ಬೆಳ್ತಂಗಡಿ ತಾಲೂಕು ಬಳಂಜದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೀರ್ತಿಶೇಷ ಪಟೇಲ್ ಕಿನ್ನಿಯಾನೆ ಕೋಟಿ ಪಡಿವಾಳ ಸಭಾ ಮಂದಿರದಲ್ಲಿ ಭಾನುವಾರ ಅಮೃತ ಮಹೋತ್ಸವದ ಎರಡನೇ ದಿನದ ಸಮಾರಂಭ ನೆರವೇರಿತು.
ಬೆಳ್ತಂಗಡಿ: ಶಾಲೆಯೆಂಬುದು ದೇಗುಲವಾದರೆ, ಅಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರದ್ದು ಆಧ್ಯಾತ್ಮ ಕೈಂಕರ್ಯ ಎಂದು ಸಂಸ್ಕಾರ ಭಾರತಿ ಪ್ರಾಂತ ಅಧ್ಯಕ್ಷ ಸುಚೇಂದ್ರಪ್ರಸಾದ್ ಹೇಳಿದ್ದಾರೆ.
ಬೆಳ್ತಂಗಡಿ ತಾಲೂಕು ಬಳಂಜದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೀರ್ತಿಶೇಷ ಪಟೇಲ್ ಕಿನ್ನಿಯಾನೆ ಕೋಟಿ ಪಡಿವಾಳ ಸಭಾ ಮಂದಿರದಲ್ಲಿ ಭಾನುವಾರ ನಡೆದ ಅಮೃತ ಮಹೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಆತ್ಮಾನುಸಂಧಾನವಿಲ್ಲದ, ಪ್ರಯೋಗಾತ್ಮವಲ್ಲದ ಶಿಕ್ಷಣ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸರ್ಕಾರಿ ಕನ್ಬಡ ಶಾಲೆಯಲ್ಲಿ ಆಂಗ್ಲ ಶಿಕ್ಷಣ ತರುವ ಮೂಲಕ ಅಡ್ಡದಾರಿ ಹಿಡಿಯುತ್ತಿದ್ದೆವೆಯೋ ಎಂಬ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆಯಿದೆ ಎಂದ ಅವರು ಬಳಂಜದಲ್ಲಿ ಸಾಧಕರ ಸಂತತಿ ಇನ್ನಷ್ಟು ಹೆಚ್ಚಲಿ ಎಂದು ಆಶಿಸಿದರು.ಮಾಜಿ ಸಚಿವ ಪ್ರಮೋಧ ಮಧ್ವರಾಜ್ ಅವರು, ಮಾಜಿ ಎಂಬ ಪದವಿ ಅಂಟಿಸಿಕೊಳ್ಳದ ಸಮೂಹವಿದ್ದರೆ ಅದು ಶಿಕ್ಷಕರದ್ದು. ಅವರು ಕೊನೆ ತನಕ ಮಾಸ್ಟ್ರೇ ಆಗಿರುತ್ತಾರೆ. ಮಕ್ಕಳ ಬಗ್ಗೆ ಮುತುವರ್ಜಿವಹಿಸುವ ಜವಾಬ್ದಾರಿಯನ್ನು ಶಿಕ್ಷಕರು ಮರೆತು ಬಿಟ್ಟರೆ ಮುದೊಂದು ದಿನ ಆತ ಶಿಕ್ಷಣಮಂತ್ರಿಯಾದಲ್ಲಿ ಬೇಸರಪಡಬೇಕಾದ ಸಂದರ್ಭ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಿ.ಕೆ. ಅಧ್ಯಕ್ಷತೆ ವಹಿಸಿದ್ದರು.ಸಾಹಿತಿ, ‘ಥಟ್ ಅಂತ ಹೇಳಿ’ ಕಾರ್ಯಕ್ರಮ ಖ್ಯಾತಿಯ ಡಾ. ನಾ.ಸೋಮೇಶ್ವರ, ಕನ್ನಡಪ್ರಭ ಪುರವಣಿ ಪ್ರಧಾನ ಸಂಪಾದಕ ಜೋಗಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಅಳದಂಗಡಿಯ ಸತ್ಯದೇವತಾ ದೈವಸ್ಥಾನದ ಆಡಳ್ತೆದಾರ ಶಿವಪ್ರಸಾದ್ ಅಜಿಲ, ಹಿರಿಯರಾದ ದರ್ಣಪ್ಪ ಪೂಜಾರಿ, ಶಾಲಾ ಕಾರ್ಯಾಧ್ಯಕ್ಷ ವಸಂತ ಸಾಲಿಯಾನ್, ಬಳಂಜ ಗ್ರಾ.ಪಂ.ಅಧ್ಯಕ್ಷ ಶೋಭಾ ಕುಲಾಲ್, ಪಂ.ಅಭಿವೃದ್ಧಿ ಅಧಿಕಾರಿ ಶಶಿಕಲಾ, ಮುಖ್ಯೋಪಾಧ್ಯಾಯಿನಿ ಸುಲೋಚನಾ ಮತ್ತಿತರರು ಹಾಜರಿದ್ದರು.
ಅಮೃತ ಮಹೋತ್ಸವ ಸಂಚಾಲಕ ಅಶ್ವತ್ಥ ಹೆಗ್ಡೆ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ರಂಗಸ್ವಾಮಿ ಸಿ.ಆರ್ ವಂದಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮಕ್ಕೆ ಮೊದಲು ಆಕರ್ಷಕ ಮೆರವಣಿಗೆಯಲ್ಲಿ ಅತಿಥಿಗಳನ್ನು ಕರೆತರಲಾಯಿತು.
ಸಭೆಯಲ್ಲಿ ಶಾಲೆಯ ನಿವೃತ್ತ ಶಿಕ್ಷಕರನ್ನು ಹಾಗೂ ವೃತ್ತಿಯಲ್ಲಿರುವ ಸುಮಾರು 50 ಕ್ಕೂ ಹೆಚ್ಚು ಶಿಕ್ಷಕರನ್ನು ಆರತಿ ಬೆಳಗಿ ಸಮ್ಮಾನಿಸುವ ಮೂಲಕ ‘ಗುರುಭ್ಯೋ ನಮಃ’ ಕಾರ್ಯಕ್ರಮ ಸಂಪನ್ನವಾಯಿತು.ಕಾಲಘಟ್ಟಕ್ಕೆ ಸರಿಯಾಗಿ ಸರ್ಕಾರಿ ಶಾಲೆ ತೆರೆದುಕೊಳ್ಳಬೇಕು: ರವಿ ಹೆಗಡೆಧ್ವಜಾರೋಹಣ ನೆರವೇರಿಸಿದ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿಹೆಗಡೆ ಮಾತನಾಡಿ, ಸರ್ಕಾರಿ ಶಾಲೆಗಳು ಕಾಲಘಟ್ಟಕ್ಕೆ ಸರಿಯಾಗಿ ತೆರೆದುಕೊಳ್ಳದೆ ಇರುವುದರಿಂದ ಅವು ಊರಿನವರಿಗೆ ಸಂಬಂಧವಿಲ್ಲದ ಆಸ್ತಿಯಾಗಿವೆ. ಶಾಲೆಯಲ್ಲಿ ವಿದ್ಯೆ ಕಲಿತರೆ ಸಾಲಲ್ಲ. ವಿದ್ಯೆಯ ಜೊತೆ ಕೌಶಲ್ಯತೆಯೂ ಬೇಕಾಗುತ್ತದೆ ಎಂದರು.ಯಾವ ಥರ ಕಂಪ್ಯೂಟರನ್ನು ಕೌಶಲ್ಯ ಅಂತ ತಿಳಿದುಕೊಳ್ಳುತ್ತೇವೆಯೋ ಅದೇ ರೀತಿ ಇಂಗ್ಲಿಷನ್ನು ಕೂಡಾ ಕೌಶಲ್ಯ ಅಂತ ಪರಿಗಣಿಸಬೇಕು. ಶಾಲೆಗಳಲ್ಲಿ ಇಂಗ್ಲಿಷ್ ಕೌಶಲ್ಯ ಬೇಕು, ಆದರೆ ಅದುವೇ ಮಾಧ್ಯಮವಾಗಬಾರದು. ಏನೇ ಪದವಿಗಳನ್ನು ಪಡೆದಿದ್ದರೂ ವಿವೇಕವಿಲ್ಲದೇ ಇದ್ದರೆ ಕಲಿತದ್ದು ನಿರರ್ಥಕ ಎಂದರು.ಇದು ಸರ್ಕಾರಿ ಶಾಲೆ ಎಂದೇ ಅನ್ನಿಸುವುದಿಲ್ಲ. ಯಾರೋ ಖಾಸಗಿಯವರು ಕಟ್ಟಿ ಬೆಳೆಸಿದ ಶಾಲೆಯ ಥರ ಇದೆ ಎಂದು ಅವರು ಬಳಂಜ ಶಾಲೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಕನ್ನಡಪ್ರಭ ಪುರವಣಿ ಪ್ರಧಾನ ಸಂಪಾದಕ ಜೋಗಿ ಅವರು ಮಾತನಾಡಿ, ಶಾಲೆ ಅಂದರೆ ನಿಜವಾಗಿ ದೇವಸ್ಥಾನದ ಹಾಗೆ. ಇಲ್ಲಿ ದೈವಸಮಾನರಾದ ಗುರುಗಳು, ದೇವಸಮಾನರಾದ ಮಕ್ಕಳಿದ್ದಾರೆ ಎಂದರು.ಹೇಗೆ ಮೂಲಭೂತ ಅಗತ್ಯಗಳನ್ನು ರಾಜಕಾರಣ, ಸಮಾಜ ಪೂರೈಸುತ್ತದೆಯೋ ಹಾಗೆ ನಮ್ಮ ಅಂತರಂಗದ ಹಸಿವು ನೀಗಿಸಿದ್ದು ಶಾಲೆಗಳು. ಶಿಕ್ಷಣಕ್ಕಿರುವ ಪರಿವರ್ತನಾಶೀಲ ಶಕ್ತಿ ದೇಶದಲ್ಲಿ ಬೇರೆ ಯಾವುದಕ್ಕೂ ಇಲ್ಲ. ಶಿಕ್ಷಣ ಅಮೂಲಾಗ್ರವಾಗಿ ನಮ್ಮ ವ್ಯಕ್ತಿತ್ವ ಬದಲಾಯಿಸುತ್ತದೆ ಎಂದರು.
ನಮಗೆ ಎಳವೆಯಲ್ಲಿ ಗುಣನಡತೆ ಪ್ರಮಾಣ ಪತ್ರ ಕೊಡುವುದು ಮೇಷ್ಟ್ರುಗಳು. ಅಂದು ಮೇಷ್ಟ್ರು ಕೊಡುವ ಗುಣನಡತೆ ಪ್ರಮಾಣ ಪತ್ರ ನಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಿಸುತ್ತಾ ಇತ್ತು. ನಾನು ಮೊದಲ ಕತೆ ಬರೆದಾಗ ಓದಿದ ಮೇಷ್ಟ್ರು ವೆಂಕಟ್ರಮಣ ಬಡ್ಲ ಅವರು ಓದಿ ಪ್ರೋತ್ಸಾಹಿಸಿದ್ದಕ್ಕೆ ಇಂದು ಕತೆಗಾರನಾದೆ. ಆ ಪ್ರೋತ್ಸಾಹ ಸಿಕ್ಕದಿರುತ್ತಿದ್ದರೆ ಆ ಸಾಧ್ಯತೆ ಕ್ಷೀಣಿಸುತ್ತಿತ್ತು ಎಂದು ಜೋಗಿ ಸ್ಮರಿಸಿದರು.