ಸಾರಾಂಶ
ಇಂದಿನ ಯುವಕ ಯುವತಿಯರು ಮೊಬೈಲ್ ಹಾಗೂ ಇತರ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದು ಅವುಗಳನ್ನು ನಿಯಂತ್ರಿಸುವ ಮೂಲಕ ಉತ್ತಮ ಪ್ರಜೆಗಳಾಗಿ ಬದುಕಲು ಮುಂದಾಗಬೇಕು
ಕುಷ್ಟಗಿ: ಹುಟ್ಟುತ್ತಲೇ ಯಾರೂ ಪರಿಪೂರ್ಣರಲ್ಲ ಆದರೆ ನಮ್ಮ ಸ್ವಭಾವ ವ್ಯಕ್ತಿತ್ವ ಮಾನವೀಯ ಮೌಲ್ಯಗಳು, ಶ್ರದ್ಧೆ ನಿರಂತರ ಪರಿಶ್ರಮದಿಂದ ನಾವು ನಮ್ಮ ಜೀವನ ಕಟ್ಟಿಕೊಳ್ಳಬಹುದು. ನಮ್ಮ ಮೂರ್ತಿ ನಾವೇ ಕೆತ್ತಿಕೊಳ್ಳುವಂತಹ ಶಿಲ್ಪಿಗಳಾಗಬೇಕು ಎಂದು ಗಜೇಂದ್ರಗಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ.ಮಹೇಂದ್ರ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಉದ್ಯೋಗ ಮಾಹಿತಿ ಕೋಶ ಅಡಿಯಲ್ಲಿ ಬಿಎ ಮತ್ತು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ದಿನದ ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗಾವಕಾಶಗಳ ಕುರಿತು ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಯುವಕ ಯುವತಿಯರು ಮೊಬೈಲ್ ಹಾಗೂ ಇತರ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದು ಅವುಗಳನ್ನು ನಿಯಂತ್ರಿಸುವ ಮೂಲಕ ಉತ್ತಮ ಪ್ರಜೆಗಳಾಗಿ ಬದುಕಲು ಮುಂದಾಗಬೇಕು ಎಂದರು.ನಂತರ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ಸಂವಾದ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಮಾಹಿತಿ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಕಾಲೇಜು ಪ್ರಾಂಶುಪಾಲ ಡಾ.ಎಸ್.ವಿ.ಡಾಣಿ ಮಾತನಾಡಿದರು.ಈ ಸಂದರ್ಭದಲ್ಲಿ ಕಾರ್ಯಾಗಾರದ ಸಂಚಾಲಕ ಎ.ಬಿ. ಕೆಂಚರೆಡ್ಡಿ, ವಿಶ್ವನಾಥ ಕೋಳೂರ, ವಿದ್ಯಾವತಿ ಗೋಟೂರ್ ಭೋಜರಾಜ, ರವಿ ಹಾದಿಮನಿ, ರತ್ನ ಬೆದವಟ್ಟಿ ಉಪಸ್ಥಿತರಿದ್ದರು. ಮಹಾಂತೇಶ ಗವಾರಿ ನಿರೂಪಿಸಿದರು. ಈ ಕಾರ್ಯಾಗಾರದಲ್ಲಿ 180 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.