ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ: ಅಧಿಕಾರಿಗಳಿಗಿಲ್ಲ ಮಾಹಿತಿಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಕಳೆದ ಸೋಮವಾರ ಬಾಳೆಹೊನ್ನೂರು ಹಾಗೂ ಖಾಂಡ್ಯ ಹೋಬಳಿ ವಿವಿಧೆಡೆ ಅತ್ಯಂತ ಕೆಳಮಟ್ಟದಲ್ಲಿ ಹಾರಾಡಿದ್ದ ಲಘು ವಿಮಾನ ಗುರುವಾರ ಪುನಃ ಆರು ಬಾರಿ ಇದೇ ಪ್ರದೇಶದಲ್ಲಿ ಹಾರಾಟ ನಡೆಸಿದ್ದು, ಸಾರ್ವಜನಿಕರ ಆತಂಕ ಹೆಚ್ಚಿಸಿದೆ.ಲಘು ವಿಮಾನ ಸೋಮವಾರ ಹಾರಾಟ ನಡೆಸಿದಾಗ ಯಾವುದೋ ಸರ್ವೆ ಕಾರ್ಯ ವೆಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದರು.ಗುರುವಾರ ಮಧ್ಯಾಹ್ನ 1.25ರ ವೇಳೆಗೆ ಪುನಃ ಇದೇ ವಿಮಾನ ಮಂಗಳೂರು-ಶೃಂಗೇರಿ ಕಡೆಯಿಂದ ಬಂದು ಬಾಳೆ ಹೊನ್ನೂರು, ಖಾಂಡ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಳಮಟ್ಟದಲ್ಲಿ ಸಂಚರಿಸಿದೆ. ವಾಪಾಸ್ ಇದೇ ಮಾರ್ಗವಾಗಿ ಮಧ್ಯಾಹ್ನ 2.10ರ ವೇಳೆಗೆ ತೆರಳಿದೆ. ಬಳಿಕ 2.40, 3.10, 3.40, 4.30ರ ವೇಳೆಗೆ ಅದೆ ಮಾರ್ಗದಲ್ಲಿಯೇ ಹಾರಾಡಿದೆ. ಕೇವಲ ಅರ್ಧ ಗಂಟೆ ವ್ಯತ್ಯಾಸದಲ್ಲಿ ಆರು ಬಾರಿ ಲಘು ವಿಮಾನ ಹಾರಾಟ ನಡೆಸಿ ಎಲ್ಲಿಂದ ಎಲ್ಲಿಗೆ ಹೋಗಿದೆ ಎಂಬ ಮಾಹಿತಿ ಮಾತ್ರ ಇಲ್ಲ. 4 ದಿನಗಳಲ್ಲಿ ಒಟ್ಟು ೮ ಬಾರಿ ಲಘು ವಿಮಾನ ಅತ್ಯಂತ ಕೆಳ ಮಟ್ಟದಲ್ಲಿ ಹಾರಾಡಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಮಾಹಿತಿ ಇಲ್ಲ. ಹಲವು ಅಧಿಕಾರಿಗಳು ಸಹ ಮಾಹಿತಿ ಇಲ್ಲ ಎಂದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳಲ್ಲಿ ಮಾಹಿತಿ ಕೇಳಲು ಕರೆ ಮಾಡಿದರೆ ಇಬ್ಬರೂ ಪ್ರತಿಕ್ರಿಯಿಸಿಲ್ಲ. ಆದರೆ ಕೆಲ ಸಾರ್ವಜನಿಕರು ಪ್ಲೈಟ್ ರಾಡರ್ ಎಂಬ ಆ್ಯಪ್ ಮೂಲಕ ವಿಮಾನ ಸಂಚಾರದ ಮಾಹಿತಿ ಕಲೆ ಹಾಕಿ ಇದು ಮಂಗಳೂರಿನಿಂದ ಹೊರಟು ತರೀಕೆರೆವರೆಗೆ ಹಾರಾಟ ನಡೆಸಿ ವಾಪಾಸ್ ಬಂದಿದೆ ಎನ್ನುತ್ತಿದ್ದಾರೆ. ಸಾರ್ವಜನಿಕರು ಆ್ಯಪ್ ಮೂಲಕ ಇಷ್ಟೆಲ್ಲಾ ಮಾಹಿತಿ ಕಲೆ ಹಾಕಿದರೂ ಅಧಿಕಾರಿಗಳಿಗೆ ತಿಳಿದಿಲ್ಲ ಎನ್ನುವುದು ಅನುಮಾನ ಮೂಡಿಸಿದೆ. ಈ ಹಿಂದೆ ಕಸ್ತೂರಿ ರಂಗನ್ ವರದಿ, ಬಫರ್ ಜೋನ್ ಮಾಡುವ ವೇಳೆ ವೈಮಾನಿಕ, ಉಪಗ್ರಹ ಆಧಾರಿತ ಸರ್ವೆ ನಡೆಸಿ ವರದಿ ತಯಾರಿಸಿದ್ದು, ಇದೀಗ ಪುನಃ ಇದೇ ಮಾದರಿಯಲ್ಲಿ ಯಾವುದೋ ಸರ್ವೆಗೆ ಲಘು ವಿಮಾನ ಬಳಕೆ ಮಾಡಿರ ಬಹುದು. ಅಧಿಕಾರಿಗಳು, ಸಂಸದರು, ಶಾಸಕರಿಗೆ ಈ ಬಗ್ಗೆ ಗೊತ್ತಿದ್ದರೂ ಯಾವುದೇ ವಿಷಯ ಹೊರ ಹಾಕುತ್ತಿಲ್ಲ. ಅರಣ್ಯ ಇಲಾಖೆಗೆ ಈ ಬಗ್ಗೆ ಖಚಿತ ಮಾಹಿತಿಯಿದೆ ಆದರೆ ಅವರು ಮಾಹಿತಿ ನೀಡುತ್ತಿಲ್ಲ. ಒಂದೆರಡು ದಿನದಲ್ಲಿ ಈ ಅಪರಿಚಿತ ವಿಮಾನ ಹಾರಾಟದ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿ ಮಾಹಿತಿ ನೀಡದಿದ್ದಲ್ಲಿ ರೈತ ಸಂಘಟನೆಗಳು ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ಸದಸ್ಯ ಚಂದ್ರಶೇಖರ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.-- (ಬಾಕ್ಸ್) --ಲಘು ವಿಮಾನ ಹಾರಾಟ: ಮಲೆನಾಡಿಗರಿಗೆ ಆತಂಕ
ಬಾಳೆಹೊನ್ನೂರು ಹಾಗೂ ಸುತ್ತಮುತ್ತ ಕಳೆದ ಒಂದು ವಾರದಿಂದ ಲಘು ವಿಮಾನ ತೀರಾ ಕೆಳ ಹಂತದಲ್ಲಿ ಸಂಚಾರ ನಡೆಸಿರುವುದು ಮಲೆನಾಡಿಗೆ ತೀರಾ ಆತಂಕಕಾರಿ ಎಂದು ಗ್ರಾಪಂ ಮಾಜಿ ಸದಸ್ಯ ಬಿ.ಜಗದೀಶ್ಚಂದ್ರ ಹೇಳಿದ್ದಾರೆ.ಸರ್ಕಾರದ ಯಾವುದೇ ಇಲಾಖೆಗಳಿಗೆ ಮಾಹಿತಿ ನೀಡದೆ ಈ ಲಘು ವಿಮಾನ ಸಂಚಾರ ನಿಜಕ್ಕೂ ಕಳವಳಕಾರಿ. ಎಸಿ ರೂಮಿನಲ್ಲಿ ಕುಳಿತು ಕಾಯ್ದೆ ರೂಪಿಸುವವರು ಮಲೆನಾಡಿನ ವಾಸ್ತವ ಚಿತ್ರಣ ಅರಿತು ಕಾಯ್ದೆ ಕಾನೂನು ರೂಪಿಸುವ ಅಗತ್ಯ ಇದೆ. ಈಗಿರುವ ಸಮಸ್ಯೆಗಳೇ ಇಲ್ಲಿನ ಜನರನ್ನು ಕಿತ್ತು ತಿನ್ನುವಂತಿದೆ. ಈ ಮಧ್ಯೆ ಈ ಲಘು ವಿಮಾನ ಹಾರಾಟ ಮಲೆನಾಡಿ ಗರನ್ನು ಭಯದ ನೆರಳಲ್ಲಿ ಬದುಕುವಂತೆ ಮಾಡುತ್ತಿದೆ.ಅಪರಿಚಿತ ಲಘುವಿಮಾನ ಹಾರಾಟ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡುರವರಿಗೆ ಇಮೇಲ್ ಮೂಲಕ ದೂರು ನೀಡುತ್ತಿದ್ದು ಯಾವ ಉದ್ದೇಶಕ್ಕೆ ಮತ್ತು ಯಾರು ವಿಮಾನಯಾನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಜನತೆಗೆ ನೀಡಬೇಕೆಂದು ಕೋರಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಜನರ ಬವಣೆ ನೀಗಿಸಿ, ರೈತರ ಹಿತ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಈ ವಿಮಾನ ಹಾರಾಟದ ಬಗ್ಗೆ ಎದ್ದಿರುವ ಗೊಂದಲವನ್ನು ಪರಿಹರಿಸಬೇಕಿದೆ ಎಂದು ಜಗದೀಶ್ಚಂದ್ರ ಒತ್ತಾಯಿಸಿದ್ದಾರೆ.--
ಲಘು ವಿಮಾನದ ಹಾರಾಟಕ್ಕೆ ಸಂಬಂಧಿಸಿದಂತೆ ಎವಿಷನ್ ಇಲಾಖೆ ಅನುಮತಿ ನೀಡಲಿದೆ. ಹೆಲಿಕಾಪ್ಟರ್ ಗೆ ಮಾತ್ರ ಜಿಲ್ಲಾಧಿಕಾರಿ ಅಧೀನಕ್ಕೆ ಬರಲಿದೆ. ಲಘು ವಿಮಾನದ ಹಾರಾಟದ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಪಡೆಯುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ.
- ನಾಗರಾಜ್ ಜಿಲ್ಲಾಧಿಕಾರಿ ಚಿಕ್ಕಮಗಳೂರು
--ಲಘು ವಿಮಾನ ಹಾರಾಟದ ಉದ್ದೇಶದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬೆಂಗಳೂರು, ಮಂಗಳೂರು ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ಪೈಲಟ್ ತರಬೇತಿ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಲಾಗುವುದು.- ಜಿತೇಂದ್ರ ಕುಮಾರ್ ದಯಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
--ವಿಶೇಷ ಭೂ ಸಮೀಕ್ಷೆ ನಡೆಸಿದ ಸಣ್ಣ ವಿಮಾನ
ವೈಜ್ಞಾನಿಕ ಉದ್ದೇಶಕ್ಕಾಗಿ ವಿಶೇಷವಾಗಿ ಭೂ ಸಮೀಕ್ಷೆ (Geophysical Survey)ಗಾಗಿ ಚಿಕ್ಕಮಗಳೂರಿನ ಮೇಲೆ ಸಣ್ಣ ವಿಮಾನ ಹಾರಾಟ ನಡೆಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.Cessna 208B Grand Caravan ವಿಮಾನದ ಮಾದರಿಯ ನೊಂದಣಿ ಸಂಖ್ಯೆ: VH-ZKA (“VH” ಅಂದರೆ ಇದು ಆಸ್ಟ್ರೇಲಿಯಾದಲ್ಲಿ ನೋಂದಾಯಿತ ಎಂದು ತಿಳಿದು ಬಂದಿದೆ.ಭೂಮಿ ಅಡಿಯಲ್ಲಿ ಗಾಳಿಯಿಂದ ಮ್ಯಾಪಿಂಗ್ ಮಾಡುವ ಕಂಪನಿ ಇದಾಗಿದ್ದು, ವಿಶೇಷ ಲಕ್ಷಣ ವಿಮಾನದ ಹಿಂಭಾಗದಲ್ಲಿ ಉದ್ದವಾದ ಸೂಜಿ ತರಹ ಕಾಣುವ ಸಾಧನ ವಾದ ಮ್ಯಾಗ್ನೆಟೋಮೀಟರ್ “ಸ್ಟಿಂಗರ್” ಅನ್ನು ಭೂಮಿಯ ಚುಂಬಕ ವ್ಯತ್ಯಾಸಗಳನ್ನು ಅಳೆಯಲು ಬಳಸಲಾಗುತ್ತದೆ. ಈ ಲಘು ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಚಿಕ್ಕಮಗಳೂರು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಮೀಕ್ಷೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.ಈ ಲಘು ವಿಮಾನ ಕಡಿಮೆ ಎತ್ತರದಲ್ಲಿ ಹಾರಲಿದ್ದು, ಜಿಗ್-ಜಾಗ್ ಅಥವಾ ಜಾಲರಿ ರೀತಿಯಲ್ಲಿ ಹಾರಾಡಲಿದೆ. ಅದೇ ಪ್ರದೇಶದ ಮೇಲೆ ಮತ್ತೆ ಮತ್ತೆ ಹಾರುತ್ತದೆ. ಇದರಿಂದ ಖನಿಜ ಸಂಪತ್ತು, ಭೂಗರ್ಭ ರಚನೆ, ಭೂಗರ್ಭ ಜಲ ಸಂಪನ್ಮೂಲ, ಚುಂಬಕ ಕ್ಷೇತ್ರದ ಬದಲಾವಣೆಗಳ ಮಾಹಿತಿ ಸಂಗ್ರಹಿಸಲು ಸಾಧ್ಯ.ಇದು ವಾಣಿಜ್ಯ ವಿಮಾನಗಳಿಗಿಂತ ಕಡಿಮೆ ಎತ್ತರದಲ್ಲಿ ವಿಚಿತ್ರ ಮಾದರಿಯಲ್ಲಿ ಹಾರುತ್ತದೆ. ಹಿಂಭಾಗದಲ್ಲಿರುವ ಉದ್ದವಾದ ಸಾಧನ ವಿದ್ದು ಇದು ಸಂಪೂರ್ಣವಾಗಿ ಸಾಮಾನ್ಯ ಮತ್ತು ಅಧಿಕೃತ ವೈಜ್ಞಾನಿಕ ಕಾರ್ಯ ನಿರ್ವಹಿಸುವ ವಿಮಾನ. ಯಾವುದೇ ಅನುಮಾನಾಸ್ಪದ ಅಥವಾ ಸೈನಿಕ ಚಟುವಟಿಕೆ ಅಲ್ಲ ಎಂದು ಬಲ್ಲ ಮೂಲಗಳ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.೧೨ಬಿಹೆಚ್‌ಆರ್ ೧: ಬಾಳೆಹೊನ್ನೂರು ಹೋಬಳಿಯ ವಿವಿಧೆಡೆ ಗುರುವಾರ ಹಾರಾಟ ನಡೆಸಿದ ಲಘು ವಿಮಾನ.೧೨ಬಿಹೆಚ್‌ಆರ್ ೨: ಸಾರ್ವಜನಿಕರು ಪ್ಲೈಟ್ ರಾಡರ್ ಎಂಬ ಆ್ಯಪ್ ಮೂಲಕ ವಿಮಾನ ಹಾರಾಟದ ಮಾಹಿತಿಯನ್ನು ಕಲೆ ಹಾಕಿರುವುದು.