ಸಾರಾಂಶ
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರ ಸಾವಿಗೆ ಗ್ಲುಕೋಸ್ (‘ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್’) ಕಾರಣವಾಗಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿರುವ ಆರೋಗ್ಯ ಇಲಾಖೆ, ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದೆ.
ಬೆಂಗಳೂರು : ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರ ಸಾವಿಗೆ ಗ್ಲುಕೋಸ್ (‘ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್’) ಕಾರಣವಾಗಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿರುವ ಆರೋಗ್ಯ ಇಲಾಖೆ, ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಕಾರಣವಾಗಿರುವುದು ಕಂಡುಬಂದರೆ ಅದನ್ನು ಪೂರೈಸಿರುವ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ವಿಶ್ವವಿದ್ಯಾಲಯ ತಜ್ಞರ ತಂಡದ ಪರಿಶೀಲನೆಯಲ್ಲಿ ಆಸ್ಪತ್ರೆಯ ವೈದ್ಯರ ತಂಡದಿಂದ ಲೋಪ ಆಗಿಲ್ಲ ಎನ್ನುವುದು ಗೊತ್ತಾಗಿದೆ. ಆದರೆ, ಚಿಕಿತ್ಸೆಗೆ ಬಳಸಿರುವ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಮೇಲೆ ಶಂಕೆ ಇದೆ. ಅದರ ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಂದು ವಾರದಲ್ಲಿ ವರದಿ ಬರುತ್ತದೆ. ದೋಷ ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆಯ ಲೋಪ ಕಂಡುಬಂದಿಲ್ಲ. ಸ್ವತಂತ್ರವಾಗಿ ವಿವರವಾದ ತನಿಖೆಯನ್ನು ಪ್ರತ್ಯೇಕವಾಗಿ ನಡೆಸಲಾಗುತ್ತಿದೆ.
-ಶಿವಕುಮಾರ್, ಆಯುಕ್ತ, ಆರೋಗ್ಯ ಇಲಾಖೆ.---
ಏನಿದು ರಿಂಗರ್ ಔಷಧಿ?, ಬಳ್ಳಾರಿಯಲ್ಲಿ ಏನಾಗಿದೆ?
ಆಪರೇಷನ್ ವೇಳೆ ರೋಗಿಗಳ ದೇಹದಲ್ಲಿ ದ್ರಾವಣದ ಕೊರತೆ ಉಂಟಾದಾಗ ಸರಿಯಾದ ರಕ್ತ ಪರಿಚಲನೆ ಮತ್ತು ರಕ್ತದೊತ್ತಡ ನಿರ್ವಹಣೆಗಾಗಿ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಅರ್ಥಾತ್ ಗ್ಲುಕೋಸ್ ನೀಡಲಾಗುತ್ತದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೂರು ದಿನಗಳಲ್ಲಿ ನಡೆದಿರುವ 34 ಸೀಸೇರಿಯನ್ ಆಪರೇಷನ್‌ಗಳ ಪೈಕಿ 7 ಆಪರೇಷನ್‌ಗಳಲ್ಲಿ ಸಮಸ್ಯೆ ಉದ್ಭವವಾಗಿದ್ದವು. ಇದರಲ್ಲಿ ಬಾಣಂತಿಯರಿಗೆ ಕಿಡ್ನಿ ಸಮಸ್ಯೆ, ಬಹು ಅಂಗಾಂಗ ವೈಫ್ಯಲಗಳು ಸೇರಿವೆ. ಏಳು ಜನರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಮೂವರ ಪೈಕಿ ಒಬ್ಬರು ಬಳ್ಳಾರಿ ವಿಮ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದು, ಉಳಿದಿಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.