ಸಾರಾಂಶ
ಇತಿಹಾಸ ಪ್ರಸಿದ್ಧ ಬಲಮುರಿ ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ಶುಕ್ರವಾರ ಕಾವೇರಿ ನದಿಗೆ ಮಹಾ ಮಂಗಳಾರತಿಯೊಂದಿಗೆ ತೀರ್ಥ ಸ್ನಾನ ಜಾತ್ರಾ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇತಿಹಾಸ ಪ್ರಸಿದ್ಧ ಬಲಮುರಿ ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ಶುಕ್ರವಾರ ಕಾವೇರಿ ನದಿಗೆ ಮಹಾ ಮಂಗಳಾರತಿಯೊಂದಿಗೆ ತೀರ್ಥ ಸ್ನಾನ ಜಾತ್ರಾ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿತು.ಭಕ್ತಾದಿಗಳು (ತುಲಾ) ಕಾವೇರಿ ಸಂಕ್ರಮಣದ ಪುಣ್ಯ ತೀರ್ಥ ಸ್ನಾನ ಮಾಡಿ ಎರಡನೆಯ ಪುಣ್ಯಾತೀರ್ಥ ಸ್ನಾನ ಇಲ್ಲಿ ಮಾಡುವುದು ತಲತಲಾಂತರಗಳಿಂದ ನಡೆದು ಬಂದ ಪದ್ಧತಿ. ಭಕ್ತರು ಜಾತ್ರೆಯಲ್ಲಿ ಅಧಿಕ ಸಂಖ್ಯೆಯ ಶ್ರದ್ಧೆಯಿಂದ ಪಾಲ್ಗೊಂಡು ವಿಶೇಷ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿದರು.
ಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಕೇಶ ಮುಂಡನ, ಪಿಂಡಪ್ರದಾನ, ಕಾವೇರಿ ತೀರ್ಥಸ್ನಾನ, ಕಾವೇರಿಯ ಬಾಲೋಪಾಟ್ ಮತ್ತಿತರ ಕಾರ್ಯಗಳು ಜರುಗಿದವು. ಮಧ್ಯಾಹ್ನ 12 ಗಂಟೆಗೆ ಕಾವೇರಿ ನದಿಗೆ ಮಹಾ ಮಂಗಳಾರತಿಯನ್ನು ಅರ್ಚಕ ಮಹಾಬಲೇಶ್ವರ ಭಟ್ ಸಹವರ್ತಿಗಳು ನೆರವೇರಿಸಿದರು. ಬಳಿಕ ನದಿಯಿಂದ ಪವಿತ್ರ ನೀರನ್ನು ಅರ್ಚಕರು ಬಿಂದಿಗೆಯಲ್ಲಿ ತುಂಬಿ ದೇವಾಲಯಕ್ಕೆ ಕೊಂಡೊಯ್ದು ದೇವರ ಬಿಂಬಕ್ಕೆ ಅಭಿಷೇಕ ಮಾಡಲಾಯಿತು. ನಂತರ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.ದೇವಾಲಯದ ತಕ್ಕ, ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾಧು ತಮ್ಮಯ್ಯ, ಕಾರ್ಯದರ್ಶಿ ಪೊನ್ನಚನ ಜಯ, ಅನ್ನದಾನ ಸಮಿತಿ ಅಧ್ಯಕ್ಷ ಬೊಳ್ಳಚೆಟ್ಟೀರ ಚೆಟ್ಟಿಚ್ಚ, ಕಾರ್ಯದರ್ಶಿ ಪಾಲಾಂದಿರ ಚಂಗಪ್ಪ, ನಿರ್ದೇಶಕರಾದ ತೊತ್ತಿಯಂಡ ಪುಟ್ಟಯ್ಯ, ಕಟ್ರತನ ಉತ್ತಪ್ಪ, ಪೊನ್ನಚನ ಹೊನ್ನಪ್ಪ, ಕಾಂಗೀರ ಮಾದಪ್ಪ, ಪಾಲಂದಿರ ನಾಚಪ್ಪ, ಬೊಳ್ಳಚೆಟ್ಟೀರ ಸುರೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಕಡೆಗಳಿಂದದ ಆಗಮಿಸಿದ ಸಾವಿರಾರು ಭಕ್ತಾದಿಗಳು ಹಾಜರಿದ್ದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಹಾಗೂ ಮೂರ್ನಾಡು , ನಾಪೋಕ್ಲು ಹೋಬಳಿ ಕಸಾಪ ಮಹಾದೇವ ಸ್ಪೋರ್ಟ್ಸ್ ಕ್ಲಬ್ ಬಲಮುರಿ ಆಶ್ರಯದಲ್ಲಿ ರವಿ ಓಂಕಾರ್ ಮ್ಯೂಸಿಕ್ ನಾಪೋಕ್ಲು ಹಾಗೂ ಸ್ಥಳೀಯ ಕಲಾವಿದರಿಂದ ಭಕ್ತಿ ಗೀತೆ ಗಾಯನ ಕಾರ್ಯಕ್ರಮ ನೆರವೇರಿತು.--------------------
ವರ್ಷಂಪ್ರತಿ ತಲಕಾವೇರಿಯಲ್ಲಿ ತೀರ್ಥೋದ್ಭವದ ಮರುದಿನ ಬಲಮುರಿಯಲ್ಲಿ ಜಾತ್ರೆ ನಡೆಯುತ್ತಿದೆ. ಕೇಶ ಮುಂಡನ, ತೀರ್ಥ ಸ್ನಾನ, ಪಿಂಡಪ್ರದಾನ ಸೇರಿದಂತೆ ಎಲ್ಲಾ ಕಾರ್ಯಗಳೂ ನಡೆದಿವೆ. ಎರಡು ವರ್ಷಗಳಿಂದ ಕಾವೇರಿ ಮಾತೆಗೆ ಮಹಾ ಮಂಗಳಾರತಿಯನ್ನು ನೆರವೇರಿಸಲಾಗುತ್ತಿದೆ.-ಕೊಂಗೀರಂಡ ಸಾಧು ತಮ್ಮಯ್ಯ, ದೇವಾಲಯ ತಕ್ಕ, ಆಡಳಿತ ಮಂಡಳಿ ಅಧ್ಯಕ್ಷ.