ಇವಿಎಂ ಬದಲು ಬ್ಯಾಲೆಟ್‌ ಪೇಪರ್‌: ಸುಗ್ರೀವಾಜ್ಞೆಗೆ ಸಿದ್ಧತೆ

| Published : Sep 08 2025, 01:00 AM IST

ಇವಿಎಂ ಬದಲು ಬ್ಯಾಲೆಟ್‌ ಪೇಪರ್‌: ಸುಗ್ರೀವಾಜ್ಞೆಗೆ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲು ಮತಪತ್ರ (ಬ್ಯಾಲೆಟ್‌) ಬಳಕೆ ಸಂಬಂಧಿಸಿ ಸೆ.11ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮೂರು ಕಾಯಿದೆಗಳಿಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲು ಮತಪತ್ರ (ಬ್ಯಾಲೆಟ್‌) ಬಳಕೆ ಸಂಬಂಧಿಸಿ ಸೆ.11ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮೂರು ಕಾಯಿದೆಗಳಿಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಸೆ.4ರ ಸಂಪುಟ ಸಭೆ ನಿರ್ಣಯದಂತೆ ಜಿಬಿಎ, ಪಂಚಾಯತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್‌ ಪೇಪರ್‌ ಬಳಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶನಿವಾರ ಶಿಫಾರಸು ಕಳುಹಿಸಿಕೊಡಲಾಗಿದೆ.

ಇದಕ್ಕೆ ಪೂರಕವಾಗಿ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಕಾಯಿದೆ-2024, ಕರ್ನಾಟಕ ಮುನ್ಸಿಪಾಲಿಟಿಗಳ ಕಾಯಿದೆ ಸೇರಿ ಮೂರು ಕಾಯಿದೆಗಳಿಗೆ ತಿದ್ದುಪಡಿ ತರಬೇಕಾಗಿದೆ. ಈ ಕುರಿತು ಸೆ.11ರ ಸಂಪುಟ ಸಭೆಯಲ್ಲಿ ತೀರ್ಮಾನಿಸುವುದಾಗಿ ಮೂಲಗಳು ತಿಳಿಸಿವೆ.

ಸುಗ್ರೀವಾಜ್ಞೆ ಯಾಕೆ?:

ಇವಿಎಂ ಬದಲು ಬ್ಯಾಲೆಟ್‌ ಪೇಪರ್‌ ಬಳಕೆ ಸಂಬಂಧ ಕಾಯಿದೆಗೆ ತಿದ್ದುಪಡಿ ಅಗತ್ಯ. ಕಳೆದ ತಿಂಗಳಷ್ಟೇ ಮಳೆಗಾಲದ ಅಧಿವೇಶನ ಮುಗಿದಿದ್ದು, ಬೆಳಗಾವಿಯ ಚಳಿಗಾಲದ ಅಧಿವೇಶನದವರೆಗೆ ಅಧಿವೇಶನ ಇಲ್ಲ. ಹೀಗಾಗಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಬ್ಯಾಲೆಟ್ ಪೇಪರ್‌ ಬಳಕೆ ನಿಯಮ ಜಾರಿಗೆ ಸುಗ್ರೀವಾಜ್ಞೆ ಅತ್ಯಗತ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಪಾಲರ ನಡೆ ಬಗ್ಗೆ ಕುತೂಹಲ:

ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ಮುಂದಾದರೂ ರಾಜ್ಯಪಾಲರ ಅನುಮೋದನೆ ಬೇಕು. ರಾಜ್ಯಪಾಲರ ಅನುಮೋದನೆ ಪಡೆದು ಸೂಕ್ತ ನಿಯಮಾವಳಿ ಸೇರ್ಪಡೆಯೊಂದಿಗೆ ಅಧಿಸೂಚನೆ ಹೊರಡಿಸಬೇಕು. ಬಳಿಕ ರಾಜ್ಯ ಚುನಾವಣಾ ಆಯೋಗದ ಮೂಲಕ ನಡೆಯುವ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್‌ ಬಳಕೆ ಮಾಡಬೇಕು. ಆದರೆ ಈ ಕುರಿತ ಸುಗ್ರೀವಾಜ್ಞೆಗಳಿಗೆ ರಾಜ್ಯಪಾಲರು ಅಂಕಿತ ಹಾಕುತ್ತಾರಾ ಎಂಬ ಬಗ್ಗೆ ಕುತೂಹಲ ಮೂಡಿದೆ.