ಬಳ್ಳಾರಿ: ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಶನ್ ವತಿಯಿಂದ ಸ್ಟೀಲ್ ಸಿಟಿ ರನ್‌ನ ಐದನೇ ಆವೃತ್ತಿ ಆ.2ರಂದು ನಗರದಲ್ಲಿ ಜರುಗಲಿದೆ ಎಂದು ಫೌಂಡೇಶನ್ ಅಧ್ಯಕ್ಷ ಹಾಗೂ ಹಿರಿಯ ವೈದ್ಯ ಡಾ.ಎಂ.ತಿಪ್ಪಾರೆಡ್ಡಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ 10 ಕಿ.ಮೀ. ಮತ್ತು 5 ಕಿ.ಮೀ ಟೈಮ್ಡ್ ರನ್ ಹಾಗೂ ಕುಟುಂಬ ಸಮೇತ ಪಾಲ್ಗೊಳ್ಳುವ ಆಸಕ್ತರಿಗಾಗಿ 3 ಕಿ.ಮೀ ಮಜಾ ರನ್ ಆಯೋಜಿಸಲಾಗಿದೆ. ಈ ವರ್ಷ ವೃತ್ತಿಪರ ಓಟಗಾರರಿಗಾಗಿ ಇದೇ ಮೊದಲ ಬಾರಿಗೆ 16 ಕಿ.ಮೀ. ವಿಭಾಗವನ್ನು ಪರಿಚಯಿಸಲಾಗುತ್ತಿದೆ ಎಂದರು.

ಬಳ್ಳಾರಿಯ ಜನತೆಯಲ್ಲಿ ಫಿಟ್ನೆಸ್‌ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಟೀಲ್ ಸಿಟಿ ರನ್ ಆಯೋಜನೆ ಮಾಡುತ್ತಾ ಬರಲಾಗಿದೆ. ಕಳೆದ ನಾಲ್ಕು ಆವೃತ್ತಿಗಳಲ್ಲಿ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಯಶಸ್ವಿಗೊಳಿಸುವ ಉದ್ದೇಶದಿಂದ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ವೆಬ್‌ಸೈಟ್ www.steelcityrun.com ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಓಟದ ಸ್ಪರ್ಧೆಗಳು ಪುರುಷ ಮತ್ತು ಮಹಿಳಾ ವಿಭಾಗಗಳು ಇರಲಿವೆ ಎಂದು ವಿವರಿಸಿದರು.

ಸ್ಟೀಲ್ ಸಿಟಿ ರನ್ ಆವೃತ್ತಿಗೆ ಪ್ರತಿಬಾರಿಯೂ ಉತ್ತಮ ಸ್ಪಂದನೆ ಬರುತ್ತಿದೆ. ಮೊದಲ ಬಾರಿಗೆ 2022ರಲ್ಲಿ ಫೌಂಡೇಶನ್ ವತಿಯಿಂದ ನಡೆದ ಸ್ಟೀಲ್ ಸಿಟಿ ರನ್ ಗೆ 1,100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಎರಡನೇ ಆವೃತ್ತಿಯಲ್ಲಿ 2500ಕ್ಕೂ ಅಧಿಕ ಜನರು ಪಾಲ್ಗೊಂಡರು. ಮೂರು ಮತ್ತು ನಾಲ್ಕನೇ ಆವೃತ್ತಿಯಲ್ಲಿ 4200ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಎಂದಿನಂತೆ ಸ್ಟೀಲ್ ಸಿಟಿ ರನ್‌ ನಲ್ಲಿ ಭಾಗವಹಿಸುವವರಿಗೆ ಈವೆಂಟ್ ಟಿ-ಶರ್ಟ್, ಬ್ಯಾಗ್ ನೀಡಲಾಗುವುದು. ಭಾಗವಹಿಸುವ ಎಲ್ಲರಿಗೂ ನೀರು ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಒಟ್ಟು ₹7 ಲಕ್ಷ ಬಹುಮಾನ ವಿತರಣೆ ಮಾಡಲಾಗುವುದು. ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. 3 ಕಿ.ಮೀ. ವಿಭಾಗ ಹೊರತುಪಡಿಸಿ ಉಳಿದೆಲ್ಲ ವಿಭಾಗಗಳ ಓಟಗಾರರಿಗೆ ಸಮಯ ದಾಖಲಿಸಲು ಚಿಪ್ ಸೌಲಭ್ಯ ನೀಡಲಾಗುವುದು ಎಂದರು. ಫೌಂಡೇಶನ್ ಉಪಾಧ್ಯಕ್ಷ ನರೇಂದ್ರ ಗಾಂಧಿ, ಕಾರ್ಯದರ್ಶಿ ವಿಕಾಸ ಜೈನ್, ಜಂಟಿ ಕಾರ್ಯದರ್ಶಿ ಪ್ರಶಾಂತ್, ಖಜಾಂಚಿ ವಿನೋದ್ ಜೈನ್, ಡಾ.ರವಿಶಂಕರ್ ಸಜ್ಜನ್, ಡಾ.ಬಿ.ಕೆ.ಸುಂದರ್ , ಡಾ.ಸೋಮನಾಥ ಸುದ್ದಿಗೋಷ್ಠಿಯಲ್ಲಿದ್ದರು.