ಸಾರಾಂಶ
ಚನ್ನಪಟ್ಟಣ: ಅಭಿಮಾನಿಗಳೆ ದೇವರು ಎಂದು ಬಾಳಿದ ಡಾ. ರಾಜ್‌ಕುಮಾರ್ ಅವರಂತ ಮೇರುನಟರು ಜೀವಿಸಿದ ಚಿತ್ರರಂಗಕ್ಕೆ 75 ವರ್ಷಗಳ ಇತಿಹಾಸವಿದ್ದು, ಇಂತಹ ಚಿತ್ರರಂಗದ ಇತಿಹಾಸಕ್ಕೆ ಅಭಿಮಾನಿಯನ್ನು ವಿಕೃತವಾಗಿ ಹಿಂಸೆ ಮಾಡಿ ಕೊಲೆಗೈದಿರುವ ನಟ ದರ್ಶನ್‌ರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಆಗ್ರಹಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ 2023ರ ಅಕ್ಟೋಬರ್ 5ರಿಂದ ನಿರಂತರ ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ 252ನೇ ದಿನದ ಹೋರಾಟದ ವೇಳೆ ಅವರು ಮಾತನಾಡಿದರು.ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್‌ಕುಮಾರ್ ಅವರು ಅಭಿಮಾನಿಗಳೆ ದೇವರು ಎಂದು ತಮ್ಮ ಬದುಕನ್ನು ಅಭಿಮಾನಿಗಳ ಆಸೆಯಂತೆ ಕಟ್ಟಿಕೊಂಡರು. ಅದೇ ನಿಟ್ಟಿನಲ್ಲಿ ಅವರ ಸಿನಿಮಾಗಳನ್ನು ನೋಡಿ ಅಭಿಮಾನಿಗಳು ಸಹ ತಮ್ಮ ಬದುಕಿನಲ್ಲಿ ಚಿತ್ರದಲ್ಲಿ ರಾಜ್ ಅವರ ಮಾರ್ಗದರ್ಶನದಲ್ಲಿ ಜೀವನ ಕಟ್ಟಿಕೊಂಡರು. ಆದರೆ ಇಂದು ನಟ ದರ್ಶನ್ ತನ್ನ ಅಭಿಮಾನಿಯ ಮರ್ಮಾಂಗಕ್ಕೆ ಹಲ್ಲೆ ಮಾಡಿ ವಿಕೃತವಾಗಿ ಕೊಲೆ ಮಾಡಿರುವ ಪ್ರಕರಣ ಖಂಡನೀಯವಾಗಿದ್ದು ಇಂತಹವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.
ಡಾ. ರಾಜ್‌ಕುಮಾರ್ ಅವರು ತಮ್ಮ ಅಭಿಮಾನಿಗಳು ಸಿನಿಮಾ ನೋಡಿದರೆ ಮಾತ್ರ ನಾವು ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ಆದರ್ಶಗಳನ್ನು ಪಾಲನೆ ಮಾಡಿದ್ದರು. ಇದಕ್ಕಾಗಿ ಅಭಿಮಾನಿಗಳ ಆಸೆಯಂತೆ ಬಟ್ಟೆ ಧರಿಸುವುದು, ಚಿತ್ರದಲ್ಲಿ ಕೆಲವು ನಿರ್ಬಂಧಿತ ದೃಶ್ಯಗಳನ್ನು (ಧೂಮಪಾನ, ಮದ್ಯಪಾನ) ಮಾಡದೆ ಅಭಿಮಾನಿಗಳ ಆಸೆಯಂತೆ ಸಿನಿಮಾ ಮಾಡಿಕೊಂಡು ಬಂದವರು. ಜೊತೆಗೆ ಆ ಕಾಲದ ನಟರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ತಮ್ಮದೇ ಸೇವೆಯ ಕೊಡುಗೆ ನೀಡಿದ್ದರು. ಆದರೆ ನಟ ದರ್ಶನ್ ಹಣಕ್ಕಾಗಿ ನಟನೆ ಮಾಡುವ ಪೇಯ್ಡ್ ನಟವಾಗಿದ್ದು ಮೋಜು ಮಸ್ತಿಯಲ್ಲೇ ಕಾಲ ಕಳೆಯುತ್ತಾ ಅಭಿಮಾನಿಗಳ ಮೇಲೆ ವಿಕೃತ ಮನಸ್ಥಿತಿ ಸಾಧಿಸಿರುವುದು ಸಿನಿಮಾರಂಗಕ್ಕೆ ಕಳಂಕವಾಗಿದೆ. ಇವರ ಎಲ್ಲಾ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕಿಡಿಕಾರಿದರು.ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ನಿಸ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದು, ಸಾಕ್ಷಾಧಾರಗಳ ಜೊತೆ ದರ್ಶನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ. ಈ ಪ್ರಕರಣದಲ್ಲಿ ಮೃತ ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದರೆ ರಾಜಕಾರಣಿಗಳು ಹಸ್ತ ಕ್ಷೇಪ ಮಾಡದೆ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ರಮೇಶ್‌ಗೌಡ ಆಗ್ರಹಿಸಿದರು.
ನಿವೃತ್ತ ಪ್ರಾಂಶುಪಾಲರು ಹಾಗೂ ಚನ್ನಪಟ್ಟಣ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಿಂಗೇಗೌಡ ಮಾತನಾಡಿ, ಇಂದಿನ ನಟರು ಒಂದು ಸಿನಿಮಾ ಪ್ರಸಿದ್ಧಿ ಆದರೆ ನಾವೇ ಚಿತ್ರರಂಗದ ಮೇರು ನಟರು ಎಂದು ಬೀಗುತ್ತಿದ್ದಾರೆ. ಜೊತೆಗೆ ದೇವಸ್ಥಾನಕ್ಕೆ ಹೋದರೂ ಅಭಿಮಾನಿಗಳ ಹೆಸರಲ್ಲಿ ಪುಂಡರನ್ನು ರಕ್ಷಕರನ್ನಾಗಿ ಹಿಂದೆ ಮುಂದೆ ನಿಲ್ಲಿಸಿಕೊಂಡು ಓಡಾಡುತ್ತಾರೆ. ಆದರೆ ವರನಟ ಡಾ. ರಾಜ್‌ಕುಮಾರ್ ಅವರು ನೂರಾರು ಸಿನಿಮಾ ಮಾಡಿದ್ದರೂ ಅವರಲ್ಲಿ ಸರಳತೆ ಮತ್ತು ಅಭಿಮಾನಿಗಳ ಮೇಲೆ ಅಪಾರ ಗೌರವ ಹೊಂದಿದ್ದರು ಎಂದರು.ಡಾ.ರಾಜ್ ಕುಮಾರ್ ಅವರು ನಮ್ಮ ಪ್ರಾಣ ಹೋದರೂ ನಮ್ಮ ಕಣ್ಣುಗಳು ನಾಲ್ಕು ಮಂದಿಗೆ ಬೆಳಕಾಗಲಿ ಎಂದು ನೇತ್ರದಾನದ ಮೂಲಕ ಪ್ರೇರೇಪಣೆ ಆದವರು. ಆದರೆ, ನಟ ದರ್ಶನ್ ಅವರು ಅಭಿಮಾನಿಯನ್ನು ನಿರ್ಧಯಿಯಾಗಿ ಕೊಂದು ಕಸದ ರಾಶಿಗೆ ಎಸೆದಿರುವುದು ಆತನ ವಿಕೃತ ಮನಸ್ಸಿಗೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು, ಇಲ್ಲವಾದರೆ ಇವರನ್ನು ಅನುಸರಿಸುವ ಅಭಿಮಾನಿಗಳಿಂದ ಸಾಕಷ್ಟು ಪ್ರಾಣಗಳು ಕಳೆದುಕೊಳ್ಳುತ್ತವೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಮೇಕೆದಾಟು ಅಣೆಕಟ್ಟೆ ಮತ್ತು ಕಾವೇರಿ ನದಿ ನೀರು ಹಂಚಿಕೆ ವಿಚಾರದಲಿ ಸಂಕಷ್ಟ ಸೂತ್ರ ರಚಿಸುವ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ ಐವರು ಕೇಂದ್ರ ಸಚಿವರು ಹೆಚ್ಚು ಗಮನ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬೇವೂರು ಯೋಗೀಶ್‌ಗೌಡ, ಮಳೂರುಪಟ್ಟಣ ರವಿ, ಬೈರಾಪಟ್ಟಣ ತಿಮ್ಮೇಗೌಡ, ರಾಜು, ಕುಮಾರ್, ಜಯರಾಮು, ಹುಚ್ಚಪ್ಪ, ಚಿಕ್ಕಣ್ಣಪ್ಪ, ಸಿದ್ದಯ್ಯ, ಪುನಿತ್, ಅಜಯ್, ಶ್ಯಾನುಬೋಗನಹಳ್ಳಿ ರವಿ, ಚನ್ನಪ್ಪ, ಚಿಕ್ಕೇನಹಳ್ಳಿ ಸಿದ್ದಪ್ಪ ಮತ್ತಿತರರು ಭಾಗವಹಿಸಿದ್ದರು.13ಕೆಆರ್ ಎಂಎನ್ 5,6.ಜೆಪಿಜಿ
ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.