ಕೈಗಾರಿಕೆಗಳು, ಕೃಷಿಗೆ ನದಿ ನೀರು ಬಳಕೆ ನಿಷೇಧ

| Published : Apr 19 2024, 01:04 AM IST

ಸಾರಾಂಶ

ಗ್ರಾಮೀಣ ನೀರು ಸರಬರಾಜು ಯೋಜನೆಗಳಿಗೆ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಿಳಿಯೂರು ಅಣೆಕಟ್ಟಿನಿಂದ ಎಎಂಆರ್‌ ಅಣೆಕಟ್ಟಿಗೆ ಗುರುವಾರ ನೀರು ಹರಿಯಬಿಡಲಾಗಿದೆ

ಕನ್ನಡಪ್ರಭ ವಾರ್ತೆ ಮಂಗಳೂರು

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಎಂಆರ್‌ ಅಣೆಕಟ್ಟಿನಿಂದ ಜಿಲ್ಲೆಯ ಕೈಗಾರಿಕೆಗಳು ಮತ್ತು ಕೃಷಿಗೆ ನೀರು ಬಳಕೆ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ನದಿಗಳ ಅಣೆಕಟ್ಟುಗಳಲ್ಲಿ ನೀರು ಆವಿಯಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ಜಿಲ್ಲಾಧಿಕಾರಿ ಕೈಗೊಂಡಿದ್ದಾರೆ. ಮಳೆಗಾಲ ಆರಂಭವಾಗುವವರೆಗೆ ಈ ನಿಷೇಧ ಮುಂದುವರಿಯಲಿದೆ.ಬಿಳಿಯೂರು ಡ್ಯಾಂನಿಂದ ಎಎಂಆರ್‌ಗೆ ನೀರು: ಗ್ರಾಮೀಣ ನೀರು ಸರಬರಾಜು ಯೋಜನೆಗಳಿಗೆ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಿಳಿಯೂರು ಅಣೆಕಟ್ಟಿನಿಂದ ಎಎಂಆರ್‌ ಅಣೆಕಟ್ಟಿಗೆ ಗುರುವಾರ ನೀರು ಹರಿಯಬಿಡಲಾಗಿದೆ.

ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲೆಯ ಎಲ್ಲ ನಾಗರಿಕರು ನೀರನ್ನು ಮಿತವಾಗಿ ಬಳಸಬೇಕು ಮತ್ತು ಅನಗತ್ಯ ಪೋಲು ಮಾಡದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಮನವಿ ಮಾಡಿದ್ದಾರೆ.ತುಂಬೆಯಲ್ಲಿ 5.24 ಮೀ. ನೀರು:

ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ಗರಿಷ್ಠ 6 ಮೀ. ಸಂಗ್ರಹ ಸಾಮರ್ಥ್ಯ ಇರುವಲ್ಲಿ ಗುರುವಾರ 5.24 ಮೀ. ಎತ್ತರಕ್ಕೆ ನೀರಿನ ಸಂಗ್ರಹವಿದೆ. ತುಂಬೆ ಡ್ಯಾಂ ಕೆಳಭಾಗದ ನೀರನ್ನು 4 ಪಂಪ್‌ಗಳ ಮೂಲಕ ತುಂಬೆ ಡ್ಯಾಂಗೆ ತುಂಬಿಸಲಾಗುತ್ತಿದೆ.