ಸಾರಾಂಶ
ಕುರುಗೋಡು ತಾಲೂಕಿನಲ್ಲಿ ಭಾನುವಾರ ಮಳೆ, ಬಿರುಗಾಳಿ ಸಹಿತ ಭಾರಿ ಮಳೆಗೆ ಕೆಲವೆಡೆ ಅವಘಡ ಸಂಭವಿಸಿದೆ. ಬಾಳೆಗಿಡಗಳು ನೆಲಕ್ಕೊರಗಿದರೆ, ಕಟಾವಿಗೆ ಬಂದಿದ್ದ ಬತ್ತ ಮಣ್ಣುಪಾಲಾಗಿದೆ.
ಕುರುಗೋಡು: ತಾಲೂಕಿನಲ್ಲಿ ಭಾನುವಾರ ಮಳೆ, ಬಿರುಗಾಳಿ ಸಹಿತ ಭಾರಿ ಮಳೆಗೆ ಕೆಲವೆಡೆ ಅವಘಡ ಸಂಭವಿಸಿದೆ.
ತಾಲೂಕಿನ ದಮ್ಮೂರು ಗ್ರಾಮದ ಪಿ. ನಂದಿನಿ ಎಂಬುವವರಿಗೆ ಸೇರಿದ ಎರಡೂವರೆ ಎಕರೆ ಸಿಂಗದೇವನಹಳ್ಳಿ ಗ್ರಾಮದ ಸತ್ಯನಾರಾಯಣ ರೆಡ್ಡಿ ಅವರ ಎರಡು ಎಕರೆ ಹಾಗೂ ಸಿಂಧಗೇರಿ ಗ್ರಾಮದ ತಿಮ್ಮೇಗೌಡ ಅವರು ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಮಳೆ, ಗಾಳಿಗೆ ನೆಲಕ್ಕೆ ಬಿದ್ದಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ.ಹೊಸ ಯಲ್ಲಾಪುರದಲ್ಲಿ ಬೃಹತ್ ಮರವೊಂದು ಬಿದ್ದು ಮೂಕಪ್ಪ ಎಂಬವರ ಗುಡಿಸಲು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೆ ಜೀವಹಾನಿಯಾಗಿಲ್ಲ. ಕೆಲವೆಡೆ ವಿದ್ಯುತ್ ಕಂಬ ಬಿದ್ದಿವೆ. ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಕಟಾವಿಗೆ ಬಂದಿದ್ದ ಬತ್ತದ ಕಾಳು ಮಣ್ಣುಪಾಲಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಾದನಹಟ್ಟಿ ಗ್ರಾಮದಲ್ಲಿ ಹದ ಮಳೆ ಸುರಿದಿದೆ. ಚರಂಡಿ ತುಂಬಿ ಕಲುಷಿತ ನೀರು ರಸ್ತೆಯ ಮೇಲೆ ಹರಿದಿದೆ.ಬೆಳಗ್ಗೆಯಿಂದ ವಾತಾವರಣ ತೀವ್ರ ಬಿಸಿಲಿನಿಂದ ಕೂಡಿತ್ತು. ಜನರು ಬಿಸಿಲಿನ ಪ್ರಖರತೆಗೆ ತತ್ತರಿಸಿದ್ದರು. ಮುನ್ಸೂಚನೆ ಇಲ್ಲದೆ ಏಕಾಏಕಿ ಮಳೆ ಸುರಿಯಲು ಪ್ರಾರಂಭಿಸಿತು.
ಜಮೀನುಗಳಲ್ಲಿ ಒಣಗಿಸಲು ಹಾಕಿದ್ದ ಬತ್ತ ಮಳೆಗೆ ಸಿಲುಕಿತು. ರಕ್ಷಣೆ ಮಾಡಲು ರೈತರು ತಾಡಪತ್ರೆಗಾಗಿ ತಡಕಾಡಿದರು.ತಂಪಾದ ವಾತಾವರಣ: ಭಾರಿ ಮಳೆ ಸುರಿದ ಪರಿಣಾಮ ವಾತಾವರಣ ತಂಪಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರು ತಂಪು ವಾತಾವರಣದಿಂದ ಪುಳಕಿತರಾಗಿದ್ದಾರೆ. ಕೃಷಿ ಪೂರ್ವ ಚಟುವಟಿಕೆ ಕೈಗೊಳ್ಳಲು ಮಳೆಗಾಗಿ ಕಾಯುತ್ತಿದ್ದ ರೈತರ ಮುಖದಲ್ಲಿ ಮಳೆ ಮಂದಹಾಸ ಮೂಡಿಸಿದೆ.