ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಏ.1ರಿಂದ ಉಜಿರೆ ಗ್ರಾಮ ಪಂಚಾಯಿತಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗುವತ್ತ ಹೆಜ್ಜೆ ಇರಿಸಿದೆ.18 ಸಾವಿರಕ್ಕಿಂತ ಅಧಿಕ ಜನಸಂಖ್ಯೆ, ನೂರಾರು ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆ, ಹೆಸರಾಂತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಉಜಿರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಾಲೂಕಿನ ಅತಿ ದೊಡ್ಡಪೇಟೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಇಲ್ಲಿ ಪ್ರತಿದಿನ ಸಾವಿರಾರು ವಾಹನ, ಪ್ರಯಾಣಿಕರ ಓಡಾಟವೂ ಇದೆ. ಉಜಿರೆ ಪೇಟೆಯಲ್ಲಿ ಸ್ವಚ್ಛತೆ ಸವಾಲಾಗಿದ್ದರೂ, ಗ್ರಾಮ ಪಂಚಾಯಿತಿ ಅದನ್ನು ನಾನಾ ಕ್ರಮಗಳ ಮೂಲಕ ನಿರ್ವಹಿಸುತ್ತಿದೆ.ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಏಕ ಬಳಕೆ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿದೆ. ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹೋಟೆಲ್, ಅಂಗಡಿಗಳಿಗೆ ಮತ್ತು ಹೆಚ್ಚು ಕಸ ಉತ್ಪಾದನೆ ಮಾಡುವಂತಹ ಎಲ್ಲ ಅಂಗಡಿಗಳಿಗೆ ಮರು ಬಳಕೆ ಮಾಡಬಹುದಾದ ಪ್ಲಾಸ್ಟಿಕ್, ಬಟ್ಟೆ ಚೀಲಗಳನ್ನು ಬಳಸಲು ಸಾರ್ವಜನಿಕರಿಗೆ ಹಾಗೂ ಅಂಗಡಿ ಹೋಟೆಲ್ ಮಾಲಕರಿಗೆ ಸೂಚಿಸಲಾಗಿದೆ. ಹಾಗೂ ಇದರ ಬಗ್ಗೆ ಅನೇಕ ಸಭೆಗಳನ್ನು ನಡೆಸಲಾಗಿದೆ.
ಸೂಚನೆಗಳು:ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸದೆ, ಬಟ್ಟೆಯ ಪ್ಯಾಡ್, ಮುಟ್ಟಿನ ಕಪ್‌ಗಳನ್ನು ಬಳಸಲು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನೂ ನಿಷೇಧಿಸುವ ಕುರಿತಂತೆ ಕ್ರಮವಹಿಸಲು ತೀರ್ಮಾನಿಸಲಾಗಿರುತ್ತದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ವಸತಿ ಸಮುಚ್ಚಯಗಳು, ಮೆಸ್, ಹಾಸ್ಟೆಲ್‌ಗಳಿಂದ ಸರಿಯಾಗಿ ಮೂಲದಲ್ಲೇ ಬೇರ್ಪಡಿಸದೆ ಕಸವನ್ನು ನೀಡುತ್ತಿರುವ ಬಗ್ಗೆ ಮತ್ತು ಹಲವು ವಸತಿ ಸಮುಚ್ಚಯದವರು ಕಸವನ್ನು ಸ್ವಚ್ಛ ವಾಹಿನಿ ಗಾಡಿಗೆ ನೀಡದೆ ರಸ್ತೆ ಬದಿಯಲ್ಲಿ ಎಸೆದು ಮಲಿನ ಮಾಡುತ್ತಿರುವ ಬಗ್ಗೆಯೂ ಸದಸ್ಯರು ದೂರನ್ನು ನೀಡಿದ್ದು, ಈ ಕುರಿತಂತೆ ಮುಂದಿನ ಹಂತವಾಗಿ ವಸತಿ ಸಮುಚ್ಚಯದ ಮಾಲೀಕರೊಂದಿಗೆ, ಮೆಸ್, ಪೇಯಿಂಗ್ ಗೆಸ್ಟ್, ಖಾಸಗಿ ಹಾಸ್ಟೆಲ್ ಮಾಲೀಕರೊಂದಿಗೆ ಸಮಾಲೋಚನಾ ಸಭೆಯನ್ನು ಮಾಡಿ, ಎಲ್ಲ ರೀತಿಯಲ್ಲೂ ಕಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಕುರಿತು ಮತ್ತು ಕಸ ಸಂಗ್ರಹಣೆಯನ್ನು ಶೇ.100ರಷ್ಟು ಹೆಚ್ಚಿಸುವ ಬಗ್ಗೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಬಗ್ಗೆ ಗ್ರಾಮ ಪಂಚಾಯತಿ ತೀರ್ಮಾನ ಕೈಗೊಂಡಿದೆ.................
ಉಜಿರೆ ಗ್ರಾಮದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಳಸದಂತೆ ಸೂಚಿಸಲಾಗಿದೆ. ಈ ಬಗ್ಗೆ ಗ್ರಾಪಂ ವತಿಯಿಂದ ಪ್ರತಿ ಅಂಗಡಿಗಳ ಪರಿಶೀಲನೆ ನಡೆಯಲಿದೆ. ಹಂತ ಹಂತವಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದು ಪ್ಲಾಸ್ಟಿಕ್ ಬಳಕೆ ಕಂಡು ಬಂದರೆ ದಂಡ ವಿಧಿಸಲಾಗುವುದು.-ಉಷಾಕಿರಣ ಕಾರಂತ್, ಅಧ್ಯಕ್ಷೆ, ಗ್ರಾಪಂ ಉಜಿರೆ.
-------------ಕಾಗದದ ಚೀಲ, ಜೈವಿಕ ವಿಘಟನೆಯ ಚೀಲ, ಬಟ್ಟೆಯ ಚೀಲಗಳನ್ನು ಗ್ರಾಹಕರಿಗೆ ಒದಗಿಸುವಂತೆ ಸೂಚನೆ ನೀಡಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿ ತ್ಯಾಜ್ಯ ವಿಂಗಡಣೆಯನ್ನು ಗ್ರಾಮಸ್ಥರು ಅನುಸರಿಸಬೇಕು.
-ಪ್ರಕಾಶ್ ಶೆಟ್ಟಿ ನೊಚ್ಚ, ಪಿಡಿಒ, ಗ್ರಾಪಂ ಉಜಿರೆ.