ಬಾಣಂತಿ ರೋಜಾ ಸಾವು: 20 ದಿನ ಕಳೆದರೂ ಸಿಗದ ಪರಿಹಾರ

| Published : Dec 07 2024, 12:30 AM IST

ಸಾರಾಂಶ

ಬಳ್ಳಾರಿಯ ಬಿಮ್ಸ್‌ನಲ್ಲಿ ನಡೆದ ಬಾಣಂತಿಯರ ಸರಣಿ ಸಾವು ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಮೃತರ ಮನೆಗಳಲ್ಲಿ ನೀರವ ಮೌನ ಆವರಿಸಿದೆ.

ಬಿ. ಎಚ್. ಎಂ ಅಮರನಾಥ ಶಾಸ್ತ್ರಿ

ಕಂಪ್ಲಿ: ಬಳ್ಳಾರಿಯ ಬಿಮ್ಸ್‌ನಲ್ಲಿ ನಡೆದ ಬಾಣಂತಿಯರ ಸರಣಿ ಸಾವು ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಮೃತರ ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾವು ನಮ್ಮ ಮನೆಯ ನಂದಾ ದೀಪ ಆರಿದೆ ಎಂದು ಕುಟುಂಬದವರು ದುಃಖಿಸುತ್ತಿದ್ದಾರೆ.

ತಾಲೂಕಿನ ಎಮ್ಮಿಗನೂರು ಗ್ರಾಮದ ಬ್ರಾಹ್ಮಣರ ಕ್ಯಾಂಪ್‌ನಲ್ಲಿನ ಸ್ಥಿತಿ ಇದು.

ಗರ್ಭಿಣಿಯರಿಗೆ ನೀಡುವ ಇಂಜೆಕ್ಷನ್‌ ಮಾಡಿಸಲು ಬಳ್ಳಾರಿಗೆ ತೆರಳಿದ್ದ ರೋಜಾಗೆ, ಹೆರಿಗೆಯ ದಿನಾಂಕಕ್ಕಿಂತಲೂ 20 ದಿನ ಮುಂಚೆಯೇ ವೈದ್ಯರು ಸೀಜರಿನ್ ಮಾಡಿಸಬೇಕು. ಇಲ್ಲದಿದ್ದಲ್ಲಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ. ಅದರಂತೆಯೇ ಸೀಜರಿನ್ ಮಾಡಲಿಕ್ಕೆ ಕುಟುಂಬದವರು ಒಪ್ಪಿದ್ದಾರೆ. ಆಪರೇಷನ್ ಬಳಿಕ ರೋಜಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಳಿಕ ಮೂತ್ರ ಪಿಂಡದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಗಮನಿಸದೆ ವೈದ್ಯರು ಆಕೆಯನ್ನು ನಾರ್ಮಲ್ ವಾರ್ಡ್‌ಗೆ ಶಿಫ್ಟ್ ಮಾಡಿದ್ದು ಆರೋಗ್ಯದಲ್ಲಿ ಏರುಪೇರು ಉಂಟಾದ ಬಳಿಕ ಐಸಿಯುಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ನನ್ನ ಹೆಂಡತಿ ಮೃತ ಪಟ್ಟಿದ್ದಾಳೆ. ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸ್ತೀವಿ, ಕಳಿಸಿ ಕೊಡಿ ಅಂದ್ರು ಕಳಿಸಲಿಲ್ಲ. ಎಲ್ಲ ರೀತಿಯಲ್ಲೂ ಆರೋಗ್ಯವಾಗಿದ್ದಾಕೆಗೆ ಸಿಜರಿನ್ ಬಳಿಕವೇ ಸಮಸ್ಯೆ ಕಾಣಿಸಿಕೊಂಡಿದೆ. ಇದಕ್ಕೆ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತ ಬಾಣಂತಿಯ ಪತಿ ಎಚ್. ರಾಜ ಆರೋಪಿಸಿದ್ದಾರೆ.

ಅಗಲಿದ ಪ್ರೇಮಿಗಳು:

ಈಚೆಗೆ ಸಾವಿಗೀಡಾದ ಬಾಣಂತಿ ರೋಜಾ ಹಾಗೂ ಎಚ್.ರಾಜ ದಂಪತಿ ನಾಲ್ಕು ವರ್ಷಗಳಿಂದ ಪ್ರೀತಿಸಿ ವಿವಾಹವಾಗಿದ್ದರು. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಪ್ರೇಮಿಗಳು ಸುಂದರ ಬದುಕು ಕಟ್ಟಿಕೊಂಡು, ಜೀವನ ಸಾಗಿಸುತ್ತಿದ್ದರು. ಮುದ್ದಾದ ಮಗುವಿನ ಆಗಮನದಿಂದ ಮತ್ತಷ್ಟು ಸಂತೋಷಗೊಂಡಿದ್ದ ದಂಪತಿ ಜೀವನಕ್ಕೆ ರೋಜಾ ಸಾವಿನಿಂದ ಸಿಡಿಲು ಬಡಿದಂತಾಗಿದೆ. ನ. 14ರಂದು ತನ್ನ ಹೆಂಡತಿ ಮೃತಪಟ್ಟಿದ್ದನ್ನು ಕೇಳಿ ಮರುದಿನವೇ ಪತಿ ಎಚ್.ರಾಜ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದ. ಬಳಿಕ ಆತನನ್ನ ಗಂಗಾವತಿಯಲ್ಲಿ ದಾಖಲಿಸಿದ್ದು ಗುಣ ಮುಖನಾಗಿದ್ದಾನೆ.

ದೊರಕದ ಪರಿಹಾರ, ಹುಸಿಯಾದ ಭರವಸೆ:

ಬಿಮ್ಸ್ ನಲ್ಲಿ ನಡೆದ ಬಾಣಂತಿಯರ ಸರಣಿ ಸಾವಿನ ಹಿನ್ನೆಲೆ ನ. 30 ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಜರುಗಿತ್ತು. ಸಭೆಯಲ್ಲಿ ಮೃತರ ಕುಟುಂಬದವರಿಗೆ ಸರ್ಕಾರದಿಂದ ₹2 ಲಕ್ಷ ಪರಿಹಾರ ಜೊತೆಗೆ, ರಿಂಗರ್ ಲೆಪ್ಟೇಟ್ ಪೂರೈಸಿದ ಸಂಸ್ಥೆಯಿಂದಲೂ ಪರಿಹಾರ ವಸೂಲಿ ಮಾಡಿ ಕುಟುಂಬಕ್ಕೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದರು. ಸಭೆ ಜರುಗಿ ಒಂದು ವಾರ ಕಳೆದರೂ ಮೃತರ ಕುಟುಂಬಕ್ಕೆ ಪರಿಹಾರ ದೊರಕಿಲ್ಲ. ಎಮ್ಮಿಗನೂರು ಮೂಲದ ಬಾಣಂತಿ ರೋಜಾ ಮೃತ ಪಟ್ಟು 20ಕ್ಕೂ ಹೆಚ್ಚು ದಿನ ಕಳೆದಿವೆ. ಆದರೂ ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಸ್ಥಳೀಯ ಶಾಸಕರಾಗಲಿ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಬದಲಿಗೆ ಆಸ್ಪತ್ರೆಗಾದರೂ ಭೇಟಿ ನೀಡುವ ಗೋಜಿಗೆ ಹೋಗದಿರುವುದು ದುರಂತವೇ ಸರಿ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಿ, ಸರ್ಕಾರಿ ಉದ್ಯೋಗ ನೀಡಬೇಕು ಎಂದು ಜೆಡಿಎಸ್ ಬಳ್ಳಾರಿ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಆಗ್ರಹಿಸಿದ್ದಾರೆ.