ಸಾರಾಂಶ
ಮಾರುಕಟ್ಟೆಯಲ್ಲಿ ಹೊಸದಾಗಿ ಬಂದಿರುವ ಸಿರಿಂಜ್ ಮಾದರಿಯ ಚಾಕೊಲೆಟ್ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಹೊಳೆನರಸೀಪುರ : ನಗರ ಪ್ರದೇಶ ಹಾಗೂ ಪಟ್ಟಣಗಳ ಮಾರುಕಟ್ಟೆಯಲ್ಲಿ ಸಿರಿಂಜ್ ಮಾದರಿಯ ಚಾಕೊಲೆಟ್ ಲಗ್ಗೆ ಇಟ್ಟಿದ್ದು, ಹಲವಾರು ಸಮಸ್ಯೆಗಳನ್ನು ಸೃಷ್ಠಿಸುವ ಸಾಧ್ಯತೆ ಹೆಚ್ಚುತ್ತಿದೆ. ಈ ಮಾದರಿ ಚಾಕೋಲೆಟ್ ನಿಷೇಧ ಮಾಡುವ ಅಗತ್ಯವಿದೆ.
ರಾಜ್ಯದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸಿರಿಂಜ್ ಮಾದರಿಯ ಚಾಕೋಲೆಟ್ ತಯಾರಕ ಸೇರಿದಂತೆ ನಾಲ್ಕೈದು ವ್ಯಕ್ತಿಗಳ ಕೈ ಬದಲಾವಣೆ ನಂತರ ೫ ರು.ಗೆ ಚಾಕೋಲೆಟ್ ಮಕ್ಕಳ ಕೈ ಸೇರುತ್ತದೆ. ಆದ್ದರಿಂದ ಸಿರಂಜ್ ಒಳಗೆ ತುಂಬಿರುವ ಚಾಕೋಲೆಟ್ ತಯಾರಿಕೆಗೆ ಬಳಸಿರುವ ಪದಾರ್ಥಗಳ ಗುಣಮಟ್ಟದ ಬಗ್ಗೆ ಚಿಂತನೆ ನಡೆಸಿದಾಗ, ಈ ಚಾಕೋಲೆಟ್‌ಗೆ ಬಳಸಿರುವ ಸಿರಂಜ್ ಆಸ್ಪತ್ರೆಯಲ್ಲಿ ಬಳಸಿ ಎಸೆದಿರಬಹುದಾ ಎಂಬ ಪ್ರಶ್ನೆ ಮೂಡುತ್ತದೆ. ಗುಣಮಟ್ಟ ತಪಾಸಣೆಗೆ ಸಂಬಂಧಪಟ್ಟ ಇಲಾಖೆ ಮುಂದಾಗಬೇಕಿದೆ.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರಂ ನಂ. 1ರ ಪಕ್ಕದ ಖಾಲಿ ನಿವೇಶನದಲ್ಲಿ ವೈದ್ಯಕೀಯ ಬಳಕೆಯ ಸಿರಂಜ್, ಕೈಗವಸು, ಗ್ಲೂಕೋಸ್ ಹಾಕುವ ಪರಿಕರಗಳು ಹಾಗೂ ಇತರೆ ಹಲವಾರು ಬಳಕೆ ಮಾಡಿದ ವಸ್ತುಗಳನ್ನು ಎಸೆದಿದ್ದಾರೆ. ಸ್ವಲ್ಪ ದೂರದಲ್ಲಿ ಇದೇ ರೀತಿಯ ತ್ಯಾಜ್ಯಕ್ಕೆ ಬೆಂಕಿ ಹಾಕಿದ್ದಾರೆ. ವೈದ್ಯಕೀಯ ಉದ್ದೇಶಕ್ಕೆ ಬಳಸಿದ ವಸ್ತುಗಳ ವಿಲೇವಾರಿಗೆ ಸರ್ಕಾರ ಮಾರ್ಗಸೂಚಿ ರೂಪಿಸಿದೆ. ಆದರೆ ಬಸ್ ನಿಲ್ದಾಣಕ್ಕೆ ವೈದ್ಯಕೀಯ ತ್ಯಾಜ್ಯ ಹೇಗೆ ಬಂದು ಎಂಬ ಪ್ರಶ್ನೆ ಒಂದೆಡೆಯಾದರೆ, ಬಸ್ ನಿಲ್ದಾಣದಲ್ಲಿ ಪುಟ್ಟ ಮಕ್ಕಳು ಆಟವಾಡುತ್ತಾ ಈ ರೀತಿ ಬಿಸಾಕಿದ ಸಿರಿಂಜ್‌ಗಳನ್ನು ಚಾಕಲೇಟಿನ ಸಿರಿಂಜ್ ಎಂದು ಬಾಯಿಗೆ ಹಾಕಿಕೊಂಡಲ್ಲಿ ಉಹಿಸಲು ಅಸಾಧ್ಯವಾದ ಸಮಸ್ಯೆಗೆ ತುತ್ತಾಗಬಹುದು.
ಇತ್ತೀಚಿನ ದಿನಗಳಲ್ಲಿ ಡ್ರಗ್ ಮಾಫಿಯಾದಲ್ಲಿ ವಿವಿಧ ತಪಾಸಣೆಯ ಹೆಸರಿನಲ್ಲಿ ರೋಗಿಗಳು ಹಾಗೂ ಸಂಬಂಧಿಕರಿಗೆ ಪಿಡುಗಾಗಿ ಕಾಡುತ್ತಿರುವ ಸಂದರ್ಭದಲ್ಲಿ ಸಿರಿಂಜ್ ಮಾದರಿಯ ಚಾಕಲೇಟ್ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯುವಿಕೆಯೂ ಒಂದಕ್ಕೊಂದು ಚೈನ್ ಲಿಂಕ್ ಅಥವಾ ಮಾಫಿಯಾ ಇರಬಹುದಾ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.