ಧ್ಯಾನ, ಪ್ರಾಣಾಯಾಮದಿಂದ ಆರೋಗ್ಯ ಸಮತೋಲನ

| Published : Mar 11 2025, 12:48 AM IST

ಸಾರಾಂಶ

ನಮ್ಮ ನಿತ್ಯ ಜೀವನದಲ್ಲಿ ಆರೋಗ್ಯಕ್ಕೆ ಆಹಾರ, ಧ್ಯಾನ, ಜೀವನಶೈಲಿ ಪ್ರಧಾನವಾಗುತ್ತದೆ.

ಯಲ್ಲಾಪುರ: ನಮ್ಮ ನಿತ್ಯ ಜೀವನದಲ್ಲಿ ಆರೋಗ್ಯಕ್ಕೆ ಆಹಾರ, ಧ್ಯಾನ, ಜೀವನಶೈಲಿ ಪ್ರಧಾನವಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಕೆಲವು ಹಂತಗಳಲ್ಲಿ ಆರೋಗ್ಯದಲ್ಲಿ ಏರುಪೇರು ಸಹಜ ಪ್ರಕ್ರಿಯೆ. ಸದಾ ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ಭೈರುಂಬೆಯ ಆಯುಷ್ ಮತ್ತು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಹೇಳಿದರು.

ಅವರು ಮಾ.೮ರಂದು ತಾಲೂಕಿನ ಹಿತ್ಲಳ್ಳಿಯ ಸ.ಹಿ.ಪ್ರಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ "ಮಹಿಳಾ ಮಹಿಮೆ " ಎಂಬ ಕಾರ್ಯಕ್ರಮ ಹಾಗೂ ಗ್ರಾಮೀಣ ವಯೋವೃದ್ಧ ಮಾತೆಯರನ್ನು ಸನ್ಮಾನಿಸಲಾಯಿತು.

ಡಾ.ಪೂರ್ಣಿಮಾ ಆರೋಗ್ಯದ ಕುರಿತು ಸುದೀರ್ಘವಾದ ಉಪನ್ಯಾಸ ನೀಡಿದರು.

ಉಮ್ಮಚಗಿ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ, ವಿದುಷಿ ಶರಾವತಿ ಗಜಾನನ ಭಟ್ಟ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ತಾಯಂದಿರ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ತಾಯಿಯಾದವಳು ತನ್ನ ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ಹೇಗಿರಬೇಕು ಎಂಬುದನ್ನು ಅನೇಕ ಕಥೆಗಳು ಹಾಗೂ ದೃಷ್ಟಾಂತಗಳ ಮೂಲಕ ಮನ ಮುಟ್ಟುವಂತೆ ತಿಳಿಸಿದರು.

ಗ್ರಾಮೀಣ ವಯೋವೃದ್ಧ ಮಹಿಳೆಯರಾದ ಭಾಗೀರಥಿ ಗಜಾನನ ಹೆಗಡೆ ಜಾಲಿಮನೆ, ಚಂದು ಸುಬ್ಬಾ ದೇವಾಡಿಗ ದನಬೈಲ್, ಅಬ್ಬಕ್ಕ ಗೋವಿಂದ ಉಪ್ಪಾರ್ ಕೆಳಗಿನಕೇರಿ, ಚಿಕ್ಕಮ್ಮ ಗೋವಿಂದ ಪೂಜಾರಿ ಇವರ ಕೌಟುಂಬಿಕ ವ್ಯವಸ್ಥೆಯಲ್ಲಿ ಅವರ ಪಾತ್ರ ಹಾಗೂ ಸಾಧನೆಯನ್ನು ಗುರುತಿಸಿ, ಸನ್ಮಾನಿಸಲಾಯಿತು.

ಮಹಿಳೆಯರಿಗೆ ವಿವಿಧ ಮೋಜಿನ ಆಟಗಳನ್ನು ಆಡಿಸಲಾಯಿತು. ಕೆಲದಿನಗಳ ಹಿಂದೆ ಶಿಕ್ಷಕರು ಪಾಲಕಿಯರಿಗಾಗಿ "ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ತಾಯಂದಿರ ಪಾತ್ರ " ಎಂಬ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದರು. ಈ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಲಕ್ಕಿ ಡ್ರಾದ ಮೂಲಕ ಆಯ್ಕೆಯಾದ ಒಬ್ಬ ಅದೃಷ್ಟಶಾಲಿ ಮಹಿಳೆಗೆ ಉಡುಗೊರೆ ನೀಡಲಾಯಿತು.

ಗ್ರಾಪಂ ಸದಸ್ಯೆ ನಿರ್ಮಲಾ ನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರೌಢಶಾಲಾ ಮುಖ್ಯಾಧ್ಯಾಪಕಿ ನೀತಾ ಹಬ್ಬು ಅಧ್ಯಕ್ಷತೆ ವಹಿಸಿದ್ದರು. ಮಳಲಗಾಂವ ಕ್ಲಸ್ಟರಿನ ಸಿಆರ್.ಪಿ ದೀಪಾ ಶೇಟ್, ಎಸ್.ಡಿಎಂಸಿ ಉಪಾಧ್ಯಕ್ಷೆ ಮಮತಾ ದೇವಾಡಿಗ, ಗೀತಾ ಜ್ಞಾನವಿದ್ಯಾ ಸಮಿತಿಯ ಸಂಚಾಲಕಿ ಭಾಗೀರಥಿ ಹೆಗಡೆ, ಗ್ರಂಥಪಾಲಕಿ ಶೈಲಾ ಭಂಡಾರಿ, ಎಲ್ಲ ಪಾಲಕಿಯರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಯಮುನಾ ಪಿ. ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಸಂಜನಾ, ಸೃಷ್ಟಿ, ವೇದಶ್ರೀ ನಿರ್ವಹಿಸಿದರು. ಶಿಕ್ಷಕಿಯರಾದ ಸೀಮಾ ಫರ್ನಾಂಡಿಸ್ ಮಹಿಳೆಯರಿಗೆ ವಿವಿಧ ಆಟಗಳನ್ನು ಆಡಿಸಿದರು. ಅಕ್ಷತಾ ಭಾಗ್ವತ್, ರಿಯಾ ಫರ್ನಾಂಡಿಸ್ ಬಹುಮಾನ ವಿತರಣೆ ಹಾಗೂ ಗೌರವ ಶಿಕ್ಷಕಿ ಲಕ್ಷ್ಮಿ ಹೆಗಡೆ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಸೀಮಾ ಫರ್ನಾಂಡಿಸ್ ವಂದಿಸಿದರು.