ಫೆ. 24-25 ಬನವಾಸಿಯ ಕದಂಬೋತ್ಸವ!

| Published : Jan 10 2024, 01:46 AM IST / Updated: Jan 10 2024, 01:12 PM IST

ಸಾರಾಂಶ

ಬನವಾಸಿಯ ಐತಿಹಾಸಿಕ ವೈಭವವನ್ನು ನಾಡಿಗೆ ಸಾರುವ ಕದಂಬೋತ್ಸವಕ್ಕೆ ಫೆ. ೨೪ ಮತ್ತು ೨೫ಕ್ಕೆ ಮುಹೂರ್ತ ಅಂತಿಮಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ದಿನಾಂಕ ನಿಗದಿಪಡಿಸಲಾಯಿತು.

ಶಿರಸಿ: ಬನವಾಸಿಯ ಐತಿಹಾಸಿಕ ವೈಭವವನ್ನು ನಾಡಿಗೆ ಸಾರುವ ಕದಂಬೋತ್ಸವಕ್ಕೆ ಫೆ. ೨೪ ಮತ್ತು ೨೫ಕ್ಕೆ ಮುಹೂರ್ತ ಅಂತಿಮಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ದಿನಾಂಕ ನಿಗದಿಪಡಿಸಲಾಯಿತು.

ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ರಾಜ್ಯದ ೭ ಉತ್ಸವ ಸರ್ಕಾರಿ ಸ್ವಾಮ್ಯದಲ್ಲೇ ನಡೆಯುತ್ತಿದೆ. ಅದರಲ್ಲಿ ಕದಂಬೋತ್ಸವ ಸಹ ಒಂದು. ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಕದಂಬೋತ್ಸವ ಆಚರಣೆ ನಿರ್ಧಾರ ತುಸು ವಿಳಂಬವಾದರೂ, ಬನವಾಸಿಯ ವೈಭವ ತಿಳಿಸುವ ಈ ಹಬ್ಬವನ್ನು ಆಚರಿಸುವ ನಿರ್ಧಾರ ಪಕ್ವಗೊಂಡಿದೆ. 

ಪಂಪ ಪ್ರಶಸ್ತಿ ಆಯ್ಕೆ ಕಲ್ಚರಲ್ ಕಮಿಟಿ ಇದೆ. ಪಂಪ ಪ್ರಶಸ್ತಿಯನ್ನು ಕದಂಬೋತ್ಸವ ವೇದಿಕೆಯಲ್ಲೇ ಈ ಬಾರಿಯೂ ನೀಡಲಿದ್ದೇವೆ ಎಂದರು.ಕೋವಿಡ್‌ ಕಾರಣದಿಂದ ಎರಡು ವರ್ಷ ಕದಂಬೋತ್ಸವ ಸ್ಥಗಿತವಾಗಿತ್ತಾದರೂ, ಕಳೆದ ವರ್ಷ ಆಚರಣೆ ಮಾಡಿ ಬಾಕಿ ಇದ್ದ ಪಂಪ ಪ್ರಶಸ್ತಿ ನೀಡಿದ್ದೇವೆ. 

ಸಿದ್ಧತೆಗೆ ಬೇಕಾಗುವ ಸಮಯ ಹಾಗೂ ವಿವಿಧ ಕಾರ್ಯಕ್ರಮಗಳ ಕಮಿಟಿ ರಚನೆ ಗಮನ ಇಟ್ಟುಕೊಂಡು ಫೆಬ್ರುವರಿ ಮೂರನೇ ವಾರದಲ್ಲಿ ಆಚರಣೆ ಮಾಡಬಹುದಾಗಿದೆ. 

ಅದಕ್ಕಿಂತ ಮುಂದಿನ ಸಮಯ ನಿರ್ಧರಿಸಿದರೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಾಗೂ ಶಾಲಾ ಪರೀಕ್ಷೆಗಳು ಆರಂಭಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷದ ಹಿರಿಯರು, ಅನುಭವಿಗಳ ಜತೆ ಚರ್ಚಿಸಿ ಕದಂಬೋತ್ಸವವನ್ನು ಉತ್ತಮವಾಗಿ ಆಚರಿಸೋಣ ಎಂದರು.

ತಹಸೀಲ್ದಾರ್ ಶ್ರೀಧರ ಮುಂದಲಮನಿ ಕದಂಬೋತ್ಸವ ಕುರಿತು ಮಾಹಿತಿ ನೀಡಿ, ೨೦೨೩ರಲ್ಲಿ ಕದಂಬೋತ್ಸವ ಆಚರಣೆಗಾಗಿ ಸರ್ಕಾರದಿಂದ ₹ ೯೯ ಲಕ್ಷ ಮಂಜೂರಾಗಿತ್ತು. ಅದರಲ್ಲಿ ಇನ್ನೂ ₹ ೫.೯೬ ಲಕ್ಷ ಹೆಚ್ಚಾದ ಹಣ ಹಾಗೆಯೇ ಇದೆ ಎಂದು ತಿಳಿಸಿದರು.

ಸ್ಥಳೀಯ ನಿವಾಸಿ ಸಿ.ಎಫ್. ನಾಯ್ಕ ಮಾತನಾಡಿ, ಗುಡ್ನಾಪುರದಿಂದ ಹೊರಡುವ ಕದಂಬ ಜ್ಯೋತಿ ನಾಲ್ಕು ಬೇರೆ ಜಿಲ್ಲೆಯಲ್ಲೂ ಸಂಚರಿಸುತ್ತದೆ. ಕದಂಬ ಜ್ಯೋತಿ ಬಗ್ಗೆ ಗುಡ್ನಾಪುರದ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚನೆ ಆಗಬೇಕು. ಕದಂಬೋತ್ಸವ ನಡೆಯುವ ವೇದಿಕೆಗೆ ಹೋಗುವ ಮಾರ್ಗ ಚಿಕ್ಕದಾಗಿದೆ. ಅದರ ಅಗಲೀಕರಣ ಆಗಬೇಕು ಎಂದು ಸಭೆಯ ಗಮನ ಸೆಳೆದರು.

ಶಿವಾಜಿ ಬನವಾಸಿ ಮಾತನಾಡಿ, ಕದಂಬೋತ್ಸವಕ್ಕೆ ಕಲಾ ತಂಡಗಳ ಆಯ್ಕೆ ಸೂಕ್ತವಾಗಿರದ ಕಾರಣ ಕದಂಬೋತ್ಸವ ಇತ್ತೀಚೆಗೆ ಕಳೆಗುಂದುತ್ತಿದೆ. ಈ ಬಾರಿ ಹಾಗಾಗದಂತೆ ಗಮನಹರಿಸಬೇಕು ಎಂದರು. ಜಿಪಂ ಮಾಜಿ ಸದಸ್ಯ ಬಸವರಾಜ ದೊಡ್ಮನಿ, ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಕ್ತ ಅನುದಾನ ಬಿಡುಗಡೆ ಆಗುತ್ತಿಲ್ಲ. ಸೂಕ್ತ ಅನುದಾನ ಒದಗಿಸಿ ಬನವಾಸಿ ಅಭಿವೃದ್ಧಿ ಮಾಡೋಣ ಎಂದರು.

ಬಳಿಕ ಮಾತನಾಡಿದ ಸಚಿವ ಮಂಕಾಳ ವೈದ್ಯ, ಎಲ್ಲ ಸೇರಿ ಪಕ್ಷಾತೀತವಾಗಿ ಕದಂಬೋತ್ಸವ ಆಚರಿಸೋಣ. ಯಾವುದೇ ಕಾರಣಕ್ಕೆ ಪಕ್ಷದ ಹೆಸರು ಬಂದರೆ ಜಿಲ್ಲೆ, ತಾಲೂಕಿನ ಹೆಸರು ಹಾಳಾಗುತ್ತದೆ. ಕದಂಬೋತ್ಸವ ಸಿದ್ಧತಾ ವೇಳೆಗೆ ಬನವಾಸಿಗೆ ಬಂದು ಹೋಗುತ್ತೇನೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬನವಾಸಿಯನ್ನೂ ಅಭಿವೃದ್ಧಿ ಮಾಡೋಣ. 

ಗೊಂದಲಕ್ಕೆ ಅವಕಾಶ ಮಾಡಬೇಡಿ. ಆದಷ್ಟು ಮಿತವಾಗಿ, ಎಲ್ಲರಿಗೂ ಗೌರವ ಸಿಗುವ ಹಾಗೆ, ಸಂಪ್ರದಾಯಕವಾಗಿ ಕದಂಬೋತ್ಸವ ಮಾಡೋಣ ಎಂದರು.ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಗಂಗೂಬಾಯಿ, ಉಪಬಿಭಾಗಾಧಿಕಾರಿ ಅಪರ್ಣಾ ರಮೇಶ ಇತರರಿದ್ದರು.