಮದ ಮುಖ್ಯಸ್ಥರು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಪೋಷಕರು ಇದ್ದರು.