ಬಾಲಮೇಳದಲ್ಲಿ ಮಕ್ಕಳು ವಿವಿಧ ಆಕರ್ಷಕ ವೇಷಭೂಷಣ ಧರಿಸಿ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಆಟೋಟ ಹಾಗೂ ಶಾಲಾ ಪೂರ್ವ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

ಹೂವಿನಹಡಗಲಿ: ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಹೊರ ತರಲು ಇಂತಹ ಬಾಲಮೇಳಗಳು ಪೂರಕವಾಗಿದ್ದು, ಇದರಿಂದ ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುವ ಉದ್ದೇಶದಿಂದ ಹನಕನಹಳ್ಳಿಯಲ್ಲಿ ಚಿಣ್ಣರ ಬಾಲಮೇಳ 2026 ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಭಾಗಿತ್ವದ ಕಾರ್ಯಕ್ರಮಕ್ಕೆ ಬಂದ ಅಧಿಕಾರಿ, ಅಂಗನವಾಡಿ ಪುಟಾಣಿಗಳು ಡೋಲು, ತಂಬೂರಿ ಸೇರಿದಂತೆ ವಿವಿಧ ಸಂಗೀತ ವಾದ್ಯ ನುಡಿಸುವ ಮೂಲಕ ಸಂಭ್ರಮದ ಸ್ವಾಗತ ಕೋರಿದರು. ಪುಟಾಣಿ ಮಕ್ಕಳ ವಾದ್ಯಗಳ ನಾದ, ಉತ್ಸಾಹಭರಿತ ಸ್ವಾಗತ ನೆರೆದಿದ್ದ ಜನರ ಗಮನ ಸೆಳೆಯಿತು.

ಬಾಲಮೇಳದಲ್ಲಿ ಮಕ್ಕಳು ವಿವಿಧ ಆಕರ್ಷಕ ವೇಷಭೂಷಣ ಧರಿಸಿ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಆಟೋಟ ಹಾಗೂ ಶಾಲಾ ಪೂರ್ವ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಮಕ್ಕಳ ಉತ್ಸಾಹಭರಿತ ಭಾಗವಹಿಸುವಿಕೆಗೆ ವಿಶೇಷ ಮೆರುಗು ನೀಡಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೇಣುಕಾ ಜುಟ್ಲೆ ಮಾತನಾಡಿ, ಮಕ್ಕಳ ಮಾನಸಿಕ ಹಾಗೂ ಭೌತಿಕ ಬೆಳವಣಿಗೆಯಲ್ಲಿ ಆರಂಭಿಕ ಕಲಿಕೆಯ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ನಾವು ಯಾವ ರೀತಿಯ ಕಲಿಕೆ ಹಾಗೂ ವಾತಾವರಣ ಒದಗಿಸುತ್ತೇವೆಯೋ ಅವರು ಅದನ್ನೇ ಅನುಸರಿಸುತ್ತಾರೆ, ಮಕ್ಕಳ ಕಲಿಕೆಯ ಬುನಾದಿ ಗಟ್ಟಿಯಾಗಿದ್ದರೆ ಅವರ ಮುಂದಿನ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದರು.

ಮಕ್ಕಳಿಗೆ ಶಿಕ್ಷಣದ ಅರಿವು ಮೂಡಿಸುವುದು, ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ. ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಆಟಗಳು ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಕೆ ಪರಿಚಯಿಸುವುದು ಅವರ ಆಸಕ್ತಿ ಮತ್ತು ಸೃಜನಶೀಲತೆ ಹೆಚ್ಚಿಸುತ್ತದೆ.ಇಂತಹ ಬಾಲಮೇಳಗಳು ಮಕ್ಕಳಿಗೆ ಸಂತೋಷ ನೀಡುವುದರ ಜತೆಗೆ ಅವರ ದೈನಂದಿನ ಕಲಿಕೆ, ಮಾನಸಿಕ ಬೆಳವಣಿಗೆ ಹಾಗೂ ಸಮಗ್ರ ಅಭಿವೃದ್ಧಿಗೆ ಉತ್ತಮ ವೇದಿಕೆಯಾಗಿವೆ ಎಂದರು.

ಮಸಲವಾಡ ವೃತ್ತದ ಮೇಲ್ವಿಚಾರಕಿ ಎನ್. ಸುಮಂಗಲಮ್ಮ, ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ತಾಲೂಕಾಧ್ಯಕ್ಷೆ ಬಿ.ಜಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಎಂ.ಪಿ.ಎಂ.ಅಪರ್ಣ, ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಶೋಭಾ, ಶಿಕ್ಷಕಿ ಶಿಲ್ಪ, ಏಕಿಬಾಯಿ, ಟಿ.ನಾಗವೇಣಿ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟಿತ ಸಹಕಾರದಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು. ಪುಟಾಣಿಗಳ ಪ್ರತಿಭೆ, ಸಂಭ್ರಮ, ಕಲಿಕೆಯ ಆಸಕ್ತಿ ಹಾಗೂ ಸೃಜನಶೀಲತೆಗೆ ಚಿಣ್ಣರ ಬಾಲಮೇಳ ಸಾಕ್ಷಿಯಾಗಿತ್ತು.