ಫೋಟೋ: ೧೦ಪಿಟಿಆರ್-ಬಾಲವನ ೧ಡಾ. ಕಾರಂತರ ಜನ್ಮದಿನೋತ್ಸವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ಫೋಟೋ: ೧೦ಪಿಟಿಆರ್-ಕಾರಂತ ೨ವರ್ಣಚಿತ್ರ ಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ಡಾ. ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha
Image Credit: KP
ಪುತ್ತೂರಿನ ಪರ್ಲಡ್ಕ ಬಾಲವನದಲ್ಲಿ ನಡೆದ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ ಸಮಾರಂಭದಲ್ಲಿ ಕಾರಂತ ಸ್ಮರಣೆ.
ಕನ್ನಡಪ್ರಭ ವಾರ್ತೆ ಪುತ್ತೂರು ಪುತ್ತೂರಿನ ಬಾಲವನವು ಡಾ.ಶಿವರಾಮ ಕಾರಂತರ ಕರ್ಮಕ್ಷೇತ್ರವಾಗಿದೆ. ಇಲ್ಲಿರುವ ಸಂದರ್ಭದಲ್ಲಿಯೇ ಅವರ ಎಲ್ಲಾ ಕೃತಿಗಳು ರಚನೆಗೊಂಡಿದ್ದವು. ವ್ಯಕ್ತಿಗತ ಅನುಭವವು ತನ್ನ ಕೃತಿಯಲ್ಲಿ ಬರುವಂತೆ ನೋಡಿಕೊಂಡಿದ್ದ ಕಾರಂತರ ಎಲ್ಲಾ ಪ್ರಯೋಗಗಳಿಗೆ ಈ ಬಾಲವನ ನೆಲೆ ಮನೆಯಾಗಿದೆ ಎಂದು ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಹೇಳಿದ್ದಾರೆ. ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ ಕೋಟ ಶಿವರಾಮ ಕಾರಂತರ ಬಾಲವನ ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ವತಿಯಿಂದ ಮಂಗಳವಾರ ಪುತ್ತೂರಿನ ಪರ್ಲಡ್ಕ ಬಾಲವನದಲ್ಲಿ ನಡೆದ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ ಸಮಾರಂಭದಲ್ಲಿ ಅವರು ಕಾರಂತ ಸ್ಮರಣೆ ಮಾಡಿದರು. ಬದುಕಿನುದ್ದಕ್ಕೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಕಾರಂತರ ಒಂದೊಂದು ಕೃತಿಯೂ ಒಂದೊಂದು ವಿದ್ಯಾಲಯವಾಗಿದೆ. ಪ್ರಾದೇಶಿಕ ನೆಲೆ ಮತ್ತು ವಾಸ್ತವ ನೆಲೆಯಲ್ಲಿ ರಚನೆಗೊಂಡ ಕೃತಿಗಳು ಅವರದ್ದು, ಯಕ್ಷಗಾನ ಕಲಾರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಹೆಗ್ಗಳಿಕೆ ಕಾರಂತರದ್ದಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು, ಪುತ್ತೂರಿನ ಬಾಲವನವನ್ನು ಕಾರಂತರ ಆಶಯಕ್ಕೆ ಅನುಗುಣವಾಗಿ ಹಾಗೂ ಅವರ ಕೆಲಸ ಕಾರ್ಯಗಳಿಗೆ ಪೂರಕವಾಗಿ ಅಭಿವೃದ್ಧಿ ಪಡಿಸಲಾಗುವುದು. ಬಾಲವನ ಅಭಿವೃದ್ಧಿ ಯೋಜನೆಯ ಪ್ರಸ್ತಾಪ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ವರ್ಣ ಚಿತ್ರಕಲಾವಿದ ಪುತ್ತೂರು ಮೂಲದ ಕೆ. ಚಂದ್ರಕಾಂತ ಆಚಾರ್ಯ ಇವರಿಗೆ ದಿ. ಕುರುಂಜಿ ವೆಂಕಟರಮಣ ಗೌಡ ಅವರ ಶಾಶ್ವತ ಕೊಡುಗೆಯಲ್ಲಿ ಕೊಡ ಮಾಡುವ ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಅತಿಥಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಿದರು. ಪ್ರಶಸ್ತಿ ಸಮಿತಿಯ ಸದಸ್ಯರಾಗಿರುವ ಬೆಟ್ಟಂಪಾಡಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಭಿನಂದನಾ ಮಾತುಗಳನ್ನಾಡಿದರು. ಡಾ. ಕಾರಂತರ ಒಡನಾಡಿ ಹಾಗೂ ಹಿರಿಯ ಸಾಹಿತಿ ಪಡಾರು ಮಹಾಬಲೇಶ್ವರ ಭಟ್ ಅವರನ್ನು ಗೌರವಿಸಲಾಯಿತು. ಪುತ್ತೂರು ತಹಸೀಲ್ದಾರ್ ಶಿವಶಂಕರ್, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವೂರು ಸೀತಾರಾಮ ರೈ, ಕಸಾಪ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ರೋಹಿಣಿ ಚಂದ್ರನಾಥ ಆಚಾರ್ಯ ಇದ್ದರು. ಬಾಲವನ ಅಭಿವೃದ್ಧಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಬಿ ವಂದಿಸಿದರು. ಉಪನ್ಯಾಸಕ ಡಾ. ರಾಜೇಶ್ ಬೆಜ್ಜಂಗಳ ನಿರ್ವಹಿಸಿದರು. ಬಾಲವನ ಉಸ್ತುವಾರಿ ಜಗನ್ನಾಥ ಅರಿಯಡ್ಕ, ಶಿಕ್ಷಕ ರಮೇಶ್ ಉಳಯ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ: ಸಭಾ ಕಾರ್ಯಕ್ರಮಕ್ಕೆ ಮೊದಲು ಮೂಕಾಂಬಿಕ ಕಲ್ಚರಲ್ ಅಕಾಡಮಿಯ ವತಿಯಿಂದ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಮತ್ತು ಬಳಗದಿಂದ ‘ಭರತನಾಟ್ಯ’ ಪ್ರದರ್ಶನ ನಡೆಯಿತು. ಕೃಷ್ಣ ಲೀಲೆ ಯಕ್ಷಗಾನ ಪ್ರದರ್ಶನ, ಹಿರಿಯ ರಂಗ ಕಲಾವಿದ ಐ.ಕೆ ಬೋಳುವಾರುನಿರ್ದೇಶನದಲ್ಲಿ ಕಾರಂತಜ್ಜನಿಗೊಂದು ಪತ್ರ ಎಂಬ ಮಕ್ಕಳ ನಾಟಕ ಮತ್ತು ಶಾಲಿನಿ ಅರುಣ್ ಶೆಟ್ಟಿ ಇವರ ಸಂಯೋಜನೆಯಲ್ಲಿ ವೀರಮಣಿ ಕಾಳಗ'''' ಮಹಿಳಾ ಯಕ್ಷಗಾನ ಪ್ರದರ್ಶನಗೊಂಡಿತು. ಚಂದ್ರನಾಥ ಆಚಾರ್ಯ ಕಲಾಕೃತಿಗಳ ಪ್ರದರ್ಶನ ಬಾಲವನ ಪ್ರಶಸ್ತಿ ಪುರಸ್ಕೃತರಾದ ಕೆ. ಚಂದ್ರನಾಥ ಆಚಾರ್ಯ ಇವರ ಸುಮಾರು 40ಕ್ಕೂ ಅಧಿಕ ಅಪೂರ್ವ ಕಲಾಕೃತಿಗಳನ್ನು ಬಾಲನದಲ್ಲಿನ ಕಾರಂತರ ಗ್ರಂಥಾಲಯದ ಕಟ್ಟಡದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿತ್ತು. ಬಾಲವನದಲ್ಲಿರುವ ಆರ್ಟ್ ಗ್ಯಾಲೇರಿಯಲ್ಲೂ ಚಿತ್ರಕಲೆಗಾರರ ಕಲಾಕೃತಿಗಳು ಪ್ರದರ್ಶನವಿತ್ತು. ಡಾ.ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿಯನ್ನು ಕಾರಂತರ ಮನೆಯಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.