ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ತಾಲೂಕಿನ ಕಡಕೋಳ, ಹೊಸಳ್ಳಿ, ಕುಸ್ಲಾಪುರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ರಭಸದ ಬಿರುಗಾಳಿ ಹಾಗೂ ಮಳೆಗೆ ಬಾಳೆ ಬೆಳೆ ಸೇರಿದಂತೆ ವಿವಿಧ ನೀರಾವರಿ ಬೆಳೆಗಳು ನಾಶವಾಗಿವೆ. ರೈತರು ಬೆಳೆಹಾನಿ ಪರಿಹಾರಕ್ಕೆ ಮೊರೆ ಇಟ್ಟಿದ್ದಾರೆ.ತಾಲೂಕಿನ ಕಡಕೋಳ ಗ್ರಾಮದ ರೈತ ಶೇಖರಗೌಡ ಮರಿಗೌಡ ಪಾಟೀಲ ಎಂಬವರು ೨ ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದು, ಸಧ್ಯ ೮ ತಿಂಗಳ ಬೆಳೆಯಾಗಿದ್ದು, ಕಟಾವಿಗೆ ಬಂದ ಸಮಯದಲ್ಲೇ ರಭಸದ ಬಿರುಗಾಳಿ, ಗುಡುಗು, ಸಿಡಿಲಿನ ಆರ್ಭಟದಲ್ಲಿ ಜೋರಾದ ಮಳೆ ಸುರಿದಿದ್ದರಿಂದ ಬಾಳೆಬೆಳೆ ನೆಲಕಚ್ಚಿದೆ. ಬೀಜ, ಸಸಿ, ಗೊಬ್ಬರ, ಔಷಧಿ ಸಿಂಪರಣೆ, ಆಳುಗಳ ಖರ್ಚುವೆಚ್ಚ ಅಂತಾ ಲಕ್ಷಾಂತರ ರು. ಹಣ ಖರ್ಚು ಮಾಡಿದ್ದು, ಸಧ್ಯ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತ ದಿಕ್ಕುತೋಚದೆ ಪರಿಹಾರಕ್ಕಾಗಿ ಪರದಾಡುವಂತಾಗಿದೆ.ಇದೇ ರೀತಿ ಹಿಂದೆಯೂ ಈ ರೈತ ಚೆಂಡು ಹೂವು, ಪಪ್ಪಾಯಿ ಬೆಳೆದು ಅಕಾಲಿಕ ಮಳೆಗೆ ಕೈ ಸುಟ್ಟುಕೊಂಡಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಯಾಪೈಸೆ ಪರಿಹಾರ ನೀಡಿಲ್ಲ. ಇಲಾಖೆಗೆ ಬೆಳೆಹಾನಿ ಫೋಟೋ ಸಹಿತ ಲಿಖಿತ ಅರ್ಜಿ ಸಲ್ಲಿಸಿ ಪರಿಹಾರಕ್ಕೆ ಅಂಗಲಾಚಿ ಬೇಡಿಕೊಂಡರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರ ರೈತರ ಗೋಳು ಆಲಿಸದೇ ಬೇಜವಾಬ್ದಾರಿ ತೋರಿದ್ದರು. ಒಮ್ಮೆಯೂ ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.ಸಧ್ಯ ರೈತರು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಳಿ ಅಬ್ಬರಕ್ಕೆ ಬಾಳೆ ಬೆಳೆ ಉರುಳಿಬಿದ್ದ ಪರಿಣಾಮ ಅಪಾರ ನಷ್ಟ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ತಿರುಗಿ ನೋಡದೇ ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು. ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆಯಿಂದ ತಕ್ಷಣ ಪರಿಹಾರಧನ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.ಈ ಹಿಂದೆ ಗ್ರಾಮ ಪಂಚಾಯಿತಿ ಅಡಿಯಲ್ಲಿ ನರೇಗಾ ಯೋಜನೆ ಅಡಿ ಬೆಳೆಹಾನಿಗೆ ಸಹಾಯಧನ ನೀಡಲಾಗುತ್ತಿತ್ತು. ಆದರೆ ಈ ಯೋಜನೆ ಸಧ್ಯ ಬಂದಾಗಿರುವುದಾಗಿ ಹೇಳುತ್ತಿದ್ದು, ತೋಟಗಾರಿಕೆ ಇಲಾಖೆಯಿಂದಲಾದರೂ ತುರ್ತು ಪರಿಹಾರ ನೀಡುವಂತೆ ಕೇಳಿಕೊಂಡರೂ ಅಧಿಕಾರಿಗಳು ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡದೇ ಸಮೀಕ್ಷೆ ನಡೆಸದೆ ಪರಿಹಾರ ಘೋಷಣೆಯಲ್ಲಿಯೂ ವಿಳಂಬ ಮಾಡುತ್ತಿದ್ದಾರೆ.ರೈತರ ಆರೋಪ: ಸಹಾಯಧನ ವಿತರಣೆಯಲ್ಲಿಯೂ ತೋಟಗಾರಿಕೆ ಇಲಾಖೆ ಅಧಿಕಾರಿ ತಾರತಮ್ಯವೆಸಗಿದ್ದಾರೆ. ಅಧಿಕಾರಿ ಆಮಿಷಕ್ಕೆ ಒಳಗಾಗಿ ಅಕ್ಕಪಕ್ಕದ ಕೆಲ ರೈತರಿಗೆ ಸಹಾಯಧನ ನೀಡಿದ್ದಾರೆ. ನಮಗೆ ಮಾತ್ರ ಎಷ್ಟೇ ಕೇಳಿಕೊಂಡರೂ ಲಿಖಿತ ಅರ್ಜಿ ಸಲ್ಲಿಸಿದರೂ ನಯಾಪೈಸೆ ಸಹಾಯಧನ ನೀಡುತ್ತಿಲ್ಲ. ಅಧಿಕಾರಿಯ ತಾರತಮ್ಯ ನೀತಿ ವಿರುದ್ಧ ಶೀಘ್ರದಲ್ಲಿಯೇ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.
ಪರಿಶೀಲಿಸಿ ವರದಿ: ಕಳೆದ ಎರಡ್ಮೂರು ದಿನಗಳ ಹಿಂದೆ ಸುರಿದ ರಭಸದ ಗಾಳಿ ಮಳೆಗೆ ಬಾಳೆ ಬೆಳೆ ಹಾನಿಯಾಗಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಹಸೀಲ್ದಾರ್ ಕಾರ್ಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಈ ಹಿಂದೆ ಪಪ್ಪಾಯಿ ಬೆಳೆ ಹಾನಿಯಾಗಿರುವ ಬಗ್ಗೆ ರೈತರು ಅರ್ಜಿ ಸಲ್ಲಿಸಿರುವ ಕುರಿತು ವಿಚಾರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಉಪನಿರ್ದೇಶಕ ಪ್ರಶಾಂತ ಕುಲಕರ್ಣಿ ತಿಳಿಸಿದರು.ರೈತರಿಗೆ ಅನ್ಯಾಯ: ₹೭೦ ಸಾವಿರ ಹಣ ಖರ್ಚು ಮಾಡಿ ಬೆಸ್ಟ್ ಬಯೋಟೆಕ್ ಕಂಪನಿ ವತಿಯಿಂದ ಬಾಳೆ ಸಸಿ ಖರೀದಿಸಿ ನಾಟಿ ಮಾಡಲಾಗಿತ್ತು. ಆದರೆ ಕಳೆದ ಎರಡ್ಮೂರು ದಿನಗಳಲ್ಲಿ ಸುರಿದ ರಭಸದ ಬಿರುಗಾಳಿ ಹಾಗೂ ಮಳೆಗೆ ಬಾಳೆ ಬೆಳೆ ನೆಲಕ್ಕುರುಳಿ ಹಾನಿಯಾಗಿದೆ. ಸಿಎಚ್‌ಎಂ ಯೋಜನೆಯಡಿ ಅಧಿಕಾರಿಗಳು ಸಹಾಯಧನ ಕೊಡಲು ಬೇರೆ ಬೇರೆ ಕಾರಣ ಹೇಳುತ್ತಾ ಅರ್ಹ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಡಕೋಳ ಗ್ರಾಮದ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮಾದೇಗೌಡ ಪಾಟೀಲ ತಿಳಿಸಿದರು.