ಬಾಳೆ, ಭತ್ತದ ಗದ್ದೆಗೂ ನುಗ್ಗಿದ ನೀರು!

| Published : Aug 04 2024, 01:18 AM IST

ಸಾರಾಂಶ

ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹಂಪಿ, ಬುಕ್ಕಸಾಗರ, ವೆಂಕಟಾಪುರ ಭಾಗದಲ್ಲಿ ಬಾಳೆತೋಟ, ಭತ್ತದ ಗದ್ದೆಗಳಿಗೂ ನೀರು ನುಗ್ಗಿದೆ. ಇನ್ನು ಹಂಪಿಯ ಹಲವು ಸ್ಮಾರಕ, ಮಂಟಪಗಳು ಜಲಾವೃತವಾಗಿವೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಶನಿವಾರ 33 ಗೇಟ್‌ಗಳಿಂದ 1. 22 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಬಿಡಲಾಗಿದೆ. ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹಂಪಿ, ಬುಕ್ಕಸಾಗರ, ವೆಂಕಟಾಪುರ ಭಾಗದಲ್ಲಿ ಬಾಳೆತೋಟ, ಭತ್ತದ ಗದ್ದೆಗಳಿಗೂ ನೀರು ನುಗ್ಗಿದೆ. ಇನ್ನು ಹಂಪಿಯ ಹಲವು ಸ್ಮಾರಕ, ಮಂಟಪಗಳು ಜಲಾವೃತವಾಗಿವೆ.

ಹಂಪಿಯ ನದಿಯಲ್ಲಿರುವ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿಲಿಂಗಗಳು ಜಲಾವೃತವಾಗಿವೆ. ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಕಾಲು ಸೇತುವೆ, ಜನಿವಾರ ಮಂಟಪಗಳು ಮುಳುಗಡೆಯಾಗಿವೆ. ಹಂಪಿಯ ಕೋದಂಡರಾಮಸ್ವಾಮಿ ದೇವಾಲಯವೂ ಜಲಾವೃತವಾಗಿದೆ. ಕಂಪಭೂಪ ಮಾರ್ಗ ಕೂಡ ಬಂದ್‌ ಆಗಿದೆ.

ಜಲಾಶಯದ ಒಳಹರಿವು 1ಲಕ್ಷ 20 ಸಾವಿರ ಕ್ಯುಸೆಕ್‌ಗೂ ಅಧಿಕ ಇರುವ ಹಿನ್ನೆಲೆಯಲ್ಲಿ ಜಲಾಶಯದ 33 ಗೇಟ್‌ಗಳನ್ನು ತೆರೆದು ನದಿಗೆ 1ಲಕ್ಷ 22 ಸಾವಿರ ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಪ್ರವಾಸಿಗರು ನದಿ ತೀರದಲ್ಲಿ ಬರದಂತೆ ನಿರ್ಬಂಧಿಸಲಾಗಿದೆ.