ರಾಜ್ಯದಲ್ಲಿ ಕಿರುಕುಳ ಕೊಟ್ಟರೆ ಮೈಕ್ರೋ ಫೈನಾನ್ಸ್‌ ಪರವಾನಗಿಯೇ ರದ್ದು : ಸುಗ್ರೀವಾಜ್ಞೆ?

| N/A | Published : Feb 03 2025, 12:31 AM IST / Updated: Feb 03 2025, 05:18 AM IST

ರಾಜ್ಯದಲ್ಲಿ ಕಿರುಕುಳ ಕೊಟ್ಟರೆ ಮೈಕ್ರೋ ಫೈನಾನ್ಸ್‌ ಪರವಾನಗಿಯೇ ರದ್ದು : ಸುಗ್ರೀವಾಜ್ಞೆ?
Share this Article
  • FB
  • TW
  • Linkdin
  • Email

ಸಾರಾಂಶ

  ‘ಕರ್ನಾಟಕ ಮೈಕ್ರೋ ಫೈನಾನ್ಸ್ (ಬಲವಂತ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ-2025’ ಕರಡು ಸಿದ್ಧಗೊಂಡಿದ್ದು, ಒಂದೆರಡು ದಿನಗಳಲ್ಲಿ ಜಾರಿಯಾಗುವ ನಿರೀಕ್ಷೆ ಇದೆ.

 ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಗಳು ಸಾಲಗಾರರಿಗೆ ಕಿರುಕುಳ ನೀಡಿದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರು.ವರೆಗೆ ದಂಡ ವಿಧಿಸುವ ಮತ್ತು ಲೈಸೆನ್ಸ್‌ ರದ್ದುಗೊಳಿಸುವ, ಸಾಲ ನೀಡುವಾಗ ಯಾವುದೇ ಅಡಮಾನ ಪಡೆಯಬಾರದು, ಕಿರುಕುಳ ನೀಡಿದರೆ ಜಾಮೀನುರಹಿತ ಪ್ರಕರಣವೆಂದು ಪರಿಗಣಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮೈಕ್ರೋ ಫೈನಾನ್ಸ್ (ಬಲವಂತ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ-2025’ ಕರಡು ಸಿದ್ಧಗೊಂಡಿದ್ದು, ಒಂದೆರಡು ದಿನಗಳಲ್ಲಿ ಜಾರಿಯಾಗುವ ನಿರೀಕ್ಷೆ ಇದೆ.

ಶನಿವಾರ ರಾತ್ರಿವರೆಗೆ ಕಾನೂನು ಇಲಾಖೆ ಅಧಿಕಾರಿಗಳು, ತಜ್ಞರು ಸಮಗ್ರವಾಗಿ ಚರ್ಚಿಸಿ 10 ಪುಟಗಳ ಕರಡು ಸುಗ್ರೀವಾಜ್ಞೆ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ ನಂತರ ರಾಜ್ಯಪಾಲರಿಗೆ ಸಲ್ಲಿಕೆಯಾಗಲಿದೆ.

ಮುಖ್ಯವಾಗಿ ನೋಂದಣಿ ಪ್ರಾಧಿಕಾರವು, ಸಾಲಗಾರರ ದೂರು ಆಧರಿಸಿ ಅಥವಾ ಸ್ವಯಂಪ್ರೇರಿತವಾಗಿ ಮೈಕ್ರೋ ಫೈನಾನ್ಸ್‌ ಅಥವಾ ಸಂಸ್ಥೆಯ ನೋಂದಣಿ ರದ್ದು ಮಾಡಲು ಸಾಕಷ್ಟು ಕಾರಣಗಳು ಲಿಖಿತವಾಗಿ ಸಲ್ಲಿಕೆಯಾದಲ್ಲಿ ಸಂಸ್ಥೆಗೆ ನೋಟಿಸ್‌ ನೀಡಿ ಅವರ ಅಹವಾಲು ಆಲಿಸಿ ನೋಂದಣಿ ರದ್ದು ಮಾಡಲು ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

30 ದಿನದೊಳಗೆ ನೋಂದಣಿ ಕಡ್ಡಾಯ:

ಸುಗ್ರೀವಾಜ್ಞೆ ಜಾರಿಗೊಂಡ 30 ದಿನದೊಳಗೆ ರಾಜ್ಯದಲ್ಲಿರುವ ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು ಆಯಾ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಆಗಬೇಕು. ಕಡ್ಡಾಯವಾಗಿ ಸ್ಥಳೀಯ ಕಚೇರಿ ಹೊಂದಬೇಕು. ಬಡ್ಡಿದರವನ್ನು ಫಲಕದಲ್ಲಿ ನಮೂದಿಸಬೇಕು. ಸಾಲಗಾರರಿಂದ ಯಾವುದೇ ಅಡಮಾನ ಇಟ್ಟುಕೊಳ್ಳುವಂತಿಲ್ಲ. ಹೆದರಿಸಿ, ಬೆದರಿಸಿ ಜಪ್ತಿ ಮಾಡುವಂತಿಲ್ಲ. ಮೈಕ್ರೋ ಫೈನಾನ್ಸ್‌ ಕಂಪನಿಗಳ ಪ್ರಾಧಿಕಾರವಾಗಿ ಜಿಲ್ಲಾಧಿಕಾರಿಯವರನ್ನು ನೇಮಿಸಲಾಗುತ್ತದೆ. ಕಿರುಕುಳ ನೀಡಿದಾಗ ಪೊಲೀಸರು ದೂರು ಸ್ವೀಕರಿಸಬೇಕು. ಅಲ್ಲದೆ, ಡಿವೈಎಸ್ಪಿ ಮೇಲ್ಪಟ್ಟ ಅಧಿಕಾರಿಗಳು ಸ್ವಯಂಪ್ರೇರಿತ ಕೇಸ್ ಕೂಡ ದಾಖಲಿಸಿಕೊಳ್ಳಬಹುದೆಂದು ಕರಡು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.

ಪ್ರಮುಖಾಂಶಗಳು:

- ಸಾಲ ವಸೂಲಿಗಾಗಿ ಸಾಲಗಾರರಿಗೆ ಅವಮಾನ, ಹಿಂಸೆ, ಹಲ್ಲೆ, ಬಲವಂತವಾಗಿ ಸ್ಥಿರಾಸ್ತಿ, ದಾಖಲೆಗಳನ್ನು ಕಿತ್ತುಕೊಳ್ಳುವುದು, ದಬ್ಬಾಳಿಕೆ, ದೌರ್ಜನ್ಯ, ಗೂಂಡಾಗಳು, ಬಾಡಿಗೆ ವ್ಯಕ್ತಿಗಳ ಬಳಕೆ, ಮನೆಗಳಿಗೆ ಭೇಟಿ ನೀಡುವುದು, ದೈನಂದಿನ ಕೆಲಸಗಳಿಗೆ ತೊಂದರೆ ಮಾಡಿ ಕಿರುಕುಳ ನೀಡಿದರೆ ಮೈಕ್ರೋ ಫೈನಾನ್ಸ್‌ ಲೈಸನ್ಸ್ ರದ್ದು, 5 ಲಕ್ಷ ದಂಡ ಮತ್ತು 6 ತಿಂಗಳಿಂದ 3 ವರ್ಷಗಳ ಜೈಲು ಶಿಕ್ಷೆ.

- ಮೈಕ್ರೋ ಫೈನಾನ್ಸ್‌ ಕಂಪನಿಗಳು ಸ್ಥಳೀಯವಾಗಿ ಕಚೇರಿ ಹೊಂದಿರಬೇಕು. ಗ್ರಾಹಕರಿಂದ ಸ್ವೀಕರಿಸಿದ ಹಣಕ್ಕೆ ಸಹಿ ಮಾಡಿದ ರಸೀದಿ ನೀಡಬೇಕು.

- ಸಾಲ ಪಡೆದವರು ಬಡ್ಡಿ, ಕಂತು ಪಾವತಿ ಸೇರಿ ಇನ್ನಿತರ ಯಾವುದೇ ವಿವರಗಳನ್ನು ಕೇಳಿದಾಗ ಕಂಪನಿಗಳು ಒದಗಿಸಬೇಕು.

-ಜಿಲ್ಲಾಧಿಕಾರಿಯವರು ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲ್ವಿಚಾರಣೆ ಪ್ರಾಧಿಕಾರ ಆಗಿರುತ್ತಾರೆ. ಬೇರೆ ಅಧಿಕಾರಿಗಳನ್ನು ಕೂಡ ಸರ್ಕಾರ ನೇಮಿಸಬಹುದು.

- ಸಾಲಗಾರರಿಂದ ದೂರುಗಳು ಬಂದರೆ ಸ್ವಯಂ ಪ್ರೇರಿತವಾಗಿ ಪ್ರಾಧಿಕಾರ ದೂರು ದಾಖಲಿಸಿಕೊಂಡು ಪರಿಶೀಲಿಸಿ, ಸಾಕಷ್ಟು ಕಾರಣಗಳಿದ್ದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯ ಲೈಸನ್ಸ್‌ ರದ್ದುಗೊಳಿಸಬಹುದು ಅಥವಾ ರದ್ದುಗೊಳಿಸಲು ಆರ್‌ಬಿಐಗೆ ಶಿಫಾರಸು ಮಾಡಬಹುದು.

- ಮೈಕ್ರೋ ಫೈನಾನ್ಸ್ ಕಚೇರಿಗಳಿಗೆ ಪ್ರಾಧಿಕಾರಗಳು ಭೇಟಿ ನೀಡಿ ಪರಿಶೀಲನೆ ನಡೆಸಬಹುದು.

- ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಿರುವ ವಿಚಾರಗಳು ಗಂಭೀರ ಸ್ವರೂಪದ ಅಪರಾಧಗಳಾಗಿದ್ದು, ಜಾಮೀನು ರಹಿತ ಪ್ರಕರಣವೆಂದು ಪರಿಗಣಿಸಲಾಗುತ್ತದೆ.

- ನೋಂದಣಿಯಾಗದ ಮತ್ತು ಲೈಸನ್ಸ್ ಹೊಂದಿರದ ಮೈಕ್ರೋಫೈನಾನ್ಸ್, ಸಾಲ ನೀಡುವ ಏಜೆನ್ಸಿಗಳು ಅಥವಾ ಸಂಸ್ಥೆಗಳು ಸಾಲ ನೀಡಿ, ಅದರ ವಸೂಲಿಗಾಗಿ ಕಿರುಕುಳ ನೀಡಿದರೆ ಬಾಧಿತ ವ್ಯಕ್ತಿಗಳು ಸುಗ್ರೀವಾಜ್ಞೆಯ ಅಧೀನದಲ್ಲಿ ಪರಿಹಾರ ಪಡೆಯಬಹುದು. ಅಲ್ಲದೆ, ಸಾಲದಿಂದ ಸಂಪೂರ್ಣವಾಗಿ ಬಿಡುಗಡೆಯನ್ನೂ ಕೋರಬಹುದು.

- ಸಾಲ ಪಡೆದವರು, ಸಾಲ ವಿತರಣೆ ಮೊತ್ತ ಮತ್ತು ಬಡ್ಡಿ ವಿವರಗಳನ್ನು ಪ್ರತಿ 3 ತಿಂಗಳಿಗೊಮ್ಮೆ ಪ್ರಾಧಿಕಾರಕ್ಕೆ ಮೈಕ್ರೋ ಫೈನಾನ್ಸ್‌ಗಳು ಒದಗಿಸಬೇಕು. ತಪ್ಪಿದರೆ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಲು ಅವಕಾಶವಿದೆ.

- ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಕಿರುಕುಳವಾದಾಗ ಸಾಲಗಾರರು ದೂರು ನೀಡಿದರೆ ಪೊಲೀಸರು ದೂರು ಸ್ವೀಕರಿಸಿ ಕೇಸ್ ದಾಖಲಿಸಬೇಕು. ನೆಪ ಹೇಳಿ ದೂರು ನಿರಾಕರಿಸುವಂತಿಲ್ಲ. ಡಿವೈಎಸ್ಪಿ ಮೇಲ್ಪಟ್ಟ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಬಹುದು.

- ಸಾಲಗಾರರು ಮತ್ತು ಸಾಲ ನೀಡಿದವರ ನಡುವಿನ ವ್ಯಾಜ್ಯಗಳನ್ನು ಪರಿಹರಿಸಲು ಓಂಬುಡ್ಸ್‌ಪರ್ಸನ್‌ ಅನ್ನು ಸರ್ಕಾರ ನೇಮಿಸಬಹುದು.

- ವ್ಯಾಜ್ಯಗಳು, ಮೇಲ್ಮನವಿಗಳು ಬಾಕಿ ಇದ್ದಲ್ಲಿ ಸಿವಿಲ್ ಕೋರ್ಟ್‌ಗಳು ಸಾಲಗಾರರಿಂದ ಬಡ್ಡಿ, ಸಾಲ ವಸೂಲಿ ಅರ್ಜಿಗಳನ್ನು ಪರಿಗಣಿಸಬಾರದು.

- ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಿತರಣೆ ವೇಳೆ ಭದ್ರತೆಗಾಗಿ ಯಾವುದೇ ಅಡಮಾನ ಕೇಳುವಂತಿಲ್ಲ. ಸುಗ್ರೀವಾಜ್ಞೆ ಮುಂಚೆ ಅಡಮಾನ ಪಡೆದಿದ್ದಾರೆ ಅದನ್ನು ಸಾಲಗಾರರಿಗೆ ಮರಳಿಸಬೇಕು.

- ಸಾಲದಲ್ಲಿ ಮೂರು ಭಾಗಗಳು ಮಾತ್ರ ಇರಬೇಕು. ಅವುಗಳೆಂದರೆ ಬಡ್ಡಿ ಶುಲ್ಕ, ಪ್ರಕ್ರಿಯೆ ಶುಲ್ಕ ಮತ್ತು ಆಡಳಿತ ಶುಲ್ಕವನ್ನು ಒಳಗೊಂಡಿರುವ ವಿಮಾ ಪ್ರೀಮಿಯಂ ಮಾತ್ರ ಇರಬೇಕು.

- ಸಾಲ ವಿತರಣೆ ವೇಳೆ ನಿರ್ದಿಷ್ಟ ನಿಯಮಾವಳಿಗಳನ್ನು ಪಾಲಿಸಬೇಕು. ಅದು ಬಡ್ಡಿ ದರ, ಷರತ್ತುಗಳನ್ನು ಸಾಲ ಪಡೆಯುವವರಿಗೆ ಸ್ಪಷ್ಟವಾಗಿ ತಿಳಿಸಬೇಕು.

- ಸಾಲ ಪಡೆದವರಿಗೆ ಸ್ಥಳೀಯ ಭಾಷೆ ಅಥವಾ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಸಾಲದ ವಿವರಗಳನ್ನು ತಿ‍ಳಿಸಬೇಕು.

- ಗ್ರಾಹಕರಿಗೆ ವಿಧಿಸುವ ಬಡ್ಡಿ ದರವನ್ನು ತಮ್ಮ ಕಚೇರಿಯಲ್ಲಿನ ಫಲಕದಲ್ಲಿ ಪ್ರದರ್ಶಿಸಬೇಕು. ಗ್ರಾಹಕರೊಂದಿಗೆ ಪತ್ರ ಮತ್ತು ಮೌಖಿಕವಾಗಿ ಕನ್ನಡದಲ್ಲಿ ವ್ಯವಹರಿಸಬೇಕು.