ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ಸಂಸದ ಸುರೇಶ್ ಅವರ ದರ್ಪ ದೌರ್ಜನ್ಯವನ್ನು ಶಾಸಕ ಬಾಲಕೃಷ್ಣರವರೇ ಸಹಿಸಲು ಆಗುತ್ತಿಲ್ಲ. ಅವರ ಹೃದಯದಲ್ಲಿ ಡಿ.ಕೆ.ಸುರೇಶ್ ಅವರನ್ನು ಸೋಲಿಸಬೇಕೆಂಬ ಧ್ಯೇಯ ಇಟ್ಟುಕೊಂಡು ಮೇಲ್ನೋಟಕ್ಕೆ ಅವರ ಪರ ಚುನಾವಣೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ ಹೊಸ ಬಾಂಬ್ ಹಾಕಿದರು.ಪಟ್ಟಣದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ಪರ ಮತಯಾಚಿಸಿ ಮಾತನಾಡಿ, ಡಿ.ಕೆ.ಸುರೇಶ್ ದುರಹಂಕಾರ ಹೆಚ್ಚಾಗಿದ್ದು, ಈ ಬಾರಿ ಚುನಾವಣೆಯಲ್ಲಿ 600 ಕೋಟಿ ಹಣವಿದೆ ಎಂದು ಷೋಷಣೆ ಮಾಡಿಕೊಂಡಿದ್ದಾರೆ. ಅವರ ಬಳಿ ಆರು ಸಾವಿರ ಕೋಟಿ ಲೆಕ್ಕವಿಲ್ಲದ ಹಣವಿದೆ. ಹಣದ ಮೂಲಕ ಚುನಾವಣೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಅಣ್ಣ-ತಮ್ಮಂದಿರಿದ್ದು ಈ ಬಾರಿ ನಾನು, ಮುನಿರತ್ನ, ಎಚ್ ಡಿ ಕುಮಾರಸ್ವಾಮಿ, ಮಂಜುನಾಥ್ ಸೇರಿ ಸಂಸದರನ್ನು ಸೋಲಿಸಿಯೇ ತೀರುತ್ತೇವೆ ಎಂದು ಸಿ.ಪಿ.ಯೋಗೇಶ್ವರ್ ಸವಾಲೆಸೆದರು.
ಡಾ.ಮಂಜುನಾಥ್ ಅವರ ಆರೋಗ್ಯ ಸೇವೆಯ ಮಾದರಿಯನ್ನು ಅಮೆರಿಕದ ಮಾಜಿ ಅಧ್ಯಕ್ಷ ಒಬಾಮರವರು ಒಬ್ಬ ಹೆಲ್ತ್ ಕೇರ್ ಎಂದು ಡಾ.ಮಂಜುನಾಥ್ ಅವರ ಯೋಜನೆಯನ್ನು ನಕಲು ಮಾಡಿ ಅಲ್ಲಿನ ಜನಗಳಿಗೆ ಉತ್ತಮ ಆರೋಗ್ಯ ಕೊಡುವ ಕೆಲಸ ಮಾಡಿದ್ದಾರೆ. ಡಾ.ಮಂಜುನಾಥ್‌ರ ಸೇವೆ ವಿದೇಶದಲ್ಲೂ ಪ್ರಖ್ಯಾತಿ ಪಡೆದಿತ್ತು. ಇಂತಹ ಅಭ್ಯರ್ಥಿಗೆ ಲೋಕಸಭಾ ಚುನಾವಣೆಯಲ್ಲಿ ಅವಕಾಶ ನೀಡಿದರೆ ದೇಶಕ್ಕೆ ಆರೋಗ್ಯ ಸೇವೆಗೆ ಒಂದು ಬದಲಾವಣೆ ಸಿಗಲಿದೆ. ಈ ಚುನಾವಣೆ ಧರ್ಮಗಳ ನಡುವಿನ ಚುನಾವಣೆಯಾಗಿದ್ದು ಎಲ್ಲಾ ಸರ್ವರ್‌ಗಳಲ್ಲೂ ಡಾ.ಮಂಜುನಾಥ್ ಗೆಲ್ಲುತ್ತಾರೆ ಎಂಬ ಸಮೀಕ್ಷೆ ಹೇಳಿದೆ. ಕನಕಪುರ ಕ್ಷೇತ್ರದಲ್ಲಿ ನೀಡುವ ಲೀಡನ್ನು, ಚನ್ನಪಟ್ಟಣ ಕ್ಷೇತ್ರದಲ್ಲಿ ಅಷ್ಟೇ ಲೀಡನ್ನು ಕೊಡುತ್ತೇವೆ. ಉಳಿದ ಏಳು ವಿಧಾನಸಭಾ ಕ್ಷೇತ್ರದಲ್ಲೂ ಮಂಜುನಾಥ್ ಅವರಿಗೆ ಹೆಚ್ಚಿನ ಲೀಡ್ ಬರುವುದರಿಂದ ಸಂಸದರಾಗಿ ಆಯ್ಕೆಯಾಗುತ್ತಾರೆ ಎಂದು ಸಿ.ಪಿ.ಯೋಗೇಶ್ವರ್ ಭವಿಷ್ಯ ನುಡಿದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಐದು ವರ್ಷದಲ್ಲಿ ತಮ್ಮ ಸಂಪತ್ತು ಎರಡು ಪಟ್ಟು ಏರಿಕೆಯಾಗುತ್ತದೆ ಎಂದರೆ ಯಾವ ರೀತಿ ಬಿಸಿನೆಸ್ ಮಾಡುತ್ತಿದ್ದಾರೆ ಎಂಬುದನ್ನು ನಮ್ಮ ಜನತೆಗೆ ತಿಳಿಸಿದರೆ ನಾವು ಕೂಡ ಅದೇ ಬಿಸಿನೆಸ್ ಮಾಡುತ್ತೇವೆ. 600 ಕೋಟಿ ಹಣವಿದೆಯೆಂದು ಘೋಷಣೆ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 300 ಕೋಟಿ ಹಣವಿದೆ ಎಂದು ಘೋಷಣೆ ಮಾಡಿದ್ದರು. ಐದು ವರ್ಷ ಸರ್ಕಾರವಿಲ್ಲದಿದ್ದರೂ ಕೇವಲ ರಾಜ್ಯದಲ್ಲಿ ಒಂದು ವರ್ಷ ಕಾಂಗ್ರೆಸ್ ಸರ್ಕಾರ ಇದ್ದಾಗ ಇವರ ಹಣ ದುಪ್ಪಟ್ಟಾಗಿದೆ ಎಂದು ಸಂಸದ ಡಿಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ ಮಾತನಾಡಿದರು. ಲಕ್ಷ್ಮೀಮಂಜುನಾಥ್, ಜೆಡಿಎಸ್ ಮುಖಂಡ ಸುಬ್ಬಶಾಸ್ತ್ರಿ, ಪುರಸಭಾ ಸದಸ್ಯರು, ಜೆಡಿಎಸ್, ಬಿಜೆಪಿ ಮುಖಂಡರು ಭಾಗವಹಿಸಿದ್ದರು.