ಸಾರಾಂಶ
ಜೂ.1ರಿಂದ ಜು.31 ಮೀನು ಸಂತಾನೋತ್ಪತ್ತಿ ಕಾಲ ಆಗಿರುವುದರಿಂದ ಈ ನಿಷೇಧ ಹೇರಲಾಗುತ್ತಿದೆ. ಹಾಗಾಗಿ ಶುಕ್ರವಾರದ ಮೊದಲೇ ಎಲ್ಲ ಯಾಂತ್ರೀಕೃತ ಬೋಟುಗಳು ಧಕ್ಕೆಯಲ್ಲಿ ಲಂಗರು ಹಾಕಿವೆ.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದ ಕರಾವಳಿಯಲ್ಲಿ ಈ ವರ್ಷದ ಮೀನುಗಾರಿಕಾ ಋತು ಶುಕ್ರವಾರ ಅಂತ್ಯವಾಗಿದ್ದು, ಜೂ.1ರಿಂದ ಯಾಂತ್ರೀಕೃತ ಮೀನುಗಾರಿಕೆ ಎರಡು ತಿಂಗಳ ಕಾಲ ಸಂಪೂರ್ಣ ನಿಷೇಧವಾಗಲಿದೆ. ಜೂ.1ರಿಂದ ಜುಲೈ 31ರವರೆಗೆ ಈ ನಿಷೇಧ ಇರಲಿದೆ. ಈ ಅವಧಿಯಲ್ಲಿ ಮೀನು ಪ್ರಿಯರಿಗೆ ಫ್ರೆಶ್ ಮೀನುಗಳ ಕೊರತೆ ಕಾಡಲಿದೆ.ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಇದ್ದರೂ, ನದಿ, ಸಮುದ್ರ ತೀರದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಆದರೆ ಬೇಡಿಕೆಯಷ್ಟು ಪೂರೈಕೆ ಆಗದೆ ಇರುವುದರಿಂದ ಮೀನಿನ ಬೆಲೆ ಗಗನಕ್ಕೇರುವ ನಿರೀಕ್ಷೆಯಿದೆ.ಜೂ.1ರಿಂದ ಜು.31 ಮೀನು ಸಂತಾನೋತ್ಪತ್ತಿ ಕಾಲ ಆಗಿರುವುದರಿಂದ ಈ ನಿಷೇಧ ಹೇರಲಾಗುತ್ತಿದೆ. ಹಾಗಾಗಿ ಶುಕ್ರವಾರದ ಮೊದಲೇ ಎಲ್ಲ ಯಾಂತ್ರೀಕೃತ ಬೋಟುಗಳು ಧಕ್ಕೆಯಲ್ಲಿ ಲಂಗರು ಹಾಕಿವೆ. ಇನ್ಮುಂದೆ 2 ತಿಂಗಳು ಸಮುದ್ರದಲ್ಲಿ ನಾಡ ದೋಣಿಗಳದ್ದೇ ಹವಾ. ಆದರೆ ಬಿರುಗಾಳಿ, ಭಾರಿ ಮಳೆ, ಚಂಡಮಾರುತ ಬಂದರೆ ಇವುಗಳೂ ಸಮುದ್ರಕ್ಕೆ ಇಳಿಯುವಂತಿಲ್ಲ. ಆದರೂ ಉತ್ತಮ ಮೀನು ಸಿಗುವ ನಿರೀಕ್ಷೆಯಲ್ಲಿ ನಾಡದೋಣಿ ಮೀನುಗಾರರಿದ್ದಾರೆ.