ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಗೋಲಿಬಾರ್‌ನಲ್ಲಿ ಒಬ್ಬ ವ್ಯಕ್ತಿ ಮೃತನಾದ ಘಟನೆ ಹಿನ್ನೆಲೆ, ಯಾವುದೇ ತಪ್ಪು ಮಾಡದ ಐಪಿಎಸ್ ಅಧಿಕಾರಿ ಪವನ್ ವಜ್ಜೂರ್ ಅವರನ್ನು ಅಮಾನತು ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಅಕ್ಷಮ್ಯ ಹಾಗೂ ಅವಿವೇಕದ ನಿರ್ಧಾರವಾಗಿದೆ ಎಂದು ಹಿರಿಯ ವಕೀಲರೂ ಹಾಗೂ ಜಿಲ್ಲಾ ಬಿಜೆಪಿ ಮುಖಂಡರೂ ಆಗಿರುವ ಎನ್.ಡಿ.ಪ್ರಸಾದ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಗೋಲಿಬಾರ್‌ನಲ್ಲಿ ಒಬ್ಬ ವ್ಯಕ್ತಿ ಮೃತನಾದ ಘಟನೆ ಹಿನ್ನೆಲೆ, ಯಾವುದೇ ತಪ್ಪು ಮಾಡದ ಐಪಿಎಸ್ ಅಧಿಕಾರಿ ಪವನ್ ವಜ್ಜೂರ್ ಅವರನ್ನು ಅಮಾನತು ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಅಕ್ಷಮ್ಯ ಹಾಗೂ ಅವಿವೇಕದ ನಿರ್ಧಾರವಾಗಿದೆ ಎಂದು ಹಿರಿಯ ವಕೀಲರೂ ಹಾಗೂ ಜಿಲ್ಲಾ ಬಿಜೆಪಿ ಮುಖಂಡರೂ ಆಗಿರುವ ಎನ್.ಡಿ.ಪ್ರಸಾದ್ ಅವರು ತೀವ್ರವಾಗಿ ಖಂಡಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಅಧಿಕಾರ ಉಳಿಸಿಕೊಳ್ಳುವ ಕಚ್ಚಾಟ, ಭ್ರಷ್ಟಾಚಾರ ಮತ್ತು ದುರಾಡಳಿತವನ್ನೇ ತನ್ನ ಕಸುಬಾಗಿಸಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿವೇಕ–ವಿವೇಚನೆ ಕಳೆದುಕೊಂಡು ಆಡಳಿತ ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದು ಆರೋಪಿಸಿದರು. ಬಳ್ಳಾರಿ ಗಲಭೆ ನಡೆದ ದಿನವೇ ಐಪಿಎಸ್ ಅಧಿಕಾರಿ ಪವನ್ ವಜ್ಜೂರ್ ಅವರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಜಿಲ್ಲಾಕೇಂದ್ರಕ್ಕೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಗಲಭೆಗೆ ನೇರವಾಗಿ ಕಾರಣರಾಗದ ಅಧಿಕಾರಿಯನ್ನು ಹೊಣೆಗಾರನನ್ನಾಗಿ ಮಾಡಿ ಅಮಾನತು ಶಿಕ್ಷೆ ವಿಧಿಸಿರುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಆಗಿದೆ ಎಂದು ವ್ಯಂಗ್ಯವಾಡಿದರು.ಗೋಲಿಬಾರ್‌ಗೆ ಕಾರಣರಾದವರು ಯಾರು ಎಂಬುದು ಸ್ಪಷ್ಟವಾಗಿದ್ದರೂ, ಈ ಪ್ರಕರಣದಲ್ಲಿ ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ ಸೇರಿದಂತೆ ಇತರರ ಮೇಲೆ ಎಫ್‌ಐಆರ್ ದಾಖಲಿಸಿರುವುದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಗಲಭೆಗೆ ನೈಜ ಕಾರಣರಾದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳದೆ, ಅಧಿಕಾರಿಗಳ ಮೇಲೆ ಗೂಬೆ ಕೂರಿಸುವುದು ಸರ್ಕಾರದ ಅಸಮರ್ಥತೆಯ ಪ್ರತೀಕವಾಗಿದೆ ಎಂದು ಹೇಳಿದರು. ಪೊಲೀಸ್ ಇಲಾಖೆ ರಾಜ್ಯದ ಒಳಗಿನ ಸೈನ್ಯದಂತೆ ಕಾರ್ಯನಿರ್ವಹಿಸುತ್ತಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಪೊಲೀಸ್ ಇಲಾಖೆ ಒಂದು ಗಂಟೆ ಕೂಡ ನಿಷ್ಕ್ರಿಯವಾಗಿದ್ದರೆ ಉಂಟಾಗುವ ಅರಾಜಕತೆ ಊಹಿಸಲೂ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ದಕ್ಷ ಅಧಿಕಾರಿಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಾದ ಸರ್ಕಾರ, ಅವರನ್ನೇ ದಂಡಿಸುವ ನೀತಿ ಅನುಸರಿಸುತ್ತಿರುವುದು ದುರಂತವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಮೌನದ ಕುರಿತು ಪ್ರಶ್ನೆ ಎತ್ತಿದ ಅವರು, ಹಿರಿಯ ಹಾಗೂ ದಕ್ಷ ಐಎಎಸ್ ಅಧಿಕಾರಿಯಾಗಿರುವ ಅವರು ಇಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕಾದ ಹೊಣೆಗಾರಿಕೆ ಹೊಂದಿದ್ದಾರೆ. ಆದರೆ ಸರ್ಕಾರದ ಪ್ರಮಾದಗಳ ವಿರುದ್ಧ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ತಕ್ಷಣವೇ ತನ್ನ ತಪ್ಪನ್ನು ಅರಿತು ಅಮಾನತು ಮಾಡಿರುವ ಐಪಿಎಸ್ ಅಧಿಕಾರಿ ಪವನ್ ವಜ್ಜೂರ್ ಅವರ ಅಮಾನತ್ತನ್ನು ಹಿಂಪಡೆದು, ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಬೇಕು. ಇದರಿಂದ ರಾಜ್ಯ ಪೊಲೀಸ್ ಪಡೆ ಆತ್ಮವಿಶ್ವಾಸದಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಮನೋಜ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಜಿ.ಜಿ. ಲೋಕೆಶ್, ನಗರ ಬಿಜೆಪಿ ಅಧ್ಯಕ್ಷ ಅವಿನಾಶ್ ನಾಯ್ಡು, ಪ್ರಧಾನ ಕಾರ್ಯದರ್ಶಿಗಳಾದ ಸಿಂಧು ಹಾಗೂ ಮಂಜುನಾಥ್ ಹಲವರು ಉಪಸ್ಥಿತರಿದ್ದರು.