ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಬದುಕಿನ ಶ್ರೇಷ್ಠ ಕ್ಷಣ

| Published : Feb 22 2024, 01:48 AM IST

ಸಾರಾಂಶ

ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಬದುಕಿನ ಶ್ರೇಷ್ಠ ಕ್ಷಣದಲ್ಲಿ ಒಂದಾಗಿದೆ. ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತನೆಗೆ ಕರ್ನಾಟಕದ ಇಬ್ಬರು ಶ್ರೇಷ್ಠ ಶಿಲ್ಪಿಗಳಿಗೆ ಅವಕಾಶ ಸಿಕ್ಕಿರುವುದು ನಮ್ಮಲ್ಲಿನ ಕಲಾವಂತಿಕೆಗೆ ಸಾಕ್ಷಿ. ಗಣೇಶ್ ಭಟ್ ಅವರು ಸಾಗರದ ಜೊತೆ ನಿಕಟವಾದ ಸಂಪರ್ಕ ಇರಿಸಿಕೊಂಡು, ಇಲ್ಲಿಯೇ ಶಿಲ್ಪಕೆತ್ತನೆ ಅಭ್ಯಾಸ ಮಾಡಿದ್ದಾರೆ. ಅವರು ತಮ್ಮ ತಂಡದ ಜೊತೆ ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತನೆ ಮಾಡಿರುವುದು ಸಾಗರಕ್ಕೆ ಹೆಮ್ಮೆ ತಂದಿದೆ. ಅಂಥವರನ್ನು ಸನ್ಮಾನಿಸುವುದು ಶ್ರೇಷ್ಠ ಕೆಲಸವಾಗಿದೆ ಎಂದು ಸಾಗರ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ

ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಬದುಕಿನ ಶ್ರೇಷ್ಠ ಕ್ಷಣದಲ್ಲಿ ಒಂದಾಗಿದೆ ಎಂದು ಸಾಗರ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.

ಪಟ್ಟಣದ ಶೃಂಗೇರಿ ಶಂಕರ ಮಠ, ಸಂಕಲನ ಬಚ್ಚಗಾರು, ಜೋಷಿ ಫೌಂಡೇಶನ್ ಹಾಗೂ ವಿವಿಧ ಮಹಿಳಾ ಭಜನಾ ತಂಡಗಳ ಆಶ್ರಯದಲ್ಲಿ ಅಯೋಧ್ಯೆ ಶ್ರೀರಾಮ ವಿಗ್ರಹದ ಶಿಲ್ಪಿಗಳಲ್ಲಿ ಒಬ್ಬರಾದ ಗಣೇಶ್ ಲಕ್ಷ್ಮೀನಾರಾಯಣ ಭಟ್ಟ ಹಾಗೂ ಇತರೇ ಶಿಲ್ಪಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತನೆಗೆ ಕರ್ನಾಟಕದ ಇಬ್ಬರು ಶ್ರೇಷ್ಠ ಶಿಲ್ಪಿಗಳಿಗೆ ಅವಕಾಶ ಸಿಕ್ಕಿರುವುದು ನಮ್ಮಲ್ಲಿನ ಕಲಾವಂತಿಕೆಗೆ ಸಾಕ್ಷಿ. ಗಣೇಶ್ ಭಟ್ ಅವರು ಸಾಗರದ ಜೊತೆ ನಿಕಟವಾದ ಸಂಪರ್ಕ ಇರಿಸಿಕೊಂಡು, ಇಲ್ಲಿಯೇ ಶಿಲ್ಪಕೆತ್ತನೆ ಅಭ್ಯಾಸ ಮಾಡಿದ್ದಾರೆ. ಅವರು ತಮ್ಮ ತಂಡದ ಜೊತೆ ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತನೆ ಮಾಡಿರುವುದು ಸಾಗರಕ್ಕೆ ಹೆಮ್ಮೆ ತಂದಿದೆ. ಅಂಥವರನ್ನು ಸನ್ಮಾನಿಸುವುದು ಶ್ರೇಷ್ಠ ಕೆಲಸವಾಗಿದೆ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಡಾ. ಜಿ.ಎಸ್. ಭಟ್ ಅಭಿನಂದನಾ ಭಾಷಣದಲ್ಲಿ, ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಕೆತ್ತನೆಗೆ ಅವಕಾಶ ಸಿಕ್ಕಿರುವುದು ಕಲಾವಿದರ ಬದುಕಿನ ಶ್ರೇಷ್ಠ ಕ್ಷಣಗಳಾಗಿರುತ್ತವೆ. ಗಣೇಶ್ ಭಟ್ ಮತ್ತವರ ತಂಡದವರು ಏಳೆಂಟು ತಿಂಗಳು ಅಯೋಧ್ಯೆಯಲ್ಲಿದ್ದು ಶ್ರೀರಾಮನ ಮೂರ್ತಿ ಕೆತ್ತನೆ ಮಾಡಿದ್ದಾರೆ. ಗಣೇಶ್ ಭಟ್ ಅವರು ಕೆತ್ತನೆ ಮಾಡಿರುವ ರಾಮನ ಮೂರ್ತಿ ಇನ್ನೊಂದು ಅಂತಸ್ತಿನಲ್ಲಿ ಪ್ರತಿಷ್ಠಾಪನೆ ಆಗುತ್ತದೆ. ಶಿಲ್ಪವಿದ್ಯೆ ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಗಣೇಶ್ ಭಟ್ ಮತ್ತವರ ತಂಡ ಶಿಲ್ಪವಿದ್ಯೆಯನ್ನು ಕರಗತ ಮಾಡಿಕೊಂಡು ಬಾಲರಾಮನ ಮೂರ್ತಿ ಕೆತ್ತನೆ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದರು.

ಶಿಲ್ಪಿಗಳಾದ ಗಣೇಶ್ ಭಟ್, ಹಾವೇರಿ ಮೌನೇಶ್ ಬಡಿಗೇರ್, ಜಯದತ್ತ ಆಚಾರ್ಯ, ಸಂದೀಪ್ ನಾಯ್ಕ್ ಇಡುಗುಂಜಿ ಅವರನ್ನು ಸನ್ಮಾನಿಸಲಾಯಿತು. ರಾಮಕೃಷ್ಣಾಶ್ರಮದ ಶ್ರೀ ನಿರ್ಭಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ದೀಪಕ್ ಸಾಗರ್, ಟಿ.ವಿ. ಪಾಂಡುರಂಗ, ಎಂ.ಟಿ.ಗುಂಡಪ್ಪ ಗೌಡ, ಶುಂಠಿ ಸತ್ಯನಾರಾಯಣ ಭಟ್ ಇನ್ನಿತರರು ಹಾಜರಿದ್ದರು. ಸರೋಜಮ್ಮ ಸ್ವಾಗತಿಸಿದರು. ಮ.ಸ.ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸ್ತೂರಿ ಕೃಷ್ಣಮೂರ್ತಿ ವಂದಿಸಿದರು. ರಶ್ಮಿ ಹೆಗಡೆ ಮತ್ತು ಸೀಮಾ ಪ್ರಕಾಶ್ ನಿರೂಪಿಸಿದರು.

- - - -೨೧ಕೆ.ಎಸ್.ಎ.ಜಿ.೩: